6 ದಿನಕ್ಕೆ 'ದಸರಾ' ಕಲೆಕ್ಷನ್ ₹100 ಕೋಟಿ: ನಿರ್ದೇಶಕನಿಗೆ BMW ಕಾರ್, ತಂಡಕ್ಕೆ ಚಿನ್ನದ ನಾಣ್ಯ
ದಕ್ಷಿಣ ಭಾರತದ ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ನಾನಿ ನಟನೆಯ 'ದಸರಾ' ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೆದು ಧೂಳೆಬ್ಬಿಸಿದೆ. ಸಿನಿಮಾ ಸಕ್ಸಸ್‌ನಿಂದ ಖುಷಿಯಾಗಿರುವ ನಿರ್ಮಾಪಕರು ಚಿತ್ರತಂಡಕ್ಕೆ ಉಡುಗೊರೆ ನೀಡಿದ್ದಾರೆ. ಸಿನಿಮಾ ಸಕ್ಸಸ್ ಸಂಭ್ರಮವನ್ನು ತಂಡದ ಜೊತೆ ಹಂಚಿಕೊಂಡಿದ್ದಾರೆ.
ನಾನಿ, ಕೀರ್ತಿ ಸುರೇಶ್ ನಟನೆಯ ಮಾಸ್ ಮಸಾಲ ಎಂಟರ್‌ಟೈನರ್ ಸಿನಿಮಾ ಮಾಸ್ ಪ್ರೇಕ್ಷಕರ ಮನಗೆದ್ದಿದೆ. ಮಾಸ್ ಲುಕ್, ತೆಲಂಗಾಣ ಶೈಲಿಯ ಡೈಲಾಗ್ಸ್‌ನಿಂದ ನಾನಿ ಗಮನ ಸೆಳೆದಿದ್ದಾರೆ. ರಾಜಮೌಳಿ, ಮಹೇಶ್ ಬಾಬು ಸೇರಿದಂತೆ ಗಣ್ಯರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ಕನ್ನಡ ನಟ ದೀಕ್ಷಿತ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಸೈನ್ ಟಾಮ್, ಸಮುದ್ರ ಖನಿ, ಸಾಯಿ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಯಾವುದೇ ಸಿನಿಮಾ ಸಕ್ಸಸ್ ಆದರೂ ಸಂಭಾವನೆ ಬಿಟ್ಟು ಚಿತ್ರಕ್ಕಾಗಿ ಕೆಲಸ ಮಾಡಿದವರಿಗೆ ನಿರ್ಮಾಪಕರು ಲಾಭದಲ್ಲಿ ಪಾಲು ಕೊಡುವುದಿಲ್ಲ. ಕೆಲ ನಿರ್ಮಾಪಕರು ಮಾತ್ರ ಇದಕ್ಕೆ ಭಿನ್ನ ಎನ್ನುವಂತೆ ಸಕ್ಸಸ್ ಸಂತಸವನ್ನು ತಂಡದ ಜೊತೆ ಹಂಚಿಕೊಳ್ಳುತ್ತಾರೆ. ಇದೀಗ ದಸರಾ ಸಿನಿಮಾ ನಿರ್ಮಾಪಕರಾದ ಸುಧಾಕರ್ ಚೆರುಕುರಿ ತಂಡದ ಸದಸ್ಯರಿಗೆ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ನಿರ್ದೇಶಕ ಶ್ರೀಕಾಂತ್ ಒದೆಲಗೆ 80 ಲಕ್ಷ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದರು.
ಸುಧಾಕರ್ ಚೆರುಕುರಿ ನಿರ್ಮಾಣದ ಸಿನಿಮಾಗಳು ಈ ಹಿಂದೆ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ ದಸರಾ ಸಿನಿಮಾ ಬಿಡುಗಡೆಯಾದ 6 ದಿನಕ್ಕೆ ವರ್ಲ್ಡ್ ವೈಡ್ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಹಾಗಾಗಿ ಕರೀಂ ನಗರ್‌ನಲ್ಲಿ ನಡೆದ ಸಿನಿಮಾ ಸಕ್ಸಸ್ ಸಂಭ್ರಮದಲ್ಲೇ ನಿರ್ದೇಶಕರಿಗೆ ಬಿಎಂಡಬ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

