'ದೇವರ' ಚಿತ್ರಕ್ಕೆ ಸೆನ್ಸಾರ್ ಶಾಕ್; ಯಾವೆಲ್ಲಾ ದೃಶ್ಯಗಳಿಗೆ ಕತ್ತರಿ ಬಿತ್ತು?
ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 27ಕ್ಕೆ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರ್ತಿದೆ. ಚಿತ್ರದಲ್ಲಿ ದ್ವಿಪಾತ್ರದಲ್ಲಿ ತಾರಕ್ ಅಬ್ಬರಿಸಿದ್ದಾರೆ. ಎರಡು ಭಾಗಗಳಾಗಿ ಸಿನಿಮಾ ಮೂಡಿ ಬರ್ತಿದ್ದು ಮೊದಲ ಭಾಗ ಶೀಘ್ರದಲ್ಲೇ ತೆರೆಗಪ್ಪಳಿಸಲಿದೆ.
ಆಕ್ಷನ್ ಎಂಟರ್‌ಟ್ರೈನರ್ 'ದೇವರ' ಚಿತ್ರಕ್ಕೆ ಕೊರಟಾಲ ಶಿವ ಸಾರಥ್ಯ ವಹಿಸಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ಮಿಂಚಿದ್ದು ಸೈಫ್ ಅಲಿಖಾನ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ನಲ್ಲಿ ಕಲ್ಯಾಣ್ ರಾಮ್ ಚಿತ್ರಕ್ಕೆ ಹಣ ಹಾಕಿದ್ದಾರೆ. ಅಕ್ಟೋಬರ್ 11ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ನಡೆದಿತ್ತು. ಅದೇ ದಿನ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಬಿಡುಗಡೆ ಆಗುತ್ತದೆ ಎಂದು ತಿಳಿದು ರಿಲೀಸ್ ಡೇಟ್ ಬದಲಿಸಲಾಗಿತ್ತು.

ಇತ್ತೀಚೆಗೆ 'ದೇವರ' ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. 35 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿ ಸದ್ದು ಮಾಡ್ತಿದೆ. ಸದ್ಯ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಒಂದೆರಡು ಸನ್ನಿವೇಶಕ್ಕೆ ಕತ್ತರಿ ಹಾಕಿದೆ. ಒಂದು ಸನ್ನಿವೇಶದಲ್ಲಿ ಬದಲಾವಣೆ ಸೂಚಿಸಿ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ. ಇನ್ನು ಸೆನ್ಸಾರ್ ಬಳಿಕ ಚಿತ್ರದ ಕಾಲಾವಧಿ 2 ಗಂಟೆ 47 ನಿಮಿಷ ಎನ್ನುವುದು ಗೊತ್ತಾಗಿದೆ.
ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಹೊಟ್ಟೆಗೆ ಒದೆಯುವ ದೃಶ್ಯ, ದೇಹವನ್ನು ಕತ್ತಿಯಿಂದ ಕತ್ತರಿಸಿವುದು, ಒಂದು ಮಗು ಹಾಗೂ ತಾಯಿಯನ್ನು ಥಳಿಸುವ ಸನ್ನಿವೇಶಗಳಿಗೆ ಕತ್ತರಿ ಹಾಕಲು ಸೂಚಿಸಲಾಗಿದೆ ಎನ್ನಲಾಗ್ತಿದೆ. ಇಂತಹ ಸನ್ನಿವೇಶಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸೆನ್ಸಾರ್ ಮಂಡಳಿ ಹೇಳಿದೆ ಎಂದು ವರದಿಯಾಗಿದೆ. ಇನ್ನು ಕ್ಲೈಮ್ಯಾಕ್ಸ್‌ನಲ್ಲಿ ತಿಮಿಂಗಲ ಮೇಲೇರಿ ನಾಯಕ ಬರುವಂತೆ ಒಂದು ಸನ್ನಿವೇಶವಿದೆ. ಅದನ್ನು ಗ್ರಾಫಿಕ್ಸ್ ಎಂದು ಉಲ್ಲೇಖಿಸುವಂತೆಯೂ ಸೆನ್ಸಾರ್ ಮಂಡಳಿ ತಿಳಿಸಿದೆ.
