ಭಾರತೀಯ ಚಿತ್ರರಂಗದ ದಿಗ್ಗಜರಿಗೆ ಅಲ್ಲು ಸಿನಿಮಾಸ್ ಗೌರವ; ಕನ್ನಡದ ದಿಗ್ಗಜ ನಟನಿಗೆ ಸಿಗಲಿಲ್ಲ ಜಾಗ!
ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಕೆಲ ತಪ್ಪುಗಳು ಸಿನಿರಸಿಕರ ಬೇಸರಕ್ಕೆ ಕಾರಣವಾಗುತ್ತದೆ. ಸುಖಾಸುಮ್ಮನೆ ನಟರ ಅಭಿಮಾನಿಗಳ ನಡುವೆ ಕೆಸರೆರಚಾಟಕ್ಕೆ ವೇದಿಕೆ ಆಗುತ್ತಿದೆ. ಸೋಶಿಯಲ್ ಮೀಡಿಯಾ ಜಮಾನ ಶುರುವಾದ ಬಳಿಕ ಇದು ಮತ್ತಷ್ಟು ಹೆಚ್ಚಾಗ್ತಿದೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಹೈದರಾಬಾದ್‌ನಲ್ಲಿ ಅಲ್ಲು ಸಿನಿಮಾಸ್ ಹೆಸರಿನಲ್ಲಿ 4 ಸ್ಕ್ರೀನ್‌ಗಳ ಮಲ್ಟಿಪ್ಲೆಕ್ಸ್ ಉದ್ಘಾಟನೆ ಮಾಡಿದ್ದಾರೆ. ಕಾಂಪೆಕ್ಸ್ ಒಳಗಡೆ ಭಾರತೀಯ ಚಿತ್ರರಂಗದ ದಿಗ್ಗಜರಿಗೆ ಅಲ್ಲು ಸಿನಿಮಾಸ್ ಗೌರವ ಸಮರ್ಪಿಸಿದೆ.
ಅಲ್ಲು, ಮೆಗಾ ಫ್ಯಾಮಿಲಿ ಸ್ಟಾರ್‌ಗಳ ಫೋಟೊ ಗ್ಯಾಲರಿ, ಸ್ಟಾರ್ ನಿರ್ದೇಶಕ ವಾಲ್ ಫೋಟೊ ಗ್ಯಾಲರಿ ನಿರ್ಮಿಸಲಾಗಿದೆ. ಆ ಮೂಲಕ ಚಿತ್ರರಂಗದ ದಿಗ್ಗಜರಿಗೆ ಗೌರವ ಸಲ್ಲಿಸುವ ಪ್ರಯತ್ನ ಮಾಡಲಾಗಿದೆ. ಸಿನಿಮಾ ನೋಡಲು ಮಲ್ಟಿಪ್ಲೆಕ್ಸ್ ಒಳಗೆ ಬರುವವರು ಈ ಗ್ಯಾಲರಿಯನ್ನು ನೋಡಬಹುದು. ಅಲ್ಲೇ ಸ್ಟಾರ್ ನಟರ ಹೆಸರುಗಳನ್ನು ಒಂದು ಗೋಡೆ ಮೇಲೆ ಹಾಕಲಾಗಿದೆ. ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದ ಖ್ಯಾತ ನಟರ ಹೆಸರುಗಳು ಅದರಲ್ಲಿದೆ. ವಿಷ್ಣುವರ್ಧನ್, ಯಶ್, ಸುದೀಪ್ ಹೆಸರುಗಳು ರಾರಾಜಿಸುತ್ತಿದೆ. ಆದರೆ ಡಾ. ರಾಜ್‌ಕುಮಾರ್ ಹೆಸರು ಯಾಕಿಲ್ಲ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

ಸಣ್ಣ ಪುಟ್ಟ ನಟರ ಹೆಸರನ್ನು ಗೋಡೆ ಮೇಲೆ ಹಾಕಲಾಗಿದೆ. ಆದರೆ ಯಾವುದೇ ನಟಿಯರ ಹೆಸರುಗಳಿಲ್ಲ ಎನ್ನುವುದು ಕೆಲವರ ವಾದ. ಇದು ಬರೀ ನಟರ ಹೆಸರುಗಳಿಗೆ ಸೀಮಿತವಾದ ಜಾಗ.. ನಟಿಯರ ಹೆಸರುಗಳನ್ನು ಬೇರೆ ಕಡೆ ಹಾಕುತ್ತಾರೆ ಎಂದು ಕೆಲವರು ವಾದಿಸುತ್ತಿದ್ದಾರೆ. ಇದೆಲ್ಲದರ ನಡುವೆ ಕೆಲ ಸ್ಟಾರ್ ನಟರ ಹೆಸರುಗಳು ಕಾಣುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಮುಖ್ಯವಾಗಿ ಅಣ್ಣಾವ್ರ ಹೆಸರು ಯಾಕೆ ಹಾಕಿಲ್ಲ. ಯಾವ ಮಾನದಂಡದಲ್ಲಿ ಈ ಸ್ಟಾರ್ ನಟರ ಹೆಸರುಗಳನ್ನು ಮಾತ್ರ ಹಾಕಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ.
