'ದೇವರ' ಗೆಲುವಿಗಾಗಿ ಕಂಡ ಕಂಡವರಿಗೆ ಜೈಕಾರ ಹಾಕ್ತಿದ್ದಾರಾ ಜ್ಯೂ. ಎನ್‌ಟಿಆರ್?
ತೆಲುಗಿನ 'ದೇವರ' ರಿಲೀಸ್ ಡೇಟ್ ಹತ್ತಿರವಾಗುತ್ತಿದೆ. ಮುಂದಿನ ವಾರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ದ್ವಿಪಾತ್ರದಲ್ಲಿ ನಟಿಸಿದ್ದರು ಈಗಾಗಲೇ ಟೀಸರ್, ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ.
ಕಳೆದ 6 ವರ್ಷಗಳಲ್ಲಿ 'RRR' ಬಿಟ್ಟರೆ ತಾರಕ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬರಲಿಲ್ಲ. 6 ವರ್ಷಗಳ ಬಳಿಕ ಸೋಲೊ ಹೀರೊ ಆಗಿ ತಾರಕ್ ಮೊದಲ ಸಿನಿಮಾ ಇದು. ಹಾಗಾಗಿ ಸಹಜವಾಗಿಯೇ ಸಿನಿಮಾ ಗರಿಗೆದರಿದೆ. 'ಆಚಾರ್ಯ' ರೀತಿಯ ಫ್ಲಾಪ್ ಬಳಿಕ ಕೊರಟಾಲ ಶಿವ ಈ ಚಿತ್ರ ಕಟ್ಟಿಕೊಟ್ಟಿದ್ದಾರೆ. ಗೆದ್ದೆ ಬೀಗುವ ಆತ್ಮವಿಶ್ವಾಸದಲ್ಲಿದ್ದಾರೆ. ಜಾನ್ವಿ ಕಪೂರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸೈಫ್ ಅಲಿಖಾನ್ ವಿಲನ್ ಆಗಿ ಅಬ್ಬರಿಸಿದ್ದಾರೆ.

ರಿಲೀಸ್ ಡೇಟ್ ಹತ್ತರವಾಗುತ್ತಿದ್ದಂತೆ 'ದೇವರ' ಪ್ರಮೋಷನ್ ಸ್ಪೀಡ್ ಹೆಚ್ಚಿಸಲಾಗುತ್ತಿದೆ. ಇತ್ತೀಚೆಗೆ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಈ ವೇಳೆ ತಾರಕ್ ಹಾಗೂ ಜಾನ್ವಿ ತಮಿಳಿನಲ್ಲೇ ಮಾತನಾಡಿ ಅಲ್ಲಿನ ಪ್ರೇಕ್ಷಕರ ಗಮನ ಸೆಳೆದಿದ್ದರು. ವೆಟ್ರಿಮಾರನ್ ನಿರ್ದೇಶನದಲ್ಲಿ ನಟಿಸುವ ಆಸೆಯನ್ನು ಜ್ಯೂ. ಎನ್‌ಟಿಆರ್ ಈ ವೇಳೆ ವ್ಯಕ್ತಪಡಿಸಿದ್ದರು. ಆ ವೀಡಿಯೋ ವೈರಲ ಆಗಿತ್ತು.
ಸ್ಟಾರ್ ನಟನಾಗಿದ್ದರೂ ವೆಟ್ರಿಮಾರನ್ ಸಿನಿಮಾಗಳನ್ನು ಮೆಚ್ಚಿಕೊಳ್ಳುವುದು ಅವರ ನಿರ್ದೇಶನದಲ್ಲಿ ನಟಿಸುವ ಆಸೆ ಹೇಳಿಕೊಂಡಿದ್ದನ್ನು ಕೆಲವರು ಮೆಚ್ಚಿದ್ದರು. ದಯವಿಟ್ಟು ಸಿನಿಮಾ ಮಾಡಿ ಸರ್ ಎಂದು ಕೇಳಿಕೊಂಡಿದ್ದು ತಾರಕ್ ಅಭಿಮಾನಿಗಳಿಗೂ ಅಷ್ಟಾಗಿ ಇಷ್ಟವಾಗಿರಲಿಲ್ಲ. ಇದೀಗ ದಳಪತಿ ವಿಜಯ್ ಡ್ಯಾನ್ಸ್ ಬಗ್ಗೆ ಜ್ಯೂ. ಎನ್‌ಟಿಆರ್ ಮೆಚ್ಚುಗೆ ವ್ಯಕ್ತಪಡಿಸಿರುವುದು ಭಾರೀ ವೈರಲ್ ಆಗ್ತಿದೆ.

