ಪ್ರಭಾಸ್ ಚಿತ್ರದಲ್ಲಿ ನಟಿಸುತ್ತಿರುವ ದೀಪಿಕಾ ಅಡ್ವಾನ್ಸ್ ತೆಗೆದುಕೊಳ್ಳಲು ನಿರಾಕರಿಸಿದ್ದೇಕೆ?
ತೆಲುಗು ಖ್ಯಾತ ನಟ ಪ್ರಭಾಸ್ 21ನೇ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ದೀಪಿಕಾ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಮಹಾನಟಿ' ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.
Recommended Video
ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಸಿನಿಮಾಗೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಆದರೆ ಆಗಲೇ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಸೈನ್ಸ್ ಫಿಕ್ಷನ್ ಸಿನಿಮಾ ಇದಾಗಿದ್ದು, ಪ್ರಭಾಸ್ ಮತ್ತು ದೀಪಿಕಾ ಅವರನ್ನು ಒಟ್ಟಿಗೆ ತೆರೆಮೇಲೆ ನೋಡಲು ಸಿನಿಮಾ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಸಿನಿಮಾದಿಂದ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ.
ನಟಿ ದೀಪಿಕಾ ಪಡುಕೋಣೆ ಈ ಸಿನಿಮಾಗೆ 25 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವುದು ಸುದ್ದಿಯಾಗಿತ್ತು. ಇದೀಗ ದೀಪಿಕಾ ಚಿತ್ರತಂಡದಿಂದ ಅಡ್ವಾನ್ಸ್ ಪಡೆಯಲು ಹಿಂದೇಟು ಹಾಕುತ್ತಿದ್ದಾರಂತೆ. ಮುಂಗಡ ಹಣ ಪಡೆಯಲು ದೀಪಿಕಾ ನಿರಾಕರಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಬಹುಕೋಟಿ ವೆಚ್ಚದಲ್ಲಿ ಪ್ರಭಾಸ್ 21ನೇ ಸಿನಿಮಾ ತಯಾರಾಗುತ್ತಿದೆ. ಸದ್ಯ ಕೊರೊನಾ ಹಾವಳಿಯ ಪರಿಣಾಮ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಸಿನಿಮಾ ಮಾಡಲು ಹಣದ ಸಮಸ್ಯೆ ಆಗಬಾರದು, ನಿರ್ಮಾಪಕರಿಗೆ ಕಷ್ಟ ಆಗಬಾರದು ಎನ್ನುವ ಕಾರಣಕ್ಕೆ ದೀಪಿಕಾ ಮುಂಗಡ ಹಣ ತೆಗೆದುಕೊಂಡಿಲ್ಲವಂತೆ. ಅಲ್ಲದೆ ಸಿನಿಮಾ ಸಂಪೂರ್ಣ ಮುಗಿದ ಬಳಿಕ ಹಣ ನೀಡುವಂತೆ ಹೇಳಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಅಂದ್ಹಾಗೆ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ. 2022ರಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರ್ಮಾಣವಾಗುತ್ತಿದ್ದು, ದಕ್ಷಿಣ ಭಾರತದ ಎಲ್ಲಾ ಭಾಷೆಯ ಜೊತೆಗೆ ಹಿಂದಿಯಲ್ಲಿಯೂ ಸಿನಿಮಾ ತೆರೆಗೆ ಬರುತ್ತಿದೆ. ಪ್ರಭಾಸ್ ಸದ್ಯ 20ನೇ ಸಿನಿಮಾ 'ರಾಧೆ ಶ್ಯಾಮ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











