ತೆಲುಗು ನಟರಾದ ವಿಕ್ಟರಿ ವೆಂಕಟೇಶ್, ರಾಣಾ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು
ಟಾಲಿವುಡ್ ದಗ್ಗುಬಾಟಿ ಕುಟುಂಬ ಸದಸ್ಯರಿಗೆ ಶಾಕ್ ಎದುರಾಗಿದೆ. ಹೈದರಾಬಾದ್‌ನ ಫಿಲ್ಮ್ ನಗರದಲ್ಲಿರುವ ಡೆಕ್ಕನ್ ಕಿಚನ್ ಹೋಟೆಲ್ ಕೆಡವಿದ ಪ್ರಕರಣದಲ್ಲಿ ನಿರ್ಮಾಪಕ ದಗ್ಗುಬಾಟಿ ಸುರೇಶ್, ನಟ ದಗ್ಗುಬಾಟಿ ವೆಂಕಟೇಶ್, ನಟ ದಗ್ಗುಬಾಟಿ ರಾಣಾ ಹಾಗೂ ಸಹೋದರ ದಗ್ಗುಬಾಟಿ ಅಭಿರಾಮ್‌ಗೆ ಸಂಕಷ್ಟ ಎದುರಾಗಿದೆ. ಈ ನಾಲ್ವರ ವಿರುದ್ಧ ಸೆಕ್ಷನ್ 448, 452, 458 ಹಾಗೂ 120B ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಫಿಲ್ಮ್‌ನಗರದಲ್ಲಿ ದಗ್ಗುಬಾಟಿ ಕುಟುಂಬಕ್ಕೆ ಸೇರಿದ ನಿವೇಶನವಿದೆ. ಅದನ್ನು ನಂದಕುಮಾರ್ ಎಂಬುವವರಿಗೆ ಗುತ್ತಿಗೆಗೆ ನೀಡಿದ್ದರು. ನಂದಕುಮಾರ್ ಹೆಸರು ತೆಲಂಗಾಣ ಶಾಸಕರ ಖರೀದಿ ಪ್ರಕರಣದಲ್ಲಿ ಕೇಳಿಬಂದಿತ್ತು. ಗುತ್ತಿಗೆಗೆ ಪಡೆದ ಜಾಗದಲ್ಲಿ ಡೆಕ್ಕನ್ ಕಿಚನ್ ಹೆಸರಿನ ಹೋಟೆಲ್ ಅನ್ನು ನಂದಕುಮಾರ್ ಹೊಂದಿದ್ದರು. ಆದರೆ ಗುತ್ತಿಗೆ ವಿಚಾರದಲ್ಲಿ ನಂದಕುಮಾರ್ ಹಾಗೂ ದಗ್ಗುಬಾಟಿ ಕುಟುಂಬಕ್ಕೆ ವಿವಾದ ಶುರುವಾಗಿತ್ತು. ನಂದಕುಮಾರ್ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದರು.

2022 ನವೆಂಬರ್‌ನಲ್ಲಿ ಜಿಎಚ್‌ಎಂಸಿ ಸಿಬ್ಬಂದಿ ಮತ್ತು ಬೌನ್ಸರ್‌ಗಳು ಹೋಟೆಲ್‌ನ ಒಂದು ಭಾಗವನ್ನು ಕೆಡವಿದ್ದರು. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಆದೇಶಗಳನ್ನು ಹೊರಡಿಸಿತ್ತು. ಆದರೆ ಅದನ್ನು ಉಲ್ಲಂಘಿಸಿ ದಗ್ಗುಬಾಟಿ ಕುಟುಂಬ ಕಳೆದ ವರ್ಷ ಜನವರಿಯಲ್ಲಿ ಡೆಕ್ಕನ್ ಕಿಚನ್ ಹೋಟೆಲ್ ಅನ್ನು ಸಂಪೂರ್ಣವಾಗಿ ಕೆಡವಿತ್ತು. ಹಾಗಾಗಿ ನಂದಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಲು ಕೋರಿ ನಾಂಪಲ್ಲಿ ನ್ಯಾಯಾಲಯವನ್ನು ಆಶ್ರಯಿಸಿದ್ದರು. ಶನಿವಾರ(ಜನವರಿ 11) ದಗ್ಗುಬಾಟಿ ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ ನೀಡಿತ್ತು.
ಗುತ್ತಿಗೆ ವಿಚಾರದಲ್ಲಿ ನ್ಯಾಯಾಲಯ ತಮ್ಮ ಪರ ಆದೇಶ ನೀಡಿದ್ದರೂ ಅದನ್ನು ಮೀರಿ ಹೋಟೆಲ್ ಧ್ವಂಸ ಮಾಡಲಾಗಿದೆ. ಅದಕ್ಕಾಗಿ 20 ಕೋಟಿ ರೂ. ನಷ್ಟ ಪರಿಹಾರ ನೀಡಬೇಕು ಹಾಗೂ ಆಪಾದಿತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಂದಕುಮಾರ್ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಫಿಲ್ಮ್ ನಗರ್ ಪೊಲೀಸರು ಇದೀಗ ಸುರೇಶ್ ಬಾಬು, ವೆಂಕಟೇಶ್, ರಾಣಾ, ಅಭಿರಾಮ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಶೀಘ್ರದಲ್ಲೇ ನೋಟಿಸ್ ನೀಡಿ ವಿಚಾರಣೆ ಕರೆಸುವ ಸಾಧ್ಯತೆಯಿದೆ.
ಪ್ರಕರಣದಲ್ಲಿ ನಟ ವೆಂಕಟೇಶ್ ಸಹೋದರ ಸುರೇಶ್ ಬಾಬು A1 ಆಗಿದ್ದಾರೆ. ಅವರ ಪುತ್ರರಾದ ರಾಣಾ A3, ಅಭಿರಾಮ್ A4 ಹಾಗೂ ವೆಂಕಟೇಶ್ A2 ಆರೋಪಿಗಳಾಗಿದ್ದಾರೆ. ವೆಂಕಟೇಶ್ ನಟನೆಯ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಸುಗ್ಗಿ ಸಂಭ್ರಮದಲ್ಲಿ ನಾಳೆ(ಜನವರಿ 14) ಬಿಡುಗಡೆ ಆಗಲಿದೆ.


Click it and Unblock the Notifications