'ನಾನ್ನಕು ಪ್ರೇಮತೋ' ಹಾಗೂ 'ರಂಸಸ್ಥಳಂ' ಸಿನಿಮಾಗಳಲ್ಲಿ ನಿರ್ದೇಶಕ ಸುಕುಮಾರ್‌ಗೆ ಸಹಾಯಕರಾಗಿದ್ದ ಶ್ರೀಕಾಂತ್ ಒದೆಲ ನಿರ್ದೇಶನದ ಚೊಚ್ಚಲ ಸಿನಿಮಾ 'ದಸರಾ'. ಮೊದಲ ಪ್ರಯತ್ನದಲ್ಲೇ ನಿರ್ದೇಶಕರು ಸಿಕ್ಸರ್ ಬಾರಿಸಿದ್ದಾರೆ. ಇನ್ನು ಚಿತ್ರಕ್ಕೆ ಕೆಲಸ ಮಾಡಿದ ತಂಡದ ಸದಸ್ಯರಿಗೆ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೂ ಮುನ್ನ ಚಿತ್ರದ ನಾಯಕಿ ಕೀರ್ತಿ ಸುರೇಶ್ ಕೂಡ ತಂಡದ 130 ಜನರಿಗೆ ಚಿನ್ನದ ನಾಣ್ಯ ನೀಡಿದ್ದರು ಎನ್ನಲಾಗಿತ್ತು.
ಕಳೆದ ವಾರ ಬಿಡುಗಡೆಯಾದ 'ದಸರಾ' ಸಿನಿಮಾ 6 ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ನಾನಿ ಕೂಡ 100 ಕ್ಲಬ್ ಸೇರಿದ್ದಾರೆ. ಸತ್ಯಾನ್ ಸೂರ್ಯಾನ್ ಸಿನಿಮಾಟೋಗ್ರಫಿ, ಸಂತೋಷ್ ನಾರಾಯಣನ್ ಮ್ಯೂಸಿಕ್ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗ್ತಿದೆ. ಕಥೆ ಹಳೆಯದ್ದೇ ಅನಿಸಿದರೂ ಅದರ ಟ್ರೀಟ್‌ಮೆಂಟ್ ಸೊಗಸಾಗಿದೆ. ಬಾಲಿವುಡ್ ಮಂದಿ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಬಿಟೌನ್ ಸಿನಿಮಾ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿ ಮತ್ತೆ ಬಾಲಿವುಡ್ ಕಾಲೆಳೆದಿದ್ದಾರೆ.

'ದಸರಾ' ಜೊತೆಗೆ ಬಿಡುಗಡೆಯಾದ ಬಾಲಿವುಡ್‌ನ 'ಭೋಲಾ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಅಜಯ್ ದೇವಗನ್ ತಮಿಳಿನ 'ಕೈದಿ' ಚಿತ್ರವನ್ನು ಒಂದಷ್ಟು ಬದಲಾವಣೆ ಜೊತೆಗೆ ಬಾಲಿವುಡ್ ಪ್ರೇಕ್ಷಕರ ಮುಂದಿಟ್ಟಿದ್ದರು. ಆದರೆ ಸಿನಿಮಾ ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಇದೆಲ್ಲದರ ನಡುವೆ ಟ್ವೀಟ್ ಮಾಡಿದರು ವಿವೇಕ್ ಅಗ್ನಿಹೋತ್ರಿ "ಬಾಲಿವುಡ್ ಮತ್ತೆ ಕೆಟ್ಟ ಪರಿಸ್ಥಿತಿಯಲ್ಲಿದೆ. ಒಳ್ಳೆ ಓಪನಿಂಗ್ ಗ್ಯಾರಂಟಿ ಇಲ್ಲದ ನಟರಿಗೆ ಭಾರೀ ಸಂಭಾವನೆ ಕೊಡುತ್ತಿರೋದಕ್ಕೆ ಇಂಡಸ್ಟ್ರಿ ಖುಷಿಯಾಗಿರೋದು ವಿಪರ್ಯಾಸ. ಬಹುತೇಕ ಹಣ ಕಲಾವಿದರ ಕಾರುಬಾರು, ಲೈಫ್‌ಸ್ಟೈಲ್‌ಗೆ ವ್ಯರ್ಥವಾಗ್ತಿದೆ. ಎಲ್ಲಿ ತಪ್ಪಾಗ್ತಿದೆ?" ಎಂದು ಪ್ರಶ್ನಿಸಿದ್ದಾರೆ.


Click it and Unblock the Notifications











