'ಪ್ರಾಜೆಕ್ಟ್- K' ದೀಪಿಕಾ ಲುಕ್ ರಿವೀಲ್: ₹600 ಕೋಟಿ ಸಿನಿಮಾ ಪೋಸ್ಟರ್ ನೋಡಿದವರಿಗೆ ನಿರಾಸೆ
ಪ್ರಭಾಸ್- ಕಮಲ್ ಹಾಸನ್ ನಟನೆಯ 'ಪ್ರಾಜೆಕ್ಟ್- K' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಇನ್ನೆರಡು ದಿನಗಳಲ್ಲಿ ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಲಿದೆ. ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಸೇರಿದಂತೆ ದೊಡ್ಡ ತಾರಾಗಣವಿದೆ. ನಾಗ್ ಅಶ್ವಿನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ.
ಟೀಸರ್ ರಿಲೀಸ್ ಹೊಸ್ತಿಲಲ್ಲಿ 'ಪ್ರಾಜೆಕ್ಟ್- K' ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಲುಕ್ ರಿವೀಲ್ ಆಗಿದೆ. ಆದರೆ ಪೋಸ್ಟರ್ ನೋಡಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇಲ್ಲಿವರೆಗೂ ಕಾನ್ಸೆಪ್ಟ್ ಪೋಸ್ಟರ್‌ಗಳನ್ನು ಮಾತ್ರ ರಿಲೀಸ್ ಮಾಡಿ ಚಿತ್ರತಂಡ ಹೈಪ್ ಕ್ರಿಯೇಟ್ ಮಾಡಿತ್ತು. ಪ್ರಭಾಸ್, ಬಿಗ್‌ಬಿ ಹೀಗೆ ಯಾರೊಬ್ಬರ ಲುಕ್ ಕೂಡ ಇನ್ನು ರಿವೀಲ್ ಆಗಿಲ್ಲ. ಟೀಸರ್ ರಿಲೀಸ್‌ಗೆ 2 ದಿನ ಭಾಕಿ ಇರುವಾಗ ಇದ್ದಕ್ಕಿದಂತೆ ದೀಪಿಕಾ ಪಡುಕೋಣೆ ಲುಕ್ ರಿವೀಲ್ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಹಾಗಾಗಿ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು.

ಹೇಳಿದ ಸಮಯಕ್ಕೆ ಚಿತ್ರತಂಡ ದೀಪಿಕಾ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಲಿಲ್ಲ. ಅಭಿಮಾನಿಗಳು ಕಾದು ಕಾದು ಬೇಸರಗೊಂಡಿದ್ದರು. ಅಂತು ಇಂತೂ ಹೇಳಿದ್ದಕ್ಕಿಂತ 5 ಗಂಟೆ ಸಮಯ ತಡವಾಗಿ ಪೋಸ್ಟರ್ ರಿಲೀಸ್ ಆಗಿದೆ. ಆದರೆ ಎಲ್ಲರ ನಿರೀಕ್ಷೆ ತಲುಪುವಲ್ಲಿ ಅದು ವಿಫಲವಾಗಿದೆ. ಇದೇ ಕಾರಣಕ್ಕೆ ನೆಟ್ಟಿಗರು ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ಹೊತ್ತು ಕಾಯಿಸಿದ್ದು ಇದಕ್ಕೇನಾ? ಈ ಪೋಸ್ಟರ್ ಬಿಡೋಕೆ ಇಷ್ಟೆಲ್ಲಾ ಬಿಲ್ಡಪ್ ಬೇಕಿತ್ತಾ? ಎಂದು ಚಕಾರ ಎತ್ತಿದ್ದಾರೆ.
ಕೂದಲು ಫ್ರೀ ಬಿಟ್ಟು ಕಂಬಳಿ ರೀತಿಯ ಶಾಲುವನ್ನು ಕತ್ತಿಗೆಗೆ ಸುತ್ತಿಕೊಂಡಿರುವ ದೀಪಿಕಾ ರೋಷದಿಂದ ಕ್ಯಾಮರಾ ಕಡೆ ನೋಡುತ್ತಿರುವಂತೆ ಪೋಸ್ಟರ್‌ನಲ್ಲಿ ನೋಡಬಹುದು. 'ಪ್ರಾಜೆಕ್ಟ್- K' ಸೈನ್ಸ್ ಫಿಕ್ಷನ್ ಆಕ್ಷನ್ ಸಿನಿಮಾ. ಚಿತ್ರದಲ್ಲಿ ಪ್ರತಿಯೊಬ್ಬರ ಗೆಟಪ್ ಬಹಳ ವಿಭಿನ್ನವಾಗಿ ನಾಗ್ ಅಶ್ವಿನ್ ಪ್ಲ್ಯಾನ್ ಮಾಡಿದ್ದಾರೆ. ಆದರೆ ಟೀಸರ್‌ಗೂ ಮುನ್ನ ದೀಪಿಕಾ ಗೆಟಪ್ ರಿವೀಲ್ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಪೋಸ್ಟರ್ ಬಿಟ್ಟಿದ್ದಾರೆ ಎನ್ನುವುದು ಕೆಲವರ ಲೆಕ್ಕಾಚಾರ.

