ಈ ವಯಸ್ಸಲ್ಲಿ ಹೆಸರು ಬದಲಾಯಿಸಿಕೊಂಡರೇಕೆ ಚಿರಂಜೀವಿ! ಕಾರಣವೇನು?
ಮೆಗಾಸ್ಟಾರ್ ಚಿರಂಜೀವಿ ಅದೃಷ್ಟದಿಂದ ಸ್ಟಾರ್ ಆದವರಲ್ಲ ಶ್ರಮಪಟ್ಟು ಸ್ಟಾರ್ ಆದವರು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಸಣ್ಣ ಊರಿನ ಸಣ್ಣ ಕುಟುಂಬದಿಂದ ಬಂದು ವಿಲನ್ ಆಗಿ ನಟಿಸಿ ನಂತರ ನಾಯಕ ನಟನಾಗಿ, ನಂತರ ಸ್ಟಾರ್ ಆದವರು ಚಿರಂಜೀವಿ.
ಚಿರಂಜೀವಿಗೆ ಈಗ 66 ವರ್ಷ ವಯಸ್ಸು, ಈಗಲೂ ಒಂದರ ಹಿಂದೊಂದು ಸಿನಿಮಾ ಮಾಡುತ್ತಿದ್ದಾರೆ. ಅಭಿಮಾನಿಗಳು ಚಿರಂಜೀವಿ ಸಿನಿಮಾ ಒಂದು ಬಿಡುಗಡೆ ಆಗಲಿ ಎಂದು ಕಾತರದಿಂದ ಕಾಯುತ್ತಿದ್ದಾರೆ. ಹಾಗೆಂದು ಚಿರಂಜೀವಿಗೆ ಕೇವಲ ಯಶಸ್ಸೇ ಧಕ್ಕುತ್ತಿದೆ ಎಂದೇನೂ ಇಲ್ಲ. ಚಿರಂಜೀವಿ ನಟಿಸಿದ 'ಆಚಾರ್ಯ' ಸಿನಿಮಾ ದೊಡ್ಡ ಫ್ಲಾಪ್ ಆಯಿತು.
ಆದರೆ ಕಷ್ಟಪಟ್ಟೇ ಮೇಲೆ ಬಂದ ಚಿರಂಜೀವಿ ದೊಡ್ಡ ಮಟ್ಟದ ಸ್ಟಾರ್ ಗಿರಿ ದೊರಕಿದ ಬಳಿಕ ಅದೃಷ್ಟದ ಮೊರೆ ಹೋಗಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಅದಕ್ಕೆ ಕಾರಣ, ಚಿರಂಜೀವಿ ಅವರ ಹೊಸ ಸಿನಿಮಾ 'ಗಾಡ್‌ಫಾದರ್' ನ ಟೀಸರ್.
ಚಿರಂಜೀವಿ ನಟಿಸುರುವ ಹೊಸ ಸಿನಿಮಾ 'ಗಾಡ್ ಫಾದರ್'ನ ಟೀಸರ್ ಇದೀಗ ಬಿಡುಗಡೆ ಆಗಿದ್ದು, ಟೀಸರ್‌ನಲ್ಲಿ ಚಿರಂಜೀವಿ ಹೆಸರು ಬದಲಾವಣೆ ಆಗಿದೆ. ಇಷ್ಟು ದಿನ ಚಿರಂಜೀವಿಯ ಯಾವುದೇ ಸಿನಿಮಾ ಅಥವಾ ಟ್ರೈಲರ್ ಬಂದರೂ ಅದರಲ್ಲಿ 'Chiranjeevi' ಎಂದು ಇಂಗ್ಲೀಷ್‌ನಲ್ಲಿ ಬರೆದಿರುತ್ತಿತ್ತು. ಆದರೆ ಈಗ ಬಿಡುಗಡೆ ಆಗಿರುವ 'ಗಾಡ್ ಫಾದರ್' ಟೀಸನ್‌ನಲ್ಲಿ ಒಂದು E ಹೆಚ್ಚುವರಿ ಸೇರಿಕೊಂಡು 'Chiranjeeevi' ಎಂದಾಗಿದೆ.

'ಆಚಾರ್ಯ' ಸೋಲಿನಿಂದಾಗಿ ಈ ನಿರ್ಧಾರ!
ಸಂಖ್ಯಾಶಾಸ್ತ್ರಜ್ಞರ ಸಲಹೆಯಂತೆ ಚಿರಂಜೀವಿ ಹೀಗೆ ತಮ್ಮ ಹೆಸರಿಗೆ ಒಂದು ಹೆಚ್ಚುವರಿ ಅಕ್ಷರ ಸೇರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. 'ಆಚಾರ್ಯ' ಸಿನಿಮಾ ಧಾರುಣವಾಗಿ ಸೋಲು ಕಂಡ ಕಾರಣ ಚಿರಂಜೀವಿ ಸಂಖ್ಯಾಶಾಸ್ತ್ರಜ್ಞರನ್ನು ಭೇಟಿಯಾಗಿ ಸಲಹೆ ಕೇಳಿದ್ದು, ಅವರ ಸಲಹೆಯಂತೆ ಈ ಮಾರ್ಪಾಡು ಮಾಡಲಾಗಿದೆ ಎನ್ನಲಾಗುತ್ತಿದೆ.

