ದಸರಾ ಚಿತ್ರದ ಬೆಂಗಳೂರು ಬುಕಿಂಗ್ ಓಪನ್; ಯಾವ ಮುಖ್ಯ ಚಿತ್ರಮಂದಿರ, ರನ್ ಟೈಮ್ ಎಷ್ಟು?

ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಬಹುನಿರೀಕ್ಷಿತ ಸಿನಿಮಾ ದಸರಾ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಮುಂದಿನ ಗುರುವಾರ ( ಮಾರ್ಚ್ 30 ) ದಸರಾ ತೆರೆಗೆ ಬರಲಿದೆ.
ಚಿತ್ರದಲ್ಲಿ ನಾನಿಗೆ ನಾಯಕಿಯಾಗಿ ಕೀರ್ತಿ ಸುರೇಶ್ ನಟಿಸಿದ್ದು, ಸಮುದ್ರಕಣಿ, ಸಾಯಿಕುಮಾರ್, ಝರೀನಾ ವಾಹಬ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ದಿಯಾ ಚಿತ್ರ ಖ್ಯಾತಿಯ ಕನ್ನಡ ನಟ ದೀಕ್ಷಿತ್ ಶೆಟ್ಟಿ ಸಹ ಚಿತ್ರದಲ್ಲಿದ್ದಾರೆ.
ಚಿತ್ರಕ್ಕೆ ನಿರ್ದೇಶಕ ಸುಕುಮಾರ್ ಗರಡಿಯಲ್ಲಿ ಬೆಳೆದ ನಿರ್ದೇಶಕ ಶ್ರೀಕಾಂತ್ ಒಡೆಲಾ ನಿರ್ದೇಶನವಿದ್ದು, ಚಿತ್ರ ದೊಡ್ಡ ಮಟ್ಟದ ನಿರೀಕ್ಷೆಯನ್ನು ಪ್ರತಿ ಬಾರಿ ಪೋಸ್ಟರ್ ಬಿಡುಗಡೆಯಾದಾಗ, ಟೀಸರ್ ರಿಲೀಸ್ ಆದಾಗ ಹಾಗೂ ಟ್ರೈಲರ್ ಬಿಡುಗಡೆಯಾದಾಗ ಹುಟ್ಟುಹಾಕಿದೆ.
ಅದರಲ್ಲೂ ಚಿತ್ರದ ಟೀಸರ್ ಹಾಗೂ ಟ್ರೈಲರ್ ಬಿಡುಗಡೆಯಾದ ಮೇಲಂತೂ ಚಿತ್ರ ಹುಟ್ಟುಹಾಕಿದ ಕ್ರೇಜ್ ಅಷ್ಟಿಷ್ಟಲ್ಲ. ಹಳ್ಳಿಯೊಂದರ ರಗಡ್ ಹೈದನಾಗಿ ಎಣ್ಣೆ ಹೊಡೆಯೋದು ನಮಗೆ ಅಭ್ಯಾಸ ಅಲ್ಲ ನಮ್ಮ ದಿನಚರಿ ಎಂದು ಡೈಲಾಗ್ ಹೇಳುತ್ತಾ ಕೆಣಕಿದವರನ್ನೆಲ್ಲಾ ಸಿಕ್ಕ ಸಿಕ್ಕ ಹಾಗೆ ಹೊಡೆದುರುಳಿಸುವ ನಾನಿ ಪಾತ್ರ ಎಲ್ಲರ ಗಮನವನ್ನು ಸೆಳೆದಿದೆ.
ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಮೇಕಿಂಗ್, ಬ್ಯಾಕ್ ಗ್ರೌಂಡ್ ಮ್ಯೂಸಿಕ್, ಎಡಿಟಿಂಗ್ ಎಲ್ಲವೂ ನೆಕ್ಸ್ಟ್ ಲೆವೆಲ್ ಇದೆ. ಇನ್ನು ಚಿತ್ರದ ಬಿಡುಗಡೆ ದಿನ ಸಮೀಪಿಸುತ್ತಿದ್ದು, ಮುಂಗಡ ಬುಕಿಂಗ್ ತೆರೆದಿದೆ. ಬೆಂಗಳೂರಿನಲ್ಲಿ ಇಂದಿನಿಂದ ( ಮಾರ್ಚ್ 26 ) ದಸರಾ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಆರಂಭಗೊಂಡಿದೆ.
ಚಿತ್ರ ಬೆಂಗಳೂರಿನ ಕೆಜಿ ರಸ್ತೆಯ ತ್ರಿವೇಣಿ ಚಿತ್ರಕ್ಕೆ ಮುಖ್ಯ ಚಿತ್ರಮಂದಿರವಾಗಿದ್ದು, ನಗರದ ಮಾರತಹಳ್ಳಿಯ ವಿನಾಯಕ, ಮಾಗಡಿ ರಸ್ತೆಯ ವೀರೇಶ್, ಕೆಆರ್ ಪುರಂನ ವೆಂಕಟೇಶ್ವರ, ಊರ್ವಶಿ, ಆರ್ ಟಿ ನಗರದ ರಾಧಾಕೃಷ್ಣ, ಎಂಎಸ್ ನಗರದ ಮುಕುಂದ, ಅಗರದ ತಿರುಮಲ, ಕೆಂಗೇರಿಯ ವೆಂಕಟೇಶ್ವರ, ಸ್ಯಾಂಕಿ ರಸ್ತೆಯ ಕಾವೇರಿ ಹಾಗೂ ಗೋಪಾನ್ ಸಿನಿಮಾಸ್ ಚಿತ್ರಮಂದಿರಗಳಲ್ಲಿ ಮುಂಗಡ ಬುಕಿಂಗ್ ತೆರೆದಿದೆ. ಚಿತ್ರವನ್ನು ಮೊದಲ ದಿನವೇ ಬೇಸಿಗೆಯಲ್ಲೂ ದಸರಾ ನೋಡಬೇಕೆನ್ನುವವರು ಈಗಲೇ ಟಿಕೆಟ್ ಖರೀದಿಸಬಹುದಾಗಿದೆ.
ಇನ್ನು ದಸರಾ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಅನ್ನು ಸೆನ್ಸಾರ್ ಬೋರ್ಡ್ ನೀಡಿದ್ದು, ಚಿತ್ರದ ರನ್ ಟೈಮ್ 2 ಗಂಟೆ 39 ನಿಮಿಷಗಳಷ್ಟಿದೆ. ದಸರಾ ತೆರೆ ಕಾಣುವ ದಿನದಂದೇ ತಮಿಳಿನಲ್ಲಿ ಸಿಳಂಬರಸನ್ ನಟನೆಯ ಪತ್ತು ತಲಾ ಹಾಗೂ ಕನ್ನಡದಲ್ಲಿ ಡಾಲಿ ಧನಂಜಯ್ ನಟನೆಯ ಗುರುದೇವ್ ಹೊಯ್ಸಳ ಚಿತ್ರಗಳೂ ಸಹ ತೆರೆಗೆ ಬರುತ್ತಿದ್ದು, ಈ ಮೂರೂ ಚಿತ್ರಗಳ ನಡುವೆ ಬೆಂಗಳೂರು ಬಾಕ್ಸ್ ಆಫೀಸ್‌ನಲ್ಲಿ ಕದನ ನಡೆಯುವುದು ಪಕ್ಕಾ.


Click it and Unblock the Notifications











