ತೆಲುಗು ನಟ ನಾಗಾರ್ಜುನ ಒಡೆತನದ ಕನ್ವೆನ್ಷನ್ ಸೆಂಟರ್ ನೆಲಸಮ; ಭುಗೆಲೆದ್ದ ಆಕ್ರೋಶ
ಹೈದರಾಬಾದ್‌ನ ಪ್ರತಿಷ್ಠಿತ ಎನ್- ಕನ್ವೆನ್ಷನ್ ಸೆಂಟರ್ ನೆಲಸಮವಾಗಿದೆ. ತೆಲುಗು ನಟ ನಾಗಾರ್ಜುನ ಜಂಟಿ ಮಾಲೀಕತ್ವದ ಪಾರ್ಟಿ ಹಾಲ್ ಅನ್ನು ಕೆರೆ ಒತ್ತುವರಿ ಜಾಗದಲ್ಲಿ ನಿರ್ಮಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಹಾಗಾಗಿ ಹೈದರಾಬಾದ್ ವಿಕೋಪ ಸ್ಪಂದನೆ, ಆಸ್ತಿಗಳ ನಿಗಾ ಹಾಗೂ ರಕ್ಷಣಾ ಏಜೆನ್ಸಿ ಅಧಿಕಾರಿಗಳು ಕಟ್ಟದ ತೆರವು ಮಾಡಿದ್ದಾರೆ.
ಖ್ಯಾತ ನಟ ಅಕ್ಕಿನೇನಿ ನಾಗೇಶ್ವರರಾವ್ ಪುತ್ರ ನಾಗಾರ್ಜುನ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಅವರ ಮಕ್ಕಳು ಚಿತ್ರರಂಗಕ್ಕೆ ಬಂದಿದ್ದಾರೆ. ಸಾವಿರಾರು ಕೋಟಿ ಆಸ್ತಿಯ ಒಡೆಯ ನಾಗಾರ್ಜುನ ಸಿನಿಮಾ ಬಿಟ್ಟು ಸಾಕಷ್ಟು ಉದ್ಯಮಗಳಲ್ಲಿ ಹಣ ತೊಡಗಿಸಿದ್ದಾರೆ. ಅದೇ ರೀತಿ ಸ್ನೇಹಿತನ ಜೊತೆ ಸೇರಿ 12 ವರ್ಷಗಳ ಹಿಂದೆ ಎನ್- ಕನ್ವೆನ್ಷನ್ ಸೆಂಟರ್ ನಿರ್ಮಿಸಿದ್ದರು.

ಸುಮಾರು 10 ಎಕರೆ ಜಾಗದಲ್ಲಿ ಈ ನ್ವೆನ್ಷನ್ ಸೆಂಟರ್ ಕಂಗೊಳಿಸುತ್ತಿತ್ತು. ತಮ್ಮ ಮನೆಯ ಶುಭ ಸಮಾರಂಭಗಳನ್ನು ನಾಗ್ ಇಲ್ಲೇ ನಡೆಸುತ್ತಿದ್ದರು. ಸಾಕಷ್ಟು ತಾರೆಯರ ಮದುವೆ, ನಿಶ್ಚಿತಾರ್ಥ ಕಾರ್ಯಕ್ರಮಗಳು ಇಲ್ಲಿ ಜರುಗಿದೆ. ಬಹಳ ದೊಡ್ಡದಾದ ಎನ್- ಕನ್ವೆನ್ಷನ್ ಸೆಂಟರ್ ಶ್ರೀಮಂತರ ಹಾಟ್ ಫೇವರಿಟ್ ಆಗಿತ್ತು. ದೊಡ್ಡ ದೊಡ್ಡ ಸಮಾರಂಭಗಳಿಗೆ ಸಾಕ್ಷಿ ಆಗುತ್ತಿತ್ತು. ಆದರೆ ಆ ಕಟ್ಟಡದ ಜಾಗದ ವಿವಾದ ಇದೀಗ ತಾರಕಕ್ಕೇರಿದೆ.