ಅಲ್ಲಗಳೆದಿರುವ ಚಿರಂಜೀವಿ ಆಪ್ತವರ್ಗ
ಆದರೆ ಚಿರಂಜೀವಿ ಆಪ್ತವರ್ಗ ಇದನ್ನ ಅಲ್ಲಗಳೆದಿವೆ. ನಟ ಚಿರಂಜೀವಿ ಸಂಖ್ಯಾಶಾಸ್ತ್ರವನ್ನಾಗಲಿ, ಜ್ಯೋತಿಷ್ಯವನ್ನಾಗಲಿ ತೀರ ನಂಬುವಂತವರಲ್ಲ, ದೇವರ ಮೇಲೆ ಭಕ್ತಿಯಿಟ್ಟು ಶ್ರಮಪಟ್ಟು ಕೆಲಸ ಮಾಡುವುದರಲ್ಲಿ ಅವರಿಗೆ ನಂಬಿಕೆ ಇದೆ. ಸಂಖ್ಯಾಶಾಸ್ತ್ರ ನಂಬಿ ಯಶಸ್ಸಿಗಾಗಿ ಹೆಸರು ಬದಲಾಯಿಸಿಕೊಳ್ಳುವ ವ್ಯಕ್ತಿ ಚಿರಂಜೀವಿ ಅಲ್ಲ. ಇದು 'ಗಾಡ್ ಫಾದರ್' ಚಿತ್ರತಂಡದ ತಪ್ಪಾಗಿರಬಹುದು ಎಂದಿದ್ದಾರೆ.

ಟೀಸರ್ ಬಿಡುಗಡೆ ಆಗಿದೆ
ಇದೀಗ 'ಗಾಡ್ ಫಾದರ್' ಸಿನಿಮಾದ ಸಣ್ಣ ಟೀಸರ್ ಅಷ್ಟೆ ಬಿಡುಗಡೆ ಆಗಿದ್ದು, ಟೀಸರ್‌ನಲ್ಲಿ ಕಪ್ಪು ಬಣ್ಣದ ಹಳೆಯ ಕಾರಿನಲ್ಲಿ ಬರುವ ಚಿರಂಜೀವಿ ಕಪ್ಪು ಬಣ್ಣದ ಉಡುಪು ತೊಟ್ಟು ಸ್ಟೈಲ್ ಆಗಿ ಕಾರಿನಿಂದ ಇಳಿದು ನಡೆದುಕೊಂಡು ಹೋಗುವ ದೃಶ್ಯವಿದೆ. ಕಾರಿನ ಬಾಗಿಲನ್ನು ತೆರೆಯುವುದು ಹಾಸ್ಯನಟ ಸುನಿಲ್. ಟೀಸರ್‌ನಲ್ಲಿನ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ.

ಅಕ್ಟೋಬರ್ 05 ಕ್ಕೆ ತೆರೆಗೆ ಬರಲಿದೆ ಸಿನಿಮಾ
'ಗಾಡ್ ಫಾದರ್' ಸಿನಿಮಾ ಮಲಯಾಳಂನಲ್ಲಿ ಮೋಹನ್‌ಲಾಲ್ ನಟಿಸಿದ್ದ 'ಲುಸಿಫರ್' ಸಿನಿಮಾದ ರೀಮೇಕ್ ಆಗಿದೆ. ಅಲ್ಲಿ ಪೃಥ್ವಿರಾಜ್ ಸುಕುಮಾರನ್ ಸಿನಿಮಾವನ್ನು ನಿರ್ದೇಶನ ಮಾಡಿ, ಅತಿಥಿ ಪಾತ್ರದಲ್ಲಿ ನಟಿಸಿದ್ದರು. ತೆಲುಗಿನಲ್ಲಿ ಮೋಹನ್ ರಾಜಾ ನಿರ್ದೇಶನ ಮಾಡುತ್ತಿದ್ದು, ಆರ್‌ಬಿ ಚೌಧರಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಚಿರಂಜೀವಿ ಜೊತೆಗೆ ಸಲ್ಮಾನ್ ಖಾನ್ ಸಹ ನಟಿಸಿದ್ದಾರೆ. ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಸಲ್ಮಾನ್ ಖಾನ್ ಮಾಡಿದ್ದಾರೆ. ಎರಡು ಅದ್ಧೂರಿ ಫೈಟ್ ಹಾಗೂ ಒಂದು ಹಾಡಿನ ದೃಶ್ಯದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. ಸಿನಿಮಾವು ಅಕ್ಟೋಬರ್ 05 ರಂದು ತೆರೆಗೆ ಬರಲಿದೆ.


Click it and Unblock the Notifications











