'ಸಲಾರ್' ಲುಕ್ ಗೆ ಅಭಿಮಾನಿಗಳು ಫಿದಾ, 'ಕೆಜಿಎಫ್' ಜೊತೆ ಹೋಲಿಕೆ
'ಕೆಜಿಎಫ್-2' ಚಿತ್ರ ದಿನೇ ದಿನೇ ಹೊಸ ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡು ಮುನ್ನುಗ್ಗುತ್ತಿದೆ. ಪ್ರಶಾಂತ್ ನೀಲ್ ಅವರ ಮುಂದಿನ ಚಿತ್ರಗಳ ಬಗ್ಗೆ ಕೂಡ ನಾನಾ ತರದ ಚರ್ಚೆಗಳು ನಡೆಯುತ್ತಿದೆ. ನಿರ್ದೇಶಿಸಿದ ಕೇವಲ ಮೂರೇ ಮೂರು ಚಿತ್ರಗಳಿಂದ ಪ್ರಶಾಂತ್ ನೀಲ್ ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿ ಹೊರಹೊಮ್ಮಿದ್ದಾರೆ. ಹೀಗಾಗಿ ಸಹಜವಾಗಿಯೇ ಮುಂದಿನ ಪ್ರಶಾಂತ್ ನೀಲ್ ಚಿತ್ರಗಳ ಬಗ್ಗೆ ವಿಶೇಷವಾದ ಆಸಕ್ತಿ ಮತ್ತು ಚರ್ಚೆಗಳು ಸಿನಿಮಾ ವಲಯದಲ್ಲಿ ನಡೆಯುತ್ತಿರುತ್ತದೆ. ಹೀಗಾಗಿಯೇ 'ಕೆಜಿಎಫ್ -3" ಚಿತ್ರದ ಬಗ್ಗೆ ಕೂಡ ಸಾಕಷ್ಟು ಊಹಾಪೋಹಗಳು ಎದ್ದಿತ್ತು. 'ಕೆಜಿಎಫ್ -3' ಬರಲಿದೆ ಆದರೆ ಸದ್ಯಕ್ಕೆ ಅಲ್ಲ ಅಂತ ಹಿಂದೆಯೇ ಪ್ರಶಾಂತ್ ನೀಲ್ ಸ್ಪಷ್ಟಪಡಿಸಿದ್ದರು.
Recommended Video

ಇನ್ನೊಂದೆಡೆ ರಾಕಿಂಗ್ ಸ್ಟಾರ್ ಯಶ್ ಕೂಡ ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಗುಟ್ಟನ್ನು ಬಿಟ್ಟು ಕೊಡುತ್ತಿಲ್ಲ. ಯಶ್ ಅವರ ಮುಂದಿನ ಚಿತ್ರ ನರ್ತನ್ ನಿರ್ದೇಶನ ಮಾಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ನರ್ತನ್ 'ಮಫ್ತಿ' ಚಿತ್ರದ ನಂತರ ಬೇರೆ ಯಾವುದೇ ಪ್ರಾಜೆಕ್ಟನ್ನು ಕೈಗೆತ್ತಿಕೊಂಡಿಲ್ಲ. ಅವರ ಮುಂದಿನ ಚಿತ್ರಕ್ಕಾಗಿ ದೊಡ್ಡಮಟ್ಟದ ಪ್ಲಾನಿಂಗ್ ನರ್ತನ್ ಮಾಡುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಇತ್ತ ಹೊಂಬಾಳೆ ಫಿಲಂಸ್ ಕೂಡ ಸಾಕಷ್ಟು ಚಿತ್ರಗಳನ್ನು ಪ್ರಸ್ತುತ ನಿರ್ಮಾಣ ಮಾಡುತ್ತಿದೆ. ಅತ್ತ ಪ್ರಶಾಂತ್ ನೀಲ್ ಕೂಡ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ಇದರ ಮಧ್ಯೆ 'ಕೆಜಿಎಫ್-3' ಚಿತ್ರದ ಬಗ್ಗೆ ನಾನಾ ತರದ ಗಾಳಿ ಸುದ್ದಿಗಳು ಹರಿದಾಡಿದ್ದು ಕೊನೆಗೆ ಹೊಂಬಾಳೆ ಫಿಲಂಸ್ ಕಡೆಯಿಂದ ಸ್ಪಷ್ಟೀಕರಣ ಕೂಡ ಬಂದಿದೆ.
'ಸಲಾರ್' ಚಿತ್ರೀಕರಣದಲ್ಲಿ ಪ್ರಶಾಂತ್ ನೀಲ್
ಪ್ರಶಾಂತ್ ನೀಲ್ ಪ್ರಸ್ತುತ ಪ್ರಭಾಸ್ ಅಭಿನಯದ 'ಸಲಾರ್' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಶೇ 35 ರಷ್ಟು ಚಿತ್ರೀಕರಣ ಮುಗಿದಿದೆ. ಸ್ಟಾರ್ ಹೀರೋಗಳ ಸಿನಿಮಾ ಬಿಡುಗಡೆಗೂ ಮುನ್ನವೇ ನಿರ್ಮಾಪಕರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಚಿತ್ರಕ್ಕೆ ಸಂಬಂಧಿಸಿದ ಒಂದಷ್ಟು ಫೋಟೋಗಳ ಲೀಕ್. ಎಷ್ಟೇ ಗೋಪ್ಯತೆಯನ್ನು ಕಾಪಾಡಿಕೊಂಡರು ಸ್ಟಾರ್ ಹೀರೋಗಳ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಇತ್ತೀಚಿನ 'ಸಲಾರ್' ಸ್ಟಾರ್ ಪ್ರಭಾಸ್ ಲುಕ್‌ನ ಚಿತ್ರವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಪ್ರಭಾಸ್ ಕೂಡ ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಯಶ್ ಗಡ್ಡದಂತಿದೆ ಎನ್ನುತ್ತಿದ್ದಾರೆ ಪ್ರಭಾಸ್ ಫ್ಯಾನ್ಸ್
'ಸಲಾರ್' ಚಿತ್ರದ ಹೊಸ ಲುಕ್ ನೋಡಿ ಪ್ರಭಾಸ್ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. 'ಕೆಜಿಎಫ್' ಸರಣಿಯಲ್ಲಿ ಯಶ್ ಗಡ್ಡಧಾರಿಯಾಗಿ ಸಾಕಷ್ಟು ಸ್ಟೈಲಿಶ್ ಆದ ರಗಡ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಡಾರ್ಲಿಂಗ್ ಅಭಿಮಾನಿಗಳು ಕೂಡ ಅಂತಹದೇ ಒಂದು ಲುಕ್ ಪ್ರಭಾಸ್ ಅವರಲ್ಲಿ ಕಂಡು 'ಲುಕ್ ಸಕ್ಕತ್ ಕಿಕ್ ಕೊಡುತ್ತಿದೆ' ಅಂತಿದ್ದಾರೆ. ಕೆಜಿಎಫ್ ಸರಣಿಯಂತೆ 'ಸಲಾರ್ 'ಕೂಡ ದೊಡ್ಡ ಯಶಸ್ಸು ಕಾಣುತ್ತದೆ ಎಂಬ ನಿರೀಕ್ಷೆಯಲ್ಲಿ ಡಾರ್ಲಿಂಗ್ ಅಭಿಮಾನಿಗಳಿದ್ದಾರೆ.

