'ದೇವರ' ರಕ್ತಸಿಕ್ತ ಅಧ್ಯಾಯದ ಝಲಕ್ ಹೇಗಿದೆ? ಯಂಗ್ ಟೈಗರ್ ಬಿರುದು ಕೈಬಿಟ್ಟಿದ್ದೇಕೆ ತಾರಕ್?
ಜ್ಯೂ. ಎನ್‌ಟಿಆರ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ದೇವರ' ಮತ್ತೆ ಸುದ್ದಿಯಲ್ಲಿದೆ. ಕಾರಣ ಫಸ್ಟ್ ಲುಕ್ ಟೀಸರ್. ಕೊರಟಾಲ ಶಿವ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರ್ತಿದೆ. ಚಿತ್ರದ ಫಸ್ಟ್ ಗ್ಲಿಂಪ್ಸ್‌ನಲ್ಲಿ ತಾರಕ್ ರಕ್ತದ ಓಕುಳಿಯ ಝಲಕ್ ನೋಡಬಹುದು.
ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆದಾಗಲೇ ಇದೊಂದು ಹೈವೋಲ್ಟೇಜ್ ಆಕ್ಷನ್ ಸಿನಿಮಾ ಅನ್ನೋದು ಗೊತ್ತಾಗಿತ್ತು. ಇದೀಗ ಟೀಸರ್ ಬಂದು 'ದೇವರ' ಪ್ರಪಂಚದ ದರ್ಶನ ಮಾಡಿಸಿದೆ. ತಾರಕ್ ಆರ್ಭಟಕ್ಕೆ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಚಿತ್ರದ ನಾಯಕನನ್ನು ಬಹಳ ಟೆರಿಫಿಕ್ ಆಗಿ ತೋರಿಸಿದ್ದು ಸಿಕ್ಕಾಪಟ್ಟೆ ವಯಲೆನ್ಸ್ ಇರೋದು ಗೊತ್ತಾಗುತ್ತಿದೆ.

ಕಂಟೈನರ್‌ಗಳು ತುಂಬಿದ ನೌಕೆ ಸಮುದ್ರಲ್ಲಿ ನಿಂತಿರುತ್ತದೆ. ಕೂಡಲೇ ಕೆಲವರು ಅದರ ಮೇಲೆ ಏರಿ ಕಂಟೈನರ್‌ಗಳನ್ನು ಇಳಿಸಲು ಮುಂದಾಗುವುದರೊಂದಿಗೆ ಟೀಸರ್ ಶುರುವಾಗುತ್ತದೆ. ಕೆಲವರು ಸಮುದ್ರಕ್ಕೆ ಬೀಳುತ್ತಿದ್ದಂತೆ ನೀರು ಕೆಂಪಗಾಗುತ್ತದೆ. ಕೂಡಲೇ ಸಮುದ್ರ ದಡದಲ್ಲಿ ತಾರಕ್ ಆರ್ಭಟ ಶುರುವಾಗುತ್ತದೆ. ಕತ್ತಿ, ಕೊಡಲಿ ರೀತಿಯ ಆಯುಧಗಳನ್ನು ಹಿಡಿದು ಎದುರಾಳಿಗಳನ್ನು ನಾಯಕ ನೆಲಕುಳಿರುಳಿಸಿಬಿಡುತ್ತಾನೆ. ರಕ್ತ ಮೆತ್ತಿದ ಆಯುಧವನ್ನು ಅದೇ ಸಮುದ್ರದಲ್ಲಿ ತೊಳೆಯುತ್ತಾನೆ.
"ಈ ಸಮುದ್ರ ಮೀನುಗಳಿಗಿಂತ ಕತ್ತಿನ, ರಕ್ತನ ಜಾಸ್ತಿ ನೋಡಿದೆ. ಅದಕ್ಕೆ ಇದನ್ನ ಕೆಂಪು ಸಮುದ್ರ ಅಂತಾರೆ" ಎನ್ನುವ ತಾರಕ್ ಮಾಸ್ ಡೈಲಾಗ್ ಜೊತೆಗೆ ಟೀಸರ್ ಮುಕ್ತಾಯವಾಗುತ್ತದೆ. ಆಕ್ಷನ್ ಸೀಕ್ವೆನ್ಸ್‌ನಲ್ಲಿ ಎದುರಾಳಿಯ ಎದೆಗಿಳಿಸಿದ ಕತ್ತಿಯಿಂದ ಕಾರಿದ ರಕ್ತ ಚಂದ್ರನಿಗೆ ರಾಚುವಂತೆ ತೋರಿಸಿರುವ ಫ್ರೇಮ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ. ಇನ್ನು ಕನ್ನಡದಲ್ಲೂ ಜ್ಯೂ. ಎನ್‌ಟಿಆರ್ ಡಬ್ ಮಾಡಿರುವುದು ಗೊತ್ತಾಗುತ್ತದೆ.