ಬಹಳ ದೊಡ್ಡಮಟ್ಟದಲ್ಲಿ 'ಪ್ರಾಜೆಕ್ಟ್- K' ಚಿತ್ರವನ್ನು ದೇಶ ವಿದೇಶಗಳಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ. ಇನ್ನು 600 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬಹುತೇಕ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ.
ತಮಿಳು ನಟ ಕಮಲ್ ಹಾಸನ್ ಇತ್ತೀಚೆಗೆ ಚಿತ್ರತಂಡ ಸೇರಿಕೊಂಡಿದ್ದಾರೆ. ಚಿತ್ರದಲ್ಲಿ ಉಳಗ ನಾಯಗನ್ ವಿಲನ್ ಆಗಿ ಅಬ್ಬರಿಸುತ್ತಾರೆ ಎನ್ನಲಾಗ್ತಿದೆ. ಜೊರ್ಡ್ಜೆ ಸ್ಟೋಜಿಲ್ಕೋವಿಕ್ ಛಾಯಾಗ್ರಹಣ, ಸಂತೋಷ್ ನಾರಾಯಣ್ ಸಂಗೀತ 'ಪ್ರಾಜೆಕ್ಟ್- K' ಚಿತ್ರಕ್ಕಿದೆ. ಎರಡು ವರ್ಷಗಳ ಹಿಂದೆ ಈ ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಶೂಟಿಂಗ್ ತಡವಾಗುತ್ತಾ ಬರ್ತಿದೆ. ಸುಗ್ಗಿ ಹಬ್ಬಕ್ಕೆ ಚಿತ್ರ ತೆರೆಗೆ ಬರೋದು ಅನುಮಾನ ಎನ್ನಲಾಗ್ತಿದೆ.
ಈ ಹಿಂದೆ 'ಮಹಾನಟಿ' ಸಿನಿಮಾ ಕಟ್ಟಿಕೊಟ್ಟು ನಿರ್ದೇಶಕ ನಾಗ್ ಅಶ್ವಿನ್ ಸಕ್ಸಸ್ ಕಂಡಿದ್ದರು. ಇದೀಗ ಪ್ರಭಾಸ್, ಬಿಗ್‌ಬಿ, ಕಮಲ್, ದೀಪಿಕಾರಂತಹ ಘಟಾನುಘಟಿ ಕಲಾವಿದರನ್ನು ಒಟ್ಟಿಗೆ ಸೇರಿಸಿ ಯಾವ ತರಹದ ಸಿನಿಮಾ ಮಾಡುತ್ತಾರೆ ಎನ್ನುವ ನಿರೀಕ್ಷೆ ಇದೆ. ಇನ್ನು ಸಿನಿಮಾ ಟೈಟಲ್ ಏನು? 'K' ಅರ್ಥ ಏನು ಎನ್ನುವ ಚರ್ಚೆ ಬಹಳ ದಿನಗಳಿಂದ ನಡೀತಿದೆ. ಇದಕ್ಕೆಲ್ಲಾ ಶೀಘ್ರದಲ್ಲೇ ಉತ್ತರ ಸಿಗಲಿದೆ.


Click it and Unblock the Notifications