ಮುಂದಿನ ಸಮ್ಮರ್ ಗೆ ಚಿತ್ರ ಬಿಡುಗಡೆ
ಇನ್ನು 'ಸಲಾರ್' ಚಿತ್ರದ ವಿಚಾರಕ್ಕೆ ಬರುವುದಾದರೆ ಚಿತ್ರದ ಶೇ 35 ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಚಿತ್ರೀಕರಣ ಮುಗಿಸುವ ಪ್ಲಾನಿಂಗ್ ನಲ್ಲಿ ಚಿತ್ರತಂಡ ಇದೆಯಂತೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಪೂರ್ಣಗೊಳಿಸಿಕೊಂಡು ಏಪ್ರಿಲ್ ತಿಂಗಳಿನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಈಗಾಗಲೇ ಚಿತ್ರತಂಡ ನಿರ್ಧರಿಸಿದೆ ಅಂತ ಹೊಂಬಾಳೆ ಕಡೆಯಿಂದ ಹೊರ ಬಂದಿರುವ ಸುದ್ದಿ.

ಸಂಕ್ರಾಂತಿಗೆ ಆದಿಪುರುಷ್ ಬಿಡುಗಡೆ!
ಪ್ರಭಾಸ್ 'ಸಲಾರ್' ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ, ಅದೇ ಆದಿಪುರುಷ್. 'ತಾನಾಜಿ' ನಿರ್ದೇಶಕ ಓಂ ರಾವತ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಪ್ರಸ್ತುತ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಪ್ರಭಾಸ್ ಅಭಿನಯದ ಹಿಂದಿನ ಎರಡು ಪ್ಯಾನ್ ಇಂಡಿಯಾ ಮೂವೀಸ್ 'ಸಾಹೋ' ಮತ್ತು 'ರಾಧೆ ಶ್ಯಾಮ್' ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸಿಲ್ಲ. ಹೀಗಾಗಿಯೇ ಪ್ರಭಾಸ್ ಅಭಿಮಾನಿಗಳು ಸಲ ಮತ್ತು ಆದಿಪುರುಷ್ ಚಿತ್ರಗಳಿಗಾಗಿ ಕಾತರದಿಂದ ಎದುರು ನೋಡುತ್ತಿದ್ದಾರೆ.

ಪ್ರಭಾಸ್ ಕೈಯಲ್ಲಿದೆ ಮತ್ತಷ್ಟು ಚಿತ್ರಗಳು
'ಆದಿಪುರುಷ್' ಚಿತ್ರೀಕರಣವನ್ನು ಮುಗಿಸಿರುವ ಪ್ರಭಾಸ್ ಪ್ರಸ್ತುತ 'ಸಲಾರ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವೆರಡು ಚಿತ್ರಗಳು ಹೊರತಾಗಿ ಕೂಡ ಮತ್ತೊಂದಷ್ಟು ಚಿತ್ರಗಳಲ್ಲಿ ಕೂಡ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಪ್ಯಾನ್ ವರ್ಡ್ ಸಿನಿಮಾ ಅಂತಲೇ ಹೇಳಲಾಗುತ್ತಿರುವ 'ಪ್ರಾಜೆಕ್ಟ್- ಕೆ' ಚಿತ್ರದ 2 ಶೆಡ್ಯೂಲ್ ಗಳನ್ನು ಮುಗಿಸಿದ್ದಾರೆ. ಈ ಎಲ್ಲಾ ಚಿತ್ರಗಳ ನಂತರ ಸಂದೀಪ ರೆಡ್ಡಿ ವಂಗ ನಿರ್ದೇಶನದ 'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ತೊಡಗಿಸಿಕೊಳ್ಳಲಿದ್ದಾರೆ.


Click it and Unblock the Notifications











