ವೇದಿಕೆಯಲ್ಲಿ ತಮಾಷೆ ಮಾಡಿದ ಆಂಕರ್ ಸುಮಾಗೆ ಕನ್ನಡ ನಟ ದೀಕ್ಷಿತ್ ಕೌಂಟರ್
ತೆಲುಗಿನ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಕನ್ನಡದ ಕಲಾವಿದರಾದ ದೀಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಸಕ್ಸಸ್ ಮೀಟ್ ನಡೀತು. ವೇದಿಕೆಯಲ್ಲಿ ನಿರೂಪಕಿ ಸುಮಾಗೆ ದೀಕ್ಷಿತ್ ತಮಾಷೆಯಾಗಿ ತಿರುಗೇಟು ಕೊಟ್ಟಿದ್ದಾರೆ.
ರಾಹುಲ್ ರವೀಂದ್ರನ್ ನಿರ್ದೇಶದ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಮುಖ್ಯವಾಗಿ ಹೆಣ್ಣುಮಕ್ಕಳು ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬರೆದು ಮತ್ತಷ್ಟು ಜನರನ್ನು ಸಿನಿಮಾ ನೋಡುವಂತೆ ಹುರಿದುಂಬಿಸುತ್ತಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್ ನಿರ್ಮಾಣದ ಸಿನಿಮಾ ಮೊದಲ ವಾರವೇ 20 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ.

ಟಾಕ್ಸಿಕ್ ಬಾಯ್‌ಫ್ರೆಂಡ್ ಕಾರಣಕ್ಕೆ ನರಕ ಯಾತನೆ ಅನುಭವಿಸುವ ಯುವತಿಯ ನೋವಿನ ಕಥೆ ಚಿತ್ರದಲ್ಲಿದೆ. ಹೈದರಾಬಾದ್‌ನಲ್ಲಿ ನಡೆದ 'ದಿ ಗರ್ಲ್‌ಫ್ರೆಂಡ್' ಚಿತ್ರದ ಸಕ್ಸಸ್ ಮೀಟ್‌ಗೆ ವಿಜಯ್ ದೇವರಕೊಂಡ ಮುಖ್ಯ ಅತಿಥಿಯಾಗಿ ಆಗಮಿಸಿ ತಂಡದ ಬೆಂಬಲಕ್ಕೆ ನಿಂತಿದ್ದರು. ಇಡೀ ತಂಡದ ಕೆಲಸಕ್ಕೆ ಮೆಚ್ಚಗೆ ಸೂಚಿಸಿದ್ದರು. ಮುಖ್ಯವಾಗಿ ರಶ್ಮಿಕಾ ನಟನೆ ಕೊಂಡಾಡಿದ್ದರು.
ನಿರೂಪಕಿ ಸುಮಾ ಕಾರ್ಯಕ್ರಮದ ನಿರೂಪಣೆ ಮಾಡಿದ್ದರು. ಮಾತಿನ ಮಲ್ಲಿ ತಮ್ಮ ಪಟ ಪಟ ಮಾತುಗಳಿಂದ ಎಲ್ಲರ ಗಮನ ಸೆಳೆಯುತ್ತಾರೆ. ತೆಲುಗಿನಲ್ಲಿ ಹೆಚ್ಚು ಸಂಭಾವನೆ ಪಡೆಯುವ ಜನಪ್ರಿಯ ನಿರೂಪಕಿ ಎನಿಸಿಕೊಂಡಿದ್ದಾರೆ. ಸಂಭಾವನೆ ವಿಚಾರಕ್ಕೆ ದೀಕ್ಷಿತ್ ಹಾಗೂ ಸುಮಾ ನಡುವೆ ವೇದಿಕೆಯಲ್ಲಿ ಚರ್ಚೆ ನಡೆದಿದೆ. ಕೊನೆಗೆ ದೀಕ್ಷಿತ್ ಕೌಂಟರ್‌ಗೆ ಸುಮಾ ಶಾಕ್ ಆಗಿದ್ದರು.