ಅಧಿಕಾರಿಗಳು ಕಟ್ಟಡ ತೆರವು ಮಾಡಲು ಮುಂದಾಗುತ್ತಿದ್ದಂತೆ ನಾಗಾರ್ಜುನ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಜೆಸಿಬಿ ಕನ್ವೆನ್ಷನ್ ಸೆಂಟರ್ ಮೇಲೆ ನುಗ್ಗಿ ಪುಡಿಪುಡಿ ಮಾಡಿತ್ತು. ಈ ಬಗ್ಗೆ 'ಎಕ್ಸ್' ವೇದಿಕೆಯಲ್ಲಿ ನಾಗಾರ್ಜುನ ಆಕ್ರೋಶ ಹೊರ ಹಾಕಿದ್ದಾರೆ. ನಾವು ಯಾವುದೇ ಜಾಗ ಒತ್ತುವರಿ ಮಾಡಿಲ್ಲ. ತಪ್ಪು ಮಾಹಿತಿಯಿಂದ ಕನ್ವೆನ್ಷನ್ ಹಾಲ್ ಕಟ್ಟಡ ಕೆಡವಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ನಾವು ಯಾವುದೇ ಕಾನುನೂ ಉಲ್ಲಂಘಿಸಿ ಕಟ್ಟಡ ನಿರ್ಮಿಸಿಲ್ಲ. ಇದು ಜಾಗ ಪಟ್ಟಾ ಭೂಮಿ. ಕೆರೆ ಜಾಗ ನಾವು ಒತ್ತುವರಿ ಮಾಡಿಲ್ಲ. ಈ ಕ್ರಮದ ವಿರುದ್ಧ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದು ನಾಗ್ ಪ್ರತಿಕ್ರಿಯಿಸಿದ್ದಾರೆ. ಇನ್ನು ಸಾಕಷ್ಟು ಜನ ನಾಗಾರ್ಜುನ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಗಣ್ಯವ್ಯಕ್ತಿಯಾಗಿದ್ದು ಈ ರೀತಿ ಅಕ್ರಮವಾಗಿ ಜಾಗ ಒತ್ತುವರಿ ಮಾಡುವುದು ಸರೀನಾ? ಎಂದು ಪ್ರಶ್ನಿಸುತ್ತಿದ್ದಾರೆ.

ನಟ ನಾಗಾರ್ಜುನ ವಿರುದ್ಧ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಆತ ಹೀರೋ ಅಲ್ಲ, ವಿಲನ್. ಆತ ಕಳ್ಳ ಎಂದು ಬಿಗ್ ಬಾಸ್ ತೆಲುಗು ಸೀಸನ್- 2ರ ಸ್ಪರ್ಧಿ, ಖ್ಯಾತ ವಿಚಾರವಾದಿ ಬಾಬು ಗೋಗಿನೇನಿ ಆಕ್ರೋಶ ಹೊರಹಾಕಿದ್ದಾರೆ. ಕಾನೂನು ಉಲ್ಲಂಘಿಸಿದ ನಾಗಾರ್ಜುನಗೆ ಶಿಕ್ಷೆಯಾಗಬೇಕು ಎಂದು ಬಾಬು ಗೋಗಿನೇನಿ ಆಗ್ರಹಿಸಿದ್ದಾರೆ.
'ಕೆರೆಯ ಜಾಗ ಅಂದರೆ ಅದು ನಮ್ಮೆಲ್ಲರ ಭೂಮಿ. ಅಂತಹ ಭೂಮಿಯನ್ನು ಯಾವುದೇ ಭಯವಿಲ್ಲದೇ ವಶಪಡಿಸಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆ. ಹೀಗೆ ಮಾಡಿದರೆ ಮಳೆ ಬಂದಾಗ ಕೆರೆ ನೀರು ಎಲ್ಲಿ ಹೋಗುತ್ತದೆ. ದೊಡ್ಡ ಮಳೆ ಬಂದಾಗ ಸುತ್ತಾಮುತ್ತ ಭಾಗಗಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಾಕಷ್ಟು ಆಸ್ತಿ ಸಂಪಾದಿಸಿರುವ ನಾಗಾರ್ಜುನ ಕುಟುಂಬದವರು ಲಕ್ಷ ಲಕ್ಷ ದುಡಿಯುವ ಕನ್ವೆನ್ಷನ್ ಸೆಂಟರ್ ನಿರ್ಮಿಸಿದ್ದಾರೆ. ಇದಕ್ಕೆ ಶಿಕ್ಷೆ ಇಲ್ಲವೇ?
ಈಗ ಅಕ್ರಮ ಕಟ್ಟಡವನ್ನು ನೆಲಸಮ ಮಾಡುವುದು ಅಷ್ಟೇ ಅಲ್ಲ, ಕಾನೂನು ಉಲ್ಲಂಘಿಸಿದ ಮಾಲೀಕರನ್ನೂ ಶಿಕ್ಷಿಸಬೇಕು. ಈ ಅಕ್ರಮ ಕಟ್ಟಡಗಳಿಗೆ ಅನುಮತಿ ನೀಡಿದ ಅಧಿಕಾರಿಗಳನ್ನು ಶಿಕ್ಷಿಸಬೇಕು ಎಂದು ಬಾಬು ಗೋಗಿನೇನಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