ಜ್ಯೂ. ಎನ್‌ಟಿಆರ್ ಅದ್ಭುತ ಡ್ಯಾನ್ಸರ್. ಅದರಲ್ಲಿ ದೂಸ್ರಾ ಮಾತಿಲ್ಲ. ಚಿರಂಜೀವಿ ಬಳಿಕ ತೆಲುಗು ಚಿತ್ರರಂಗದಲ್ಲಿ ತಮ್ಮ ಡ್ಯಾನ್ಸ್ ಮೂಲಕ ಸಂಚಲನ ಸೃಷ್ಟಿಸಿದ ಮತ್ತೊಬ್ಬ ನಟ ಅಂದ್ರೆ ಅದು ತಾರಕ್. ಸ್ಟಾರ್ ಕಲಾವಿದರು ಕೂಡ ಯಂಗ್ ಟೈಗರ್ ಡ್ಯಾನ್ಸ್ ಬಗ್ಗೆ ಕೊಂಡಾಡುತ್ತಾರೆ. ಇಂತಿಪ್ಪ ತಾರಕ್ ಇದೀಗ ವಿಜಯ್ ಡ್ಯಾನ್ಸ್ ಬಗ್ಗೆ ಮಾತನಾಡಿರುವ ಪರಿ ಕೆಲವರಿಗೆ ಅಚ್ಚರಿ ತಂದಿದೆ.
ತಾರಕ್ ಮಾತನಾಡಿ "ಡ್ಯಾನ್ಸ್ ಅಂದ್ರೆ ಅದು ನೋಡಲು ಡ್ಯಾನ್ಸ್ ರೀತಿಯೇ ಇರಬೇಕು. ಫೈಟ್ ಮಾಡಿದಂತೆ ಜಿಮ್ನಾಸ್ಟಿಕ್ ಮಾಡಿದಂತೆ ಕಾಣಬಾರದು. ಬಹಳ ಸುಲಲಿತವಾಗಿ ಡ್ಯಾನ್ಸ್ ಮಾಡಬೇಕು. ದಳಪತಿ ವಿಜಯ್ ಸರ್ ತರ. ಅವರು ಕಷ್ಟುಪಟ್ಟು ಡ್ಯಾನ್ಸ್ ಮಾಡಿದಂತೆ ಕಾಣುವುದಿಲ್ಲ. ಅವರು ಬಹಳ ಕೂಲ್ ಆಗಿ ಬಹಳ ಆರಾಮಾಗಿ ಡ್ಯಾನ್ಸ್ ಮಾಡ್ತಾರೆ. ನಾನು ಅವರ ಡ್ಯಾನ್ಸ್‌ಗೆ ದೊಡ್ಡ ಅಭಿಮಾನಿ" ಎಂದು ಹೇಳಿದ್ದಾರೆ.
ಜ್ಯೂ. ಎನ್‌ಟಿಆರ್ ರೀತಿಯ ಗ್ರೇಟ್ ಡ್ಯಾನ್ಸರ್ ದಳಪತಿ ವಿಜಯ್ ಡ್ಯಾನ್ಸ್ ಬಗ್ಗೆ ಇಷ್ಟೆಲ್ಲಾ ಹೊಗಳುವ ಅವಶ್ಯಕತೆ ಇಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ವಿಜಯ್ ಡ್ಯಾನ್ಸ್ ಬಗ್ಗೆ ಕೆಲ ತೆಲುಗು ಪ್ರೇಕ್ಷಕರು ಟ್ರೋಲ್ ಮಾಡುತ್ತಿರುತ್ತಾರೆ. ಅಂತಹ ವಿಜಯ್ ಡ್ಯಾನ್ಸ್ ಬಗ್ಗೆ ತಾರಕ್ ಕೊಂಡಾಡಿರುವುದು ಯಾಕೆ ಗೊತ್ತಿಲ್ಲ, ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 'ದೇವರ' ಸಕ್ಸಸ್‌ಗಾಗಿ ತಮಿಳು ಪ್ರೇಕ್ಷಕರನ್ನು ಸೆಳೆಯಲು ತಾರಕ್ ಹೀಗೆಲ್ಲಾ ಮಾತನಾಡಿದ್ರಾ? ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ.
ತಮಿಳು ಪ್ರೇಕ್ಷಕರ ಮನಗೆಲ್ಲಲು ಸುದ್ದಿಗೋಷ್ಠಿಯಲ್ಲಿ ತಮಿಳು ಮಾತನಾಡಿದ್ದು ಆಯಿತು. ನಿರ್ದೇಶಕ ವೆಟ್ರಿಮಾರನ್ ಬಳಿ ಸಿನಿಮಾ ಮಾಡುವಂತೆ ಮನವಿ ಮಾಡಿದ್ದು ಆಯಿತು. ಈಗ ವಿಜಯ್ ಡ್ಯಾನ್ಸ್ ಬಗ್ಗೆ ಬಹುಪರಾಕ್ ಎನ್ನುತ್ತಿದ್ದೀರಾ? ಎಂದು ಕೆಲ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಆದರೆ ತಾರಕ್ ಅಭಿಮಾನಿಗಳು ಮಾತ್ರ ಇದನ್ನು ಒಪ್ಪಲು ಸಿದ್ಧರಿಲ್ಲ. ದಶಕಗಳ ಹಿಂದೆಯೇ ದಳಪತಿ ಡ್ಯಾನ್ಸ್ ಬಗ್ಗೆ ಜ್ಯೂ. ಎನ್‌ಟಿಆರ್ ಮಾತನಾಡಿರುವ ವಿಡಿಯೋ ವೈರಲ್ ಮಾಡುತ್ತಿದ್ದಾರೆ.


Click it and Unblock the Notifications