ದೀಕ್ಷಿತ್ ಮಾತನಾಡಿ "ಸುಮ ನಿಮಗೆ ನಾನು ಧನ್ಯವಾದ ತಿಳಿಸಬೇಕು. ಕಾರಣ ನಿಮ್ಮ ಸಂದರ್ಶನವೊಂದರಲ್ಲಿ ನನ್ನನ್ನು ನೋಡಿ ಈ ಚಿತ್ರದ ವಿಕ್ರಂ ಪಾತ್ರಕ್ಕೆ ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿದ್ರಂತೆ. ಹಾಗಾಗಿ ನಿಮಗೆ ಆ ಕ್ರೆಡಿಟ್ ಸಲ್ಲಬೇಕು" ಎಂದಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿದ ಸುಮಾ "ಹಾಗದ್ದರೆ ನಿಮ್ಮ ಸಂಭಾವನೆಯಲ್ಲಿ ನನಗೂ ಪಾಲು ಕೊಡಬೇಕು" ಎಂದು ಕೇಳಿದ್ದಾರೆ.
ಸುಮಾ ಮಾತಿಗೆ ಪ್ರತಿಕ್ರಿಯಿಸಿದ ದೀಕ್ಷಿತ್ "ನಾನು ಹೊರಗೆ ಕಾರಿನಲ್ಲಿ ಕೂತಿದ್ದೆ. ಆಗ ಪಕ್ಕದಲ್ಲಿ ಒಂದು ದೊಡ್ಡ ಕಾರ್ ಬಂದು ನಿಂತಿತ್ತು. ನಾನು ಅಲ್ಲು ಅರ್ಜುನ್ ಸರ್ ಬಂದ್ರಾ ಅಂದೆ. ಇಲ್ಲ ಆಂಕರ್ ಸುಮಾ ಬಂದ್ರು ಅಂತ ಹೇಳಿದ್ರು. ನಿಮ್ಮ ಸಂಭಾವನೆಯಲ್ಲೇ ನನಗೆ ಪಾಲು ಕೊಡಿ" ಎಂದು ತಮಾಷೆಯಾಗಿ ಕೌಂಟರ್ ಕೊಟ್ಟಿದ್ದಾರೆ. ಶಾಕ್ ಆದ ಸುಮಾ, ದೊಡ್ಡ ಕಾರು ಅಂದ್ರು, ಇನ್ನೋವಾದಲ್ಲಿ ಬಂದೆ ಎಂದು ಮಾತು ತೇಲಿಸಿ ನಗು ಬೀರಿದ್ದಾರೆ.
ಕುಂದಾಪುರದ ಮೂಲದ ನಟ ದೀಕ್ಷಿತ್ ಶೆಟ್ಟಿ ಈಗ ಪರಭಾಷಾ ಸಿನಿಮಾಗಳಲ್ಲಿ ಹೆಚ್ಚು ಕ್ರೇಜ್ ಸಂಪಾದಿಸಿಕೊಂಡಿದ್ದಾರೆ. 'ದಿಯಾ' ಹಾಗೂ 'ಬ್ಲಿಂಕ್' ರೀತಿಯ ಸಿನಿಮಾಗಳಲ್ಲಿ ನಟಿಸಿ ಗೆದ್ದ ದೀಕ್ಷಿತ್ ತೆಲುಗಿನಲ್ಲಿ ಕೂಡ ಒಂದಷ್ಟು ಚಿತ್ರಗಳಲ್ಲಿ ಮಿಂಚಿದ್ದಾರೆ. 'ದಸರಾ' ಚಿತ್ರದಲ್ಲಿ ನಾನಿ ಜೊತೆ ನಟಿಸಿ ಗೆದ್ದಿದ್ದರು. ಈಗ 'ದಿ ಗರ್ಲ್‌ಫ್ರೆಂಡ್' ಚಿತ್ರದ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.
ಮುಂದೆ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕೂಡ ದೀಕ್ಷಿತ್ ಶೆಟ್ಟಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಕೂಡ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದು ಶೀಘ್ರದಲ್ಲೇ ಹೊಸ ಸಿನಿಮಾ ಘೋಷಣೆ ಆಗಲಿದೆ. ನಿರೂಪಕಿ ಸುಮಾ ತಮ್ಮ ನಿರರ್ಗಳ ಮಾತು, ನಿರೂಪಣಾ ಶೈಲಿನಿಂದ ಗಮನ ಸೆಳೆಯುತ್ತಿದ್ದಾರೆ. ಕಿರುತೆರೆ ಶೋಗಳು, ವೇದಿಕೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಸೈ ಎನಿಸಿಕೊಂಡವರು. ಆಕೆಗೂ ದೊಡ್ಡ ಅಭಿಮಾನಿ ಬಳಗವಿದೆ. ಸುಮಾ ಅವರ ಪತಿ ರಾಜು ಕನಕಾಲ ತೆಲುಗು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ.


Click it and Unblock the Notifications











