"ಚಿರು ಸರ್ ಜೊತೆ ಆ ಚಿತ್ರದಲ್ಲಿ ನಾನು ನಟಿಸ್ಬೇಕಿತ್ತು, ಛೇ ಮಿಸ್ ಆಯ್ತು"; ಧನಂಜಯ್
ಪ್ಯಾನ್ ಇಂಡಿಯಾ ಸಿನಿಮಾ ಟ್ರೆಂಡ್ ಶುರುವಾದ ಬಳಿಕ ಸ್ಟಾರ್ ನಟರು ಗಡಿ ಮೀರಿ ಬೇರೆ ಭಾಷೆಗಳಲ್ಲಿ ನಟಿಸುವುದು ಹೆಚ್ಚಾಗಿದೆ. ಕನ್ನಡ ನಟರು ಹಿಂದೆ ಕೂಡ ಪರಭಾಷೆ ಚಿತ್ರಗಳಲ್ಲಿ ನಟಿಸುತ್ತಿದ್ದರು. ಆದರೆ ಇತ್ತೀಚೆಗೆ ಅದು ಮತ್ತಷ್ಟು ಹೆಚ್ಚಾಗುತ್ತಿದೆ. ನಟ ಡಾಲಿ ಧನಂಜಯ್ ಈಗಾಗಲೇ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸ್ತಿದ್ದಾರೆ.
ಧನಂಜಯ್ ನಟನೆಯ 'ಉತ್ತರಕಾಂಡ' ಸಿನಿಮಾ ಕಾರಣಾಂತರಗಳಿಂದ ನಿಂತಿದೆ. ಹಾಗಾಗಿ 'ಜಿಂಗೋ' ಚಿತ್ರದ ಕಡೆ ಮುಖ ಮಾಡಿದ್ದಾರೆ. 'ಅಣ್ಣ ಫ್ರಮ್ ಮೆಕ್ಸಿಕೊ', 'ನಾಡಪ್ರಭು ಕೆಂಪೇಗೌಡ' ಸಿನಿಮಾಗಳು ಶುರುವಾಗಬೇಕಿದೆ. ಇದೆಲ್ಲದರ ನಡುವೆ ಧನು ನಟನೆಯ 'ಪುಷ್ಪ'-2 ಹಾಗೂ 'ಜೀಬ್ರಾ' ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿದೆ.

ತೆಲುಗಿನ 'ಜೀಬ್ರಾ' ಸಿನಿಮಾ ಮುಂದಿನ ವಾರ ತೆರೆಗೆ ಬರಲಿದೆ. ಸದ್ಯ ಚಿತ್ರದ ಪ್ರಚಾರದಲ್ಲಿ ಧನು ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರದ ಸುದ್ದಿಗೋಷ್ಠಿ ನಡೆದಿತ್ತು. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆಯಿತು. ನಟ ಧನಂಜಯ್ ಸಹ ಭಾಗಿ ಆಗಿದ್ದರು. ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ವೇದಿಕೆ ಏರಿ ಧನಂಜಯ್ ಮಾತನಾಡುತ್ತಾ ಕಾರ್ಯಕ್ರಮಕ್ಕೆ ಬಂದ ಬೆಂಬಲ ಸೂಚಿಸಿದ ನಟ ಚಿರಂಜೀವಿಗೆ ಧನ್ಯವಾದ ತಿಳಿಸಿದರು. ಈ ವೇಳೆ ನಿಮ್ಮೊಟ್ಟಿಗೆ 'ವಾಲ್ತೇರು ವೀರಯ್ಯ' ಚಿತ್ರದಲ್ಲಿ ನಾನು ನಟಿಸಬೇಕಿತ್ತು. ಬಾಬಿ ಸಿಂಹ ಮಾಡಿದ್ದ ಪಾತ್ರ ನಾನೇ ಮಾಡಬೇಕಿತ್ತು. ಆದರೆ ಸಾಧ್ಯವಾಗಲಿಲ್ಲ. ಆ ಅವಕಾಶ ಮಿಸ್ ಆಗಿತ್ತು. ಖಂಡಿತ ನಿಮ್ಮ ಜೊತೆ ಕೆಲಸ ಮಾಡುವ ಆಸೆ ಇದೆ" ಎಂದು ಹೇಳಿದ್ದಾರೆ.

