ತಮ್ಮ ಕನಸಿನ 'ಮಹಾಭಾರತ' ಚಿತ್ರಕ್ಕೆ ಯುವನಟನನ್ನು ಆಯ್ಕೆ ಮಾಡಿದ ಜಕ್ಕಣ್ಣ
ನಿರ್ದೇಶಕ ರಾಜಮೌಳಿ ಸದ್ಯ ಮಹೇಶ್ ಬಾಬು ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎರಡು ಸಣ್ಣ ಶೆಡ್ಯೂಲ್ ಬಳಿಕ ವಿರಾಮ ಪಡೆದಿದ್ದಾರೆ. ಬಹಳ ಅದ್ಧೂರಿಯಾಗಿ ಈ ಸಿನಿಮಾ ಮೂಡಿ ಬರ್ತಿದೆ. ಎರಡು ಭಾಗಗಳಾಗಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಚಿತ್ರ ತೆರೆಗೆ ಬರಲಿದೆ. ಇನ್ನು ಜಕ್ಕಣ್ಣ ಕನಸಿನ ಸಿನಿಮಾ 'ಮಹಾಭಾರತ'.
ಹೌದು ರಾಜಮೌಳಿ ಪದೇ ಪದೆ 'ಮಹಾಭಾರತ' ಚಿತ್ರದ ಬಗ್ಗೆ ಹೇಳುತ್ತಾ ಬರ್ತಿದ್ದಾರೆ. ಅದೇ ನನ್ನ ಡ್ರೀಮ್ ಪ್ರಾಜೆಕ್ಟ್. ಈಗ ಮಾಡುತ್ತಿರುವ ಸಿನಿಮಾಗಳೆಲ್ಲಾ ಆ ಮಹತ್ವಾಕಾಂಕ್ಷೆಯ ಚಿತ್ರಕ್ಕೆ ತಾಲೀಮು ಮಾತ್ರ. ಅದರಲ್ಲೂ ಮಗಧೀರ, ಬಾಹುಬಲಿ ರೀತಿ ಜಾನಪದ ಫ್ಯಾಂಟಸಿ ಕಾಸ್ಟ್ಯೂಮ್ ಡ್ರಾಮಾಗಳನ್ನು ನಾನು ಮಹಾಭಾರತ ಚಿತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡಿದ್ದೇನೆ ಎಂದು ಹೇಳಿದ್ದಾರೆ.

ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಮಹಾಭಾರತ ಕಥೆ ಬಂದು ಹೋಗಿದೆ. ಮಹಾಭಾರತದ ವೀರರಿಂದ ಪ್ರೇರಣೆಗೊಂಡು ಜಕ್ಕಣ್ಣ ಒಂದಷ್ಟು ಪಾತ್ರಗಳನ್ನು ಕೂಡ ಕಟ್ಟಿಕೊಟ್ಟಿದ್ದಾರೆ. ಆದರೆ ಮುಂದೊಂದು ದಿನ ದೊಡ್ಡಮಟ್ಟದಲ್ಲಿ ವಿವಿಧ ಭಾಗಗಳಾಗಿ ಆ ಕಥೆಯನ್ನು ಹೇಳುತ್ತೇನೆ ಎಂದಿದ್ದಾರೆ. ಇನ್ನು ಚಿತ್ರದಲ್ಲಿ ಯಾರೆಲ್ಲಾ ನಟಿಸಬಹುದು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ರಾಜಮೌಳಿ ನಿರ್ದೇಶನದಲ್ಲಿ ಮಹಾಭಾರತ ಸಿನಿಮಾ ಎಂದರೆ ಜ್ಯೂ. ಎನ್‌ಟಿಆರ್, ರಾಮ್‌ಚರಣ್, ಪ್ರಭಾಸ್, ಮಹೇಶ್ ಬಾಬು ಚಿತ್ರದಲ್ಲಿ ಇದ್ದೇ ಇರುತ್ತಾರೆ ಎಂದು ಅಭಿಮಾನಿಗಳು ಅಭಿಪ್ರಾಯ ಪಡುತ್ತಾರೆ. ಆದರೆ ಯಾರಿಗೆ ಯಾವ ಪಾತ್ರ ಎನ್ನುವುದು ಇನ್ನು ಸಸ್ಪೆನ್ಸ್. ಸದ್ಯಕ್ಕೆ ಆ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಜಕ್ಕಣ್ಣ ಫೋಕಕ್ ಈಗ SSMB29 ಕಡೆಯಿದೆ. ಇದೆಲ್ಲದರ ನಡುವೆ ನಾನು 'ಮಹಾಭಾರತ' ಚಿತ್ರ ಮಾಡಿದರೆ ಈ ನಟನಿಗೆ ಒಂದು ಪಾತ್ರ ಇದ್ದೇ ಇರುತ್ತದೆ ಎಂದಿದ್ದಾರೆ.
