'ಪುಷ್ಪ' ಪ್ರೀ ರಿಲೀಸ್ ವೇದಿಕೆಯಲ್ಲಿ ಗಮನ ಸೆಳೆದ ಡಾಲಿ ಧನಂಜಯ್ ಭಾಷಣ
ನಿನ್ನೆ (ಡಿಸೆಂಬರ್ 12) ಹೈದರಾಬಾದ್‌ನಲ್ಲಿ ತೆಲುಗಿನ ಬಿಗ್ ಬಜೆಟ್ ಸಿನಿಮಾ 'ಪುಷ್ಪ'ದ ಪ್ರೀ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾದಲ್ಲಿ ಕನ್ನಡದ ಪ್ರತಿಭೆ ಡಾಲಿ ಧನಂಜಯ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಿನಿಮಾ ಇದೇ ಡಿಸೆಂಬರ್ 17ಕ್ಕೆ ತೆರೆಗೆ ಬರಲಿದೆ.
ನಿನ್ನೆ ನಡೆದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಸಿನಿಮಾದಲ್ಲಿ ನಟಿಸಿರುವ ಪಾತ್ರಧಾರಿಗಳು, ತಂತ್ರಜ್ಞರು ಒಟ್ಟಾಗಿ ವೇದಿಕೆಯಲ್ಲಿ ಸಿನಿಮಾದ ಬಗ್ಗೆ ತಮ್ಮ-ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅತಿಥಿಯಾಗಿ ಆಗಮಿಸಿದ್ದ ನಿರ್ದೇಶಕ ರಾಜಮೌಳಿ ಸಹ ಸಿನಿಮಾಕ್ಕೆ ಶುಭ ಹಾರೈಸಿದರು.
ತೆಲುಗು ಸಿನಿಮಾಗಳಂತೆಯೇ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಗಳು ಸಹ ಬಹಳ ರೋಷಾ ವೇಷದಿಂದ ಅಥವಾ ತೀರ ಭಾವುಕತನದಿಂದ, ಸಿನಿಕತನದಿಂದ ಕೂಡಿರುತ್ತವೆ. ನಿನ್ನೆಯ ಕಾರ್ಯಕ್ರಮವೂ ತುಸು ಹಾಗೆಯೇ ಇತ್ತು. ಆದರೆ ನಟ ಡಾಲಿ ಧನಂಜಯ್ ಮಾತುಗಳು ಸರಳವಾಗಿ, ಹಿತವಾಗಿ-ಮಿತವಾಗಿ ಇದ್ದ ಕಾರಣದಿಂದ ಹೆಚ್ಚು ಗಮನ ಸೆಳೆದವು.
'ಎಲ್ಲರಿಗೂ ನಮಸ್ಕಾರ' ಎಂದು ಕನ್ನಡದಲ್ಲಿ ಭಾಷಣ ಆರಂಭಸಿದ ಡಾಲಿ ಧನಂಜಯ್, ನಂತರ ತೆಲುಗಿನಲ್ಲಿ ಒಂದೆರಡು ಮಾತುಗಳನ್ನು ಆಡಿದರು. ವೇದಿಕೆ ಏರಿದವರೆಲ್ಲ ನಾಯಕ ನಟ ಅಲ್ಲು ಅರ್ಜುನ್ ಅನ್ನು ಪುಂಖಾನುಪುಂಖವಾಗಿ ಹೊಗಳುತ್ತಿದ್ದರು. ಆದರೆ ಡಾಲಿ ಸುಕುಮಾರ್ ಅವರ ಶ್ರಮವನ್ನು ಗುರುತಿಸಿ ಅವರೊಟ್ಟಿಗೆ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಸಂತೋಶ ವ್ಯಕ್ತಪಡಿಸಿದರು.

ಸೆಟ್‌ಗೆ ಬಂದಾಗ ಬನ್ನಿ ಎಲ್ಲಿ ಎಂದು ಹುಡುಕುತ್ತಿದ್ದೆ: ಡಾಲಿ
''ನಾನು ಸೆಟ್‌ಗೆ ಬಂದಾಗಲೆಲ್ಲ ಬನ್ನಿ ಎಲ್ಲಿದ್ದಾರೆ ಎಂದು ಹುಡುಕುತ್ತಿದ್ದೆ. ಆದರೆ ನನನಗೆ ಬನ್ನಿ ಕಾಣುತ್ತಿರಲಿಲ್ಲ ನನಗೆ ಕಾಣುತ್ತಿದ್ದಿದ್ದು 'ಪುಷ್ಪ' ಅವರು ಅಷ್ಟರ ಮಟ್ಟಿಗೆ ಆ ಪಾತ್ರದಲ್ಲಿ ಲೀನರಾಗಿಬಿಟ್ಟಿರುತ್ತಿದ್ದರು. ಮತ್ತೊಂದೆಡೆ ಸುಕುಮಾರ್ 'ಪುಷ್ಪ'ನ ಪ್ರಪಂಚ ಸೃಷ್ಟಿಸುವಲ್ಲಿ ಮುಳುಗಿ ಹೋಗಿರುತ್ತಿದ್ದರು. ಈ ಸಿನಿಮಾದಲ್ಲಿ ನಟಿಸಿದ್ದು ನನಗೆ ಹೊಸದೊಂದು ಅನುಭವ'' ಎಂದರು ಡಾಲಿ.