ಜ್ಯೂ. ಎನ್‌ಟಿಆರ್‌ನ ಅಭಿಮಾನಿಗಳು ಯಂಗ್ ಟೈಗರ್ ಅಂತ್ಲೇ ಕರೆಯುತ್ತಾರೆ. ಹಲವು ವರ್ಷಗಳಿಂದ ಇದೇ ಬಿರುದು ಅವರ ಹೆಸರಿನ ಜೊತೆಗೆ ಸೇರಿಕೊಂಡಿತ್ತು. ಆದರೆ 'ದೇವರ' ಚಿತ್ರದಿಂದ ಅದು ಬದಲಾಗಿದೆ. 'ಮ್ಯಾನ್ ಆಫ್ ಮಾಸಸ್' ಎನ್‌ಟಿಆರ್ ಎಂದು ಚಿತ್ರತಂಡ ಕರೆದಿದೆ. ಇನ್ನುಮುಂದೆ ಇದೇ ಟೈಟಲ್ ತಾರಕ್ ಹೆಸರಿನ ಜೊತೆ ಉಳಿದುಕೊಳ್ಳುತ್ತಾ ಕಾದು ನೋಡಬೇಕಿದೆ. ಈ ಹಿಂದೆ ಅಭಿಮಾನಿಗಳು ಈ ಬಿರುದು ಕೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ಇದೀಗ ಚಿತ್ರತಂಡವೇ ಅಧಿಕೃತವಾಗಿ ಸಿನಿಮಾ ಟೈಟಲ್ ಕಾರ್ಡ್‌ನಲ್ಲಿ ಹಾಕಿದೆ.
'ದೇವರ' ಚಿತ್ರದಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಸೈಫ್ ಅಲಿಖಾನ್ ವಿನ್ ಆಗಿ ಅಬ್ಬರಿಸುತ್ತಿದ್ದು ಪ್ರಕಾಶ್ ರಾಜ್, ಶ್ರೀಕಾಂತ್, ಮುರಳಿ ಶರ್ಮಾ ಸೇರಿದಂತೆ ಘಟಾನುಘಟಿ ಕಲಾವಿದರು ತಾರಾಗಣದಲ್ಲಿದ್ದಾರೆ. ರತ್ನವೇಲು ಸಿನಿಮಾಟೋಗ್ರಫಿ, ಅನಿರುದ್ಧ್ ಸಂಗೀತ ಚಿತ್ರಕ್ಕಿದೆ. ಸುಧಾಕರ್ ಮಿಕ್ಕಿಲಿನೇನಿ ಹಾಗೂ ಕಲ್ಯಾಣ್ ರಾಮ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮೂಡಿ ಬರ್ತಿದೆ.
ಏಪ್ರಿಲ್ 5ಕ್ಕೆ 'ದೇವರ': ಪಾರ್ಟ್ 1 ಸಿನಿಮಾ ರಿಲೀಸ್ ಆಗಲಿದೆ. ಇನ್ನು ಟೀಸರ್ ಹಿನ್ನೆಲೆಯಲ್ಲಿ ಇಂಗ್ಲೀಷ್ ಸಾಹಿತ್ಯ ಹಾಡು ಕೇಳಿ ಬರುತ್ತದೆ. ಇದರ ಅರ್ಥ ಎನ್ನುವುದನ್ನು ಆಧರಿಸಿ ಕೆಲವರು ಇದು ತಂದೆ ಮಗನ ಕಥೆ ಎಂದು ಊಹಿಸುತ್ತಿದ್ದಾರೆ. ತಾರಕ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. 'ಬಾಹುಬಲಿ' ಹಾಗೂ 'ಸಲಾರ್' ರೀತಿ ತಂದೆ ಮಗನ ಕಥೆಯನ್ನು ಎರಡು ಭಾಗಗಳಾಗಿ ತೆರೆಗೆ ತರುತ್ತಿದ್ದಾರೆ ಎನ್ನುವ ಚರ್ಚೆ ನಡೀತಿದೆ.


Click it and Unblock the Notifications











