ವ್ಹಾ,ಏನ್ ಆಕ್ಟಿಂಗ್ ಗುರು;ದಿ ಗರ್ಲ್‌ಫ್ರೆಂಡ್ ಚಿತ್ರಕ್ಕೆ ರಶ್ಮಿಕಾಗೆ ರಾಷ್ಟ್ರಪ್ರಶಸ್ತಿ ಸಿಗಬೇಕೆಂದ ಸಂಗೀತ ನಿರ್ದೇಶಕ
''ಕಿರಿಕ್ ಪಾರ್ಟಿ'' ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ. ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ತುಂಬಾನೇ ಸಲೀಸು ಎಂಬಂತೆ ನಡೆದು ಹೋಗಿದೆ.
ಇಂಥಾ ರಶ್ಮಿಕಾ ಮಂದಣ್ಣ ಸದ್ಯ ''ದಿ ಗರ್ಲ್‌ಫ್ರೆಂಡ್'' ಚಿತ್ರ ಮಾಡಿದ್ದಾರೆ. ಸದ್ಯ ಈ ಚಿತ್ರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಚಿತ್ರ ನೋಡಿದವರೆಲ್ಲಾ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಅಭಿನಯವನ್ನು ಬಾಯ್ತುಂಬಾ ಹೊಗಳುತ್ತಿದ್ದಾರೆ. 09 ವರ್ಷದ ವೃತ್ತಿ ಬದುಕಿನಲ್ಲಿ ರಶ್ಮಿಕಾ ಮಂದಣ್ಣ ಅವರ ಶ್ರೇಷ್ಠ ಚಿತ್ರ ''ದಿ ಗರ್ಲ್‌ಫ್ರೆಂಡ್'' ಎಂದೆಲ್ಲಾ ಹೇಳುತ್ತಿದ್ದಾರೆ.

ಕೇವಲ ಜನ ಸಾಮಾನ್ಯರು ಮಾತ್ರವಲ್ಲ. ಚಿತ್ರರಂಗದ ಹಲವರು '' ದಿ ಗರ್ಲ್‌ಫ್ರೆಂಡ್'' ಚಿತ್ರಕ್ಕೆ ಮನ ಸೋತಿದ್ದಾರೆ. ವ್ಹಾ.. ಅಬ್ಬಾ.. ಎಂದೆಲ್ಲಾ ಉದ್ಘಾರ ತೆಗೆಯುತ್ತಿದ್ದಾರೆ. ಅದ್ಭುತ .. ಅತ್ಯಮೋಘ .. ಅದ್ವೀತಿಯ .. ಎಂದೆಲ್ಲಾ ಚಿತ್ರದ ಕುರಿತು ವಿಮರ್ಶೆ ಮಾಡುತ್ತಿದ್ಧಾರೆ. ಉದಾಹರಣೆಗೆ ದೇವಿಶ್ರೀ ಪ್ರಸಾದ್.
ಹೌದು, ದೇವಿಶ್ರೀ ಪ್ರಸಾದ್. ಪಕ್ಕದ ಮನೆಯ ಪ್ರಖ್ಯಾತ ಸಂಗೀತ ನಿರ್ದೇಶಕ. ಮ್ಯೂಸಿಕ್ ಮಾಂತ್ರಿಕ. ತನ್ನ ಸಂಗೀತದಿಂದಲೇ ಎಲ್ಲರನ್ನೂ ಕುಂತಲ್ಲೇ ಕುಣಿಸುವ .. ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೇ ಗಾಯಕನಾಗಿ ಕೂಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ದೇವಿಶ್ರೀ ಪ್ರಸಾದ್ ಸದ್ಯ ''ದಿ ಗರ್ಲ್ ಫ್ರೆಂಡ್'' ಚಿತ್ರದ ವಿಮರ್ಶೆ ಮಾಡಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ದೇವಿಶ್ರೀ ಪ್ರಸಾದ್ ನಿಮ್ಮ ಅಭಿನಯಕ್ಕೆ ನಿಮಗೆ ರಾಷ್ಟ್ರಪ್ರಶಸ್ತಿಯನ್ನು ಕೊಡಬೇಕು ರಶ್ಮಿಕಾ ಎಂದು ಹೇಳಿದ್ದಾರೆ. ನಿಮ್ಮ ( ರಶ್ಮಿಕಾ ಮಂದಣ್ಣ ) ಅಭಿನಯ ಚಿತ್ರದಲ್ಲಿ ಮನ ಮುಟ್ಟುವಂತೆ ಇದೆ ಎಂದು ಹೇಳಿರುವ ದೇವಿಶ್ರೀ ಪ್ರಸಾದ್ ನೀವು ಕೇವು ಕೇವಲ ನ್ಯಾಷನಲ್ ಕ್ರಶ್ ಮಾತ್ರ ಅಲ್ಲ ಈ ಚಿತ್ರದಲ್ಲಿನ ಅಭಿನಯಕ್ಕೆ ನಿಮಗೆ ರಾಷ್ಟ್ರೀಯ ಪ್ರಶಸ್ತಿ ಸಿಗಬೇಕು ಎಂದು ಹೇಳಿದ್ದಾರೆ.
ಮುಂದುವರೆದು ರಶ್ಮಿಕಾ ಮಂದಣ್ಣ ಅವರ ಅಭಿನಯದ ನನ್ನನ್ನೂ ಮಂತ್ರ ಮುಗ್ದಗೊಳಿಸಿದೆ ಎಂದು ಹೇಳಿರುವ ದೇವಿಶ್ರೀ ಪ್ರಸಾದ್ ಪುಷ್ಪ.. ಅನಿಮಲ್.. ಛಾವಾ.. ಮತ್ತು ಕುಬೇರ ಚಿತ್ರಗಳಲ್ಲಿ ಮೋಡಿ ಮಾಡಿದ್ದ ನೀವು ಈ ಚಿತ್ರದಲ್ಲಿ ನಿಮ್ಮ ಪಾತ್ರವನ್ನು ಜೀವಿಸಿದ್ದೀರಾ ಎಂದು ಹೇಳಿದ್ದಾರೆ. ಹೀಗಾಗಿಯೇ ಆ ಪಾತ್ರಕ್ಕೆ ಅಷ್ಟೊಂದು ಸುಲಭವಾಗಿ ನಿಮ್ಮಿಂದ ಜೀವ ತುಂಬಲು ಸಾಧ್ಯವಾಗಿದ್ದು ಎಂದಿದ್ದಾರೆ. ಮನಸಿಗೆ ಮುಟ್ಟುವಂತಹ ಚಿತ್ರ, ವ್ಹಾ.. ಎಂದು ಬರೆದುಕೊಂಡಿದ್ದಾರೆ.