ನಾನಿ ನಟನೆಯ 'ಹಿಟ್- 3' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೀತು. ಕಾರ್ಯಕ್ರಮಕ್ಕೆ ನಿರ್ದೇಶಕ ರಾಜಮೌಳಿ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ವೇಳೆ ವೇದಿಕೆಯಲ್ಲಿ ನಿರೂಪಕಿ ಸುಮಾ ಇಂಟ್ರೆಸ್ಟಿಂಗ್ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ಮಹಾಭಾರತ ಚಿತ್ರದ ವಿಚಾರವೂ ಬಂದಿದೆ.
ರಾಜಮೌಳಿ ಸರ್ ನೀವು ನಿರ್ದೇಶನದ 'ಮಹಾಭಾರತ' ಚಿತ್ರದಲ್ಲಿ ನಾನಿ ಕೂಡ ನಟಿಸುತ್ತಾರೆ. ಅವರಿಗೆ ಒಂದು ಪಾತ್ರ ಫಿಕ್ಸ್ ಆಗಿದೆ ಎನ್ನುವ ಊಹಾಪೋಹ ಇದೆಯಂತೆ ನಿಜವೇ? ಎನ್ನುವ ಸುಮಾ ಪ್ರಶ್ನೆಗೆ "ಹೌದು ನಾನಿ ಆ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವುದು ನಿಜ" ಎಂದಿದ್ದಾರೆ. ಆದರೆ ಯಾವ ಪಾತ್ರ ಎನ್ನುವುದು ಇನ್ನು ಗೊತ್ತಿಲ್ಲ ಎನ್ನುವಂತೆ ಪ್ರತಿಕ್ರಿಯಿಸಿದ್ದಾರೆ. 'ಮಹಾಭಾರತ' ಕಥೆಯಲ್ಲಿ ಸಾಕಷ್ಟು ಅದ್ಭುತ ಪಾತ್ರಗಳಿವೆ. ನಟ ನಾನಿಗೆ ಯಾವ ಪಾತ್ರ ಸಿಗಬಹುದು? ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ.
ಸಣ್ಣಪುಟ್ಟ ಪಾತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿದ ನಾನಿ ಮುಂದೆ ಸ್ಟಾರ್ ನಟರಾಗಿ ಗುರ್ತಿಸಿಕೊಂಡರು. ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದರು. ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದರು. ಆದರೆ ಚಿತ್ರದಲ್ಲಿ ಅವರಿಗೆ ಕಡಿಮೆ ಅವಕಾಶ ಸಿಕ್ಕಿತ್ತು. ಸದ್ಯ 'ಹಿಟ್- 3' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಚಿತ್ರದಲ್ಲಿ ಕನ್ನಡ ನಟಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.
'ಹಿಟ್- 3' ಚಿತ್ರ ಕನ್ನಡಕ್ಕೂ ಡಬ್ ಆಗಿದೆ. ಚಿತ್ರದ ಬಿಜಿಎಂಗೆ ನಟ ಸುದೀಪ್ ಪುತ್ರಿ ಸಾನ್ವಿ ಸುದೀಪ್ ದನಿ ನೀಡಿದ್ದಾರೆ. ಚಿತ್ರದ ಟ್ರೈಲರ್ ನೋಡಿದರೆ ಸಿಕ್ಕಾಪಟ್ಟೆ ವೈಲೆನ್ಸ್ ಇರುವಂತೆ ಕಾಣುತ್ತಿದೆ. ಬೆಂಗಳೂರಿಗೂ ಬಂದು ಚಿತ್ರತಂಡ ಪ್ರಚಾರ ನಡೆಸಿತ್ತು. ಮೇ 1ಕ್ಕೆ ಸಿನಿಮಾ ತೆರೆಗಪ್ಪಳಿಸುತ್ತಿದೆ.


Click it and Unblock the Notifications