ಇನ್ನು 'ಜೀಬ್ರಾ' ಬಗ್ಗೆ ಹೇಳುವುದಾದರೆ ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾ. ನೈಜ ಘಟನೆಗಳಿಂದ ಪ್ರೇರಣೆಗೊಂಡು ಕತೆ ಹೆಣೆಯಲಾಗಿದೆ. ಬ್ಯಾಂಕ್ ಫ್ರಾಡ್ ಸುತ್ತಾ ಚಿತ್ರದ ಕತೆ ಸುತ್ತಲಿದೆ. ಈಶ್ವರ್ ಕಾರ್ತಿಕ್ ನಿರ್ದೇಶನದ ಚಿತ್ರದಲ್ಲಿ ಸತ್ಯದೇವ್ ಹೀರೊ ಆಗಿ ನಟಿಸಿದ್ದಾರೆ. ಆದಿ ಎಂಬ ಖಡಕ್ ರೋಲ್‌ನಲ್ಲಿ ಧನಂಜಯ್ ಅಬ್ಬರಿಸಿದ್ದಾರೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ.
ಕಳೆದ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ 'ವಾಲ್ತೇರು ವೀರಯ್ಯ' ಸಿನಿಮಾ ತೆರೆಗೆ ಬಂದು ಗೆದ್ದಿತ್ತು. ಬಾಬಿ ಕೊಲ್ಲಿ ನಿರ್ದೇಶನದ ಚಿತ್ರದಲ್ಲಿ ಚಿರಂಜೀವಿ ಜೊತೆ ಮತ್ತೊಂದು ಮುಖ್ಯ ಪಾತ್ರದಲ್ಲಿ ರವಿತೇಜಾ ನಟಿಸಿದ್ದರು. ಚಿತ್ರದಲ್ಲಿ ಸೊಲೊಮನ್ ಸೀಸರ್ ಎಂಬ ಪಾತ್ರದಲ್ಲಿ ಬಾಬಿ ಸಿಂಹ ಅಬ್ಬರಿಸಿದ್ದರು. ಅಂದಾಜು 140 ಕೋಟಿ ರೂ. ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ 240 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
'ಪುಷ್ಪ' ಚಿತ್ರದಲ್ಲಿ ಜಾಲಿ ರೆಡ್ಡಿಯಾಗಿ ಧನಂಜಯ್ ನಟಿಸಿದ್ದು ಗೊತ್ತೇಯಿದೆ. ಸದ್ಯ ಚಿತ್ರದ ಸೀಕ್ವೆಲ್ ಡಿಸೆಂಬರ್ 5ಕ್ಕೆ ತೆರೆಗೆ ಬರಲಿದೆ. ಮೊದಲ ಭಾಗದಲ್ಲಿದ್ದ ಸಾಕಷ್ಟು ಪಾತ್ರಗಳು ಎರಡನೇ ಭಾಗದಲ್ಲಿ ಸಹ ಇರಲಿದೆ. ನೆಗೆಟಿವ್ ಜಾಲಿ ರೆಡ್ಡಿ ಪಾತ್ರ ಕೂಡ ಮುಂದುವರೆಯಲಿದ್ದು ಧನಂಜಯ್ ಮತ್ತೆ ಬಣ್ಣ ಹಚ್ಚಿ ನಟಿಸಿದ್ದಾರೆ. ಸುಕುಮಾರ್ ನಿರ್ದೇಶನದ ಚಿತ್ರದಲ್ಲಿ ಅಲ್ಲು ಅರ್ಜುನ್ ಹೀರೊ ಆಗಿ ಮಿಂಚಿದ್ದಾರೆ.
ಇತ್ತೀಚೆಗೆ ನಟ ಧನಂಜಯ್ ತಮ್ಮ ಮದುವೆ ವಿಚಾರ ಹಂಚಿಕೊಂಡಿದ್ದರು. ಗೆಳತಿ ಧನ್ಯತಾ ಜೊತೆ ಹಸೆಮಣೆ ಏರುತ್ತಿರುವುದಾಗಿ ದೀಪಾವಳಿ ಸಂಭ್ರಮದಲ್ಲಿ ತಿಳಿಸಿದ್ದರು. ಮುಂದಿನ ವರ್ಷ ಫೆಬ್ರವರಿಯಲ್ಲಿ ಧನು ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ವೃತ್ತಿಯಲ್ಲಿ ಆಕೆ ಗೈನೋಕಾಲಾಜಿಸ್ಟ್ ಆಗಿದ್ದಾರೆ. ಕೆಲ ವರ್ಷಗಳ ಪರಿಚಯ ಬಳಿಕ ಪ್ರೀತಿಗೆ ತಿರುಗಿ ಇದೀಗ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.


Click it and Unblock the Notifications