ನಿರ್ದೇಶಕ ರಾಹುಲ್ ರವೀಂದ್ರನ್ ಅವರ ನಿರ್ದೇಶನವನ್ನು ಕೂಡ ಮೆಚ್ಚಿಕೊಂಡಿರುವ ದೇವಿಶ್ರೀ ಪ್ರಸಾದ್ ಇಂತಹ ಸುಂದರ ಚಿತ್ರವನ್ನು ನಿರ್ಮಾಣ ಮಾಡಿದ ಗೀತಾ ಆರ್ಟ್ಸ್ ಸಂಸ್ಥೆಗೆ ಧನ್ಯವಾದ ಹೇಳಿದ್ದಾರೆ. ದೀಕ್ಷಿತ್ ಶೆಟ್ಟಿ ಮತ್ತು ಅನು ಇಮ್ಯಾನುಯೆಲ್ ಅವರ ಅಭಿನಯದ ಕುರಿತು ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ದೇವಿಶ್ರೀ ಪ್ರಸಾದ್ ಅವರ ಈ ಹೊಗಳಿಕೆಯಿಂದ ರಶ್ಮಿಕಾ ಮಂದಣ್ಣ ಅವರ ಸಂಭ್ರಮ ಇನ್ನೂ ಹೆಚ್ಚಾಗಿದೆ. ಹೀಗಾಗಿಯೇ ಸರ್ ಎಂದು ಹಾರ್ಟ್ ಎಮೋಜಿಯ ಜೊತೆ ರಿಪ್ಲೈ ಮಾಡಿದ್ದಾರೆ ರಶ್ಮಿಕಾ ಮಂದಣ್ಣ. ಇನ್ನುಳಿದಂತೆ ಸದ್ಯ '' ದಿ ಗರ್ಲ್‌ಫ್ರೆಂಡ್'' ಚಿತ್ರ ಎಲ್ಲೆಡೆ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಅದರಲ್ಲಿಯೂ ಆಂಧ್ರದಲ್ಲಿ ದಿನದಿಂದ ದಿನಕ್ಕೆ ''ದಿ ಗರ್ಲ್‌ಫ್ರೆಂಡ್'' ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ. ಮೋಡಿ ಮಾಡುತ್ತಿದೆ.


Click it and Unblock the Notifications











