ಐಪಿಎಲ್‌ನಲ್ಲೂ 'ಪೆದ್ದಿ' ಹವಾ; ಬ್ಯಾಟ್ ನೆಲಕ್ಕೆ ಕುಟ್ಟಿ ಅಬ್ಬರಿಸಿದ ಅಶುತೋಷ್ ಶರ್ಮಾ
ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಬೇಜಾನ್ ಹೈಪ್ ಕ್ರಿಯೇಟ್ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ಸೂಪರ್ ಹಿಟ್ ಆಗಿತ್ತು. ಖಡಕ್ ಲುಕ್‌ನಲ್ಲಿ 'ಪೆದ್ದಿ' ಬ್ಯಾಟ್ ನೆಲಕ್ಕೆ ಗುದ್ದಿ ಸಿಕ್ಸರ್ ಬಾರಿಸುವ ಶಾಟ್ ಅಭಿಮಾನಿಗಳ ಮನಗೆದ್ದಿತ್ತು. ಇದೀಗ ಐಪಿಎಲ್‌ನಲ್ಲಿ 'ಪೆದ್ದಿ' ಕ್ರೇಜ್ ಜೋರಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು 'ಪೆದ್ದಿ' ಟೀಸರ್ ಝಲರ್ ರೀ-ಕ್ರಿಯೇಟ್ ಮಾಡಿದ್ದಾರೆ. ಅಶುತೋಷ್ ಶರ್ಮಾ ಥೇಟ್ ರಾಮ್ ಚರಣ್ ಸ್ಟೈಲ್‌ನಲ್ಲಿ ಬ್ಯಾಟ್ ನೆಲಕ್ಕೆ ಕುಟ್ಟಿ ಚೆಂಡನ್ನು ಕೀಡಾಂಗಣದ ಹೊರಕ್ಕೆ ಹೊಡೆದಿದ್ದಾರೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಅಫೀಷಿಯಲ್ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ವೀಡಿಯೋ ವೈರಲ್ ಆಗುತ್ತಿದೆ.

ಕೆ. ಎಲ್ ರಾಹುಲ್ ಸೇರಿದಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾಗರು ಪ್ರಾಕ್ಟೀಸ್ ಮಾಡುತ್ತಿರುವ ಝಲಕ್ ಅನ್ನು ಪೆದ್ದಿ ಟೀಸರ್‌ಗೆ ಮಿಕ್ಸ್ ಮಾಡಲಾಗಿದೆ. ಹಿಂದಿಯಲ್ಲಿ 'ಪೆದ್ದಿ' ಡೈಲಾಗ್ಸ್ ಹಿನ್ನೆಲೆಯಲ್ಲಿ ತಂಡದ ಆಟಗಾರರ ಖಡಕ್ ಲುಕ್ ನೋಡಬಹುದು. ಅಂತಿಮವಾಗಿ ಅಶುತೋಷ್ ಶರ್ಮಾ 'ಪೆದ್ದಿ' ಶಾಟ್ ಬಾರಿಸಿ ಗಮನ ಸೆಳೆದಿದ್ದಾರೆ. ಈ ವೀಡಿಯೋವನ್ನು ರಾಮ್‌ಚರಣ್ ಹಂಚಿಕೊಂಡಿದ್ದಾರೆ.
ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ 'ಪೆದ್ದಿ' ಸಿನಿಮಾ ನಿರ್ಮಾಣವಾಗುತ್ತಿದೆ. ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸಣ್ಣ ಶೆಡ್ಯೂಲ್ ಚಿತ್ರೀಕರಣದಲ್ಲಿ ಶಿವಣ್ಣ ಭಾಗಿ ಆಗಿ ಬಂದಿದ್ದಾರೆ. ರಾಮನವಮಿ ಸಂಭ್ರಮದಲ್ಲಿ 'ಪೆದ್ದಿ' ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿತ್ತು.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ರಾಮ್ ಚರಣ್ ಕ್ರೀಡಾಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 80, 90ರ ದಶಕಗಳಲ್ಲಿ ಹಳ್ಳಿಗಳಲ್ಲಿ ಕ್ರಿಕೆಟ್, ಕಬ್ಬಡಿ ರೀತಿಯ ಆಟಗಳ ಝಲಕ್ ಅನ್ನು ತೋರಿಸಲಾಗುತ್ತಿದೆ. ಸಣ್ಣ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ರಗಡ್ ಲುಕ್‌ನಲ್ಲಿ ರಾಮ್‌ಚರಣ್ ಬೀಡಿ ಸೇದುತ್ತಾ ಪೆದ್ದಿ ಆಗಿ ದರ್ಶನ ಕೊಟ್ಟಿದ್ದರು.