ಗೋಡೆಯ ಮೇಲ್ಭಾಗದಲ್ಲಿ ನಟಸಾರ್ವಭೌಮ ಎನ್‌ಟಿಆರ್, ಸೂಪರ್ ಸ್ಟಾರ್ ಕೃಷ್ಣ ಹಾಗೂ ಅಕ್ಕಿನೇನಿ ನಾಗೇಶ್ವರರಾವ್ ಹೆಸರುಗಳಿವೆ. ಬಳಿಕ ಚಿರಂಜೀವಿ ರಜನಿಕಾಂತ್, ಬಾಲಕೃಷ್ಣ, ಅಲ್ಲು ಅರ್ಜುನ್, ವಿಜಯ್, ತಾರಕ್, ರಾಮ್‌ಚರಣ್, ಕಮಲ್ ಹಾಸನ್, ಸಲ್ಮಾನ್ ಖಾನ್, ಪ್ರಭಾಸ್, ಯಶ್, ವಿಷ್ಣುವರ್ಧನ್, ಅನಿಲ್ ಕಪೂರ್, ಅಜಯ್ ದೇವಗನ್ ಹೀಗೆ ಹೆಸರುಗಳನ್ನು ಕೆಳಗಿನವರೆಗೆ ಹಾಕಿದ್ದಾರೆ. ಕೊನೆ ಕೊನೆಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿರುವ ರಾಜ್‌ಕುಮಾರ್ ರಾವ್, ನವೀನ್ ಪೊಲಿಶೆಟ್ಟಿ, ಸಂದೀಪ್ ಕಿಶನ್ ಹೆಸರುಗಳನ್ನು ಪಟ್ಟಿಯಲ್ಲಿ ನೋಡಬಹುದು.
ಕನ್ನಡದ ದಿಗ್ಗಜ ನಟ ಡಾ. ರಾಜ್‌ಕುಮಾರ್ ತೆಲುಗು ಮಂದಿಗೆ ಗೊತ್ತಿಲ್ವಾ? ಅಥವಾ ಬೇಕೇಂದೆ ಹೆಸರು ಹಾಕಲಿಲ್ಲವೇ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಜಯ್ ದೇವಗನ್ ಹೆಸರು ಎರಡೆರಡು ಸಲ ಹಾಕಿದ್ದಾರೆ. ವಿಜಯ್ ಸೇತುಪತಿ ಸೇರಿದಂತೆ ಕೆಲ ಪ್ರಮುಖ ನಟರ ಹೆಸರುಗಳನ್ನು ಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ತಮ್ಮಗಿಷ್ಟ ಬಂದವರ ಹೆಸರನ್ನು ಇಷ್ಟಬಂದಂತೆ ಹಾಕಿಕೊಂಡಿದ್ದಾರೆ ಎಂದು ಕೆಲವರು ಬೇಸರ ತೋಡಿಕಳ್ಳುತ್ತಿದ್ದಾರೆ.
ಕನ್ನಡ ಚಿತ್ರರಂಗದಿಂದ ರಿಷಬ್ ಶೆಟ್ಟಿ, ಯಶ್, ರವಿಚಂದ್ರನ್, ಶಿವರಾಜ್‌ಕುಮಾರ್, ಉಪೇಂದ್ರ, ವಿಷ್ಣುವರ್ಧನ್, ಸುದೀಪ್ ಹೆಸರುಗಳನ್ನು ಅಲ್ಲು ಸಿನಿಮಾಸ್ ಸ್ಟಾರ್ ವಾಲ್‌ನಲ್ಲಿ ನೋಡಬಹುದಾಗಿದೆ. ಬಹುಕೋಟಿ ವೆಚ್ಚದಲ್ಲಿ ಅಲ್ಲು ಫ್ಯಾಮಿಲಿ ಈ ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್ ನಿರ್ಮಿಸಿದೆ. ಎರಡು ದಿನಗಳ ಹಿಂದೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಈ ಮಲ್ಟಿಪ್ಲೆಕ್ಸ್ ಉದ್ಘಾಟನೆ ಮಾಡಿದ್ದರು.
700 ಆಸನಗಳ ಅತಿದೊಡ್ಡ ಡಾಲ್ಬಿ ಸ್ಕ್ರೀನ್ ಕೂಡ ಈ ಮಲ್ಟಿಪ್ಲೆಕ್ಸ್‌ನಲ್ಲಿದೆ. ಇನ್ನುಳಿದಂತೆ 3 ಸ್ಕ್ರೀನ್‌ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವಿದೆ. ಪ್ರೇಕ್ಷಕರಿಗೆ ಸಿನಿಮಾ ನೋಡುವ ಅದ್ಭುತ ಅನುಭವ ನೀಡುತ್ತದೆ. ಹೈದರಾಬಾದ್‌ನಲ್ಲಿ ಸುಸಜ್ಜಿತ ಮಲ್ಟಿಪ್ಲೆಕ್ಸ್ ನಿರ್ಮಾಣದ ಅಲ್ಲು ಅರ್ಜುನ್ ಕನಸು ನನಸಾಗಿದೆ. ಚಿತ್ರರಂಗದಿಂದ ಸಾಕಷ್ಟು ಪಡೆದಿದ್ದೇವೆ, ಏನಾದರೂ ಮರಳಿ ಕೊಡಬೇಕು ಎನ್ನುವ ಕಾರಣಕ್ಕೆ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಿದ್ದಾಗಿ ಅಲ್ಲು ಅರ್ಜುನ್ ಹೇಳಿದ್ದಾರೆ. ಮುಂದಿನ ವಾರ 'ಧುರಂಧರ್- 2' ಹಾಗೂ 'ಉಸ್ತಾದ್ ಭಗತ್ ಸಿಂಗ್' ಸಿನಿಮಾಗಳು ತೆರೆಗಪ್ಪಳಿಸುತ್ತಿದೆ. ಈ ಸಿನಿಮಾಗಳ ಮೂಲಕ ಅಲ್ಲು ಸಿನಿಮಾಸ್ ಶುಭಾರಂಭ ಮಾಡಲಿದೆ.


Click it and Unblock the Notifications