ಕನ್ನಡದಲ್ಲಿಯೂ ಸಿನಿಮಾ ಬರ್ತಿದೆ ಎಂದ ಡಾಲಿ
''ನನಗೆ ಈ ಸಿನಿಮಾದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟ ಮೈತ್ರಿ ಮೂವೀಸ್‌ಗೆ ಧನ್ಯವಾದ'' ಎಂದ ಡಾಲಿ, ''ಸಿನಿಮಾದಲ್ಲಿ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ನಮ್ಮ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ಸಹ ಬಹಳ ಮುದ್ದು ಮುದ್ದಾಗಿ ಸಿನಿಮಾದಲ್ಲಿದ್ದಾರೆ. ಚೆನ್ನಾಗಿ ನಟಿಸಿದ್ದಾರೆ'' ಎಂದರು. ಧನಂಜಯ್ ರಶ್ಮಿಕಾರ ಹೆಸರು ಹೇಳುತ್ತಿದ್ದಂತೆ, ಜೋರಾಗಿ ನಗುತ್ತಾ, ಕೈ ಬೀಸಿದರು ರಶ್ಮಿಕಾ. ನಂತರ, ''ಪುಷ್ಪ ಅಂದರೆ ಫ್ಲವರ್ ಅಲ್ಲ ಫೈರ್'' ಎಂದು ಡೈಲಾಗ್ ಹೊಡೆದ ಡಾಲಿ, ''ಪುಷ್ಪ' ಸಿನಿಮಾ ಕನ್ನಡದಲ್ಲಿಯೂ ತೆರೆಗೆ ಬರುತ್ತಿದೆ. ದಯವಿಟ್ಟು ಎಲ್ಲರೂ ಸಿನಿಮಾವನ್ನು ನೋಡಿ'' ಎಂದು ಮನವಿ ಮಾಡಿದರು.

ಜಾಲಿ ರೆಡ್ಡಿ ಪಾತ್ರದಲ್ಲಿ ಡಾಲಿ
ಡಾಲಿ ಧನಂಜಯ್, 'ಪುಷ್ಪ' ಸಿನಿಮಾದಲ್ಲಿ ಜಾಲಿ ರೆಡ್ಡಿ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಋಣಾತ್ಮಕ ಪಾತ್ರ ಅವರದ್ದಾಗಿದ್ದು, ಸಿನಿಮಾದ ಟ್ರೇಲರ್‌ನಲ್ಲಿ ಅಲ್ಲು ಅರ್ಜುನ್ ಜೊತೆ ಫೈಟ್ ಮಾಡುತ್ತಿರುವ ದೃಶ್ಯದಲ್ಲಿ ಡಾಲಿ ಕಾಣಿಸಿಕೊಂಡಿದ್ದಾರೆ. ಡಾಲಿ ನಟಿಸಿದ್ದ ತೆಲುಗು ಸಿನಿಮಾ 'ಭೈರವಗೀತ' ನೋಡಿದ್ದ ಸುಕುಮಾರ್, ಡಾಲಿಯ ನಟನೆ ಇಷ್ಟವಾಗಿ ಅವರನ್ನು ಜಾಲಿ ರೆಡ್ಡಿ ಪಾತ್ರಕ್ಕೆ ಆಯ್ಕೆ ಮಾಡಿದ್ದರಂತೆ.

ಡಿಸೆಂಬರ್ 17 ಕ್ಕೆ ಸಿನಿಮಾ ಬಿಡುಗಡೆ
'ಪುಷ್ಪ', ರಕ್ತ ಚಂದನ ಕಳ್ಳಸಾಗಣೆ ಕುರಿತ ಕತೆಯುಳ್ಳ ಸಿನಿಮಾ ಆಗಿದ್ದು, ಇದೇ ಡಿಸೆಂಬರ್ 17ಕ್ಕೆ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ತಮಿಳು ಭಾಷೆಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಹಾಸ್ಯನಟ ಸುನಿಲ್, ಮುಖ್ಯ ವಿಲನ್ ಪಾತ್ರದಲ್ಲಿ ಮಲಯಾಳಂನ ಫಹಾದ್ ಫಾಸಿಲ್ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಸುಕುಮಾರ್, ನಿರ್ಮಾಣ ಮೈತ್ರಿ ಮೂವೀಸ್ ಅವರದ್ದು, ಸಂಗೀತ ದೇವಿಶ್ರೀ ಪ್ರಸಾದ್.


Click it and Unblock the Notifications