ಮೈಸೂರಿನಲ್ಲಿ 'ಪೆದ್ದಿ' ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು. ಈಗಾಗಲೇ ಹೈದರಾಬಾದ್‌ನಲ್ಲಿ ಒಂದು ಶೆಡ್ಯೂಲ್ ಮುಗಿಸಿದ್ದಾರೆ. ಮುಂದಿನ ವರ್ಷ ಮಾರ್ಚ್ 27ಕ್ಕೆ ರಾಮ್‌ಚರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲಿದೆ. ಕನ್ನಡ ಸೇರಿ 5 ಭಾಷೆಗಳಿಗೆ ಸಿನಿಮಾ ಡಬ್ ಆಗಲಿದೆ. ಈ ಹಿಂದೆ 'ಉಪ್ಪೆನ' ಸಿನಿಮಾ ಕಟ್ಟಿಕಟ್ಟು ಗೆದ್ದಿದ್ದ ಬುಚ್ಚಿಬಾಬು ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.
'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ದಿವ್ಯೇಂದು ಶರ್ಮಾ, ಜಗಪತಿ ಬಾಬು ತಾರಾಗಣದಲ್ಲಿದ್ದಾರೆ. ಎ. ಆರ್ ರಹಮಾನ್ ಸಂಗೀತ ಹಾಗೂ ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ನೆಟ್‌ಫ್ಲಿಕ್ಸ್ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಚಿತ್ರದಲ್ಲಿ ನಾಯಕ 'ಪೆದ್ದಿ'ಯ ಗುರುವಿನ ಪಾತ್ರದಲ್ಲಿ ಶಿವರಾಜ್‌ಕುಮಾರ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. 'ಆಚಾರ್ಯ' ಹಾಗೂ 'ಗೇಮ್ ಚೇಂಜರ್' ಸೋಲಿನ ಬಳಿಕ ರಾಮ್‌ಚರಣ್ ಮತ್ತೆ ಕಂಬ್ಯಾಕ್ ಮಾಡಲು ಮುಂದಾಗಿದ್ದಾರೆ. 'ರಂಗಸ್ಥಳಂ' ಕಾಂಬಿನೇಷನ್‌ನಲ್ಲಿ ಸುಕುಮಾರ್ ಜೊತೆ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ 'ಪೆದ್ದಿ' ಸಿನಿಮಾ ಮೇಲೆ ಗಮನ ಕೇಂದ್ರಿಕರಿಸಿದ್ದಾರೆ.
ಸದ್ಯ ರಾಮ್‌ಚರಣ್ ತಮ್ಮ ಫ್ಯಾಮಿಲಿ ಜೊತೆ ಲಂಡನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿನ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿ ರಾಮ್‌ಚರಣ್ ಮೇಣದ ಪ್ರತಿಮೆ ಸಿದ್ಧವಾಗಿದೆ. ಅದನ್ನು ಅನಾವರಣ ಮಾಡಲು ಅವರು ತೆರಳಿದ್ದಾರೆ. ಈಗಾಗಲೇ ಬಾಲಿವುಡ್, ಟಾಲಿವುಡ್‌ನ ಕೆಲ ತಾರೆಯರ ಮೇಣದ ಪ್ರತಿಮೆಗಳು ಆ ಮ್ಯೂಸಿಯಂನಲ್ಲಿ ಜಾಗ ಪಡೆದುಕೊಂಡಿದೆ. ಈಗ ಅದೇ ಸಾಲಿಗೆ ಮೆಗಾಪವರ್ ಸ್ಟಾರ್ ಸೇರಿಕೊಳ್ಳಲಿದ್ಧಾರೆ. ಇದು ಮೆಗಾ ಫ್ಯಾನ್ಸ್ ಸಂಭ್ರಮಕ್ಕೆ ಕಾರಣವಾಗಿದೆ.


Click it and Unblock the Notifications