ಕಳೆದ 6 ವರ್ಷಗಳಲ್ಲಿ ಜ್ಯೂ. ಎನ್‌ಟಿಆರ್ ನಟಿಸಿದ ಒಂದೇ ಒಂದು ಸಿನಿಮಾ ತೆರೆಗೆ ಬಂದಿದೆ. 'RRR' ಸಿನಿಮಾ ಬಂದು ಎರಡೂವರೆ ವರ್ಷದ ಬಳಿಕ 'ದೇವರ' ಬರ್ತಿದ್ದಾನೆ. ಹಾಗಾಗಿ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ ತಾರಕ್ ಡಬಲ್ ರೋಲ್ ರೋಲ್ ಪ್ಲೇ ಮಾಡಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

'ಅದುರ್ಸ್', 'ಆಂಧ್ರಾವಾಲಾ' ಚಿತ್ರಗಳಲ್ಲಿ ಕೂಡ ದ್ವಿಪಾತ್ರದಲ್ಲಿ ತಾರಕ್ ನಟಿಸಿ ಗೆದ್ದಿದ್ದರು. 'ಜೈ ಲವಕುಶ' ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕೊರಟಾಲ ಶಿವ ಕೂಡ 'ಆಚಾರ್ಯ' ರೀತಿ ಫ್ಲಾಪ್ ಸಿನಿಮಾ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೇಗಾದರೂ ಮಾಡಿ 'ದೇವರ' ಚಿತ್ರ ಗೆಲ್ಲಿಸುವ ಪಣ ತೊಟ್ಟಿದ್ದಾರೆ. ಚಿತ್ರದ ಮೊದಲ ಭಾಗ ಈ ವರ್ಷ ತೆರೆಗೆ ಬರ್ತಿದ್ದು ಎರಡನೇ ಭಾಗ ಯಾವಾಗ? ಎನ್ನುವುದು ಗೊತ್ತಿಲ್ಲ.
ಸೆಪ್ಟೆಂಬರ್ 27ಕ್ಕೆ ತೆರೆಗೆ ಬರುವ ಮುನ್ನ ವಿದೇಶದಲ್ಲಿ 'ದೇವರ' ಪ್ರೀಮಿಯರ್ ನಡೆಯಲಿದೆ. ಸೆಪ್ಟೆಂಬರ್ 25ಕ್ಕೆ ಹಾಲಿವುಡ್ನ ಈಜಿಪ್ಟಿಯನ್ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಬಿಯಾಂಡ್ ಫೆಸ್ಟ್‌ನಲ್ಲಿ ಸಿನಿಮಾ ಸ್ಕ್ರೀನಿಂಗ್ ಆಗುತ್ತಿದ್ದು ತಾರಕ್ ಕೂಡ ಅಲ್ಲಿಗೆ ಹೋಗಿ ಭಾಗಿ ಆಗುವ ನಿರೀಕ್ಷೆಯಿದೆ.
'ದೇವರ' ಬಳಿಕ ತೆಲುಗಿನಲ್ಲಿ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತಾರಕ್ ನಟಿಸಲಿದ್ದಾರೆ. ಇತ್ತೀಚೆಗೆ ಸಿನಿಮಾ ಮುಹೂರ್ತ ಸಹ ನೆರವೇರಿದೆ. ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಬಹಳ ದೊಡ್ಡಮಟ್ಟದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ನೀಲ್ ನಿರ್ದೇಶನದಲ್ಲಿ ಯಂಗ್ ಟೈಗರ್ ನಟನೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. 2026ರ ಜನವರಿ 9ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











