ಸಖತ್ತಾಗಿದ್ದೀಯಾ ಡಾರ್ಲಿಂಗ್ ಎಂದ ನಟ; ಖಡಕ್ ಎಚ್ಚರಿಕೆ ಕೊಟ್ಟ ನಭಾ ನಟೇಶ್!
ಕನ್ನಡ ನಟಿ ನಭಾ ನಟೇಶ್ ತೆಲುಗು ಚಿತ್ರರಂಗದಲ್ಲಿ ಕ್ರೇಜ್ ಸೃಷ್ಟಿಸಿಕೊಂಡಿದ್ದು ಗೊತ್ತೇಯಿದೆ. 'ವಜ್ರಕಾಯ' ಸಿನಿಮಾ ಮೂಲಕ ಬಣ್ಣದಲೋಕಕ್ಕೆ ಬಂದ ನಭಾ ಬಳಿಕ ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿದರು. ಸದ್ಯ ಆಕೆಗೆ ಅವಕಾಶಗಳು ಕಮ್ಮಿ ಆಗಿದೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ತೆಲುಗು ನಟನಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ತೆಲುಗು ನಟ ಪ್ರಭಾಸ್ ಅಭಿಮಾನಿಗಳು ಹಾಗೂ ಆಪ್ತರನ್ನು ಡಾರ್ಲಿಂಗ್ ಎಂದು ಕರೆಯುತ್ತಾರೆ. ಸಾಕಷ್ಟು ಸಂದರ್ಭಗಳಲ್ಲಿ ಪ್ರಭಾಸ್ ಡಾರ್ಲಿಂಗ್ ಎಂದು ಸಂಬೋಧಿಸಿರುವ ಆಡಿಯೋ ಕ್ಲಿಪ್‌ಗಳನ್ನು ಸೇರಿಸಿ ಡಬ್‌ಸ್ಮ್ಯಾಶ್ ರೀಲ್ಸ್ ವೈರಲ್ ಆಗುತ್ತಿದೆ. ನಭಾ ನಟೇಶ್ ಕೂಡ ಈ ಡಾರ್ಲಿಂಗ್ ಎಂದು ಡಬ್‌ಸ್ಮ್ಯಾಶ್ ಮಾಡಿ ಟ್ವಿಟರ್‌ನಲ್ಲಿ ವಿಡಿಯೋ ಶೇರ್ ಮಾಡಿದ್ದರು.

ನಭಾ ಡಬ್‌ಸ್ಮ್ಯಾಶ್ ನೋಡಿದ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ತೆಲುಗು ಹಾಸ್ಯ ನಟ ಪ್ರಿಯದರ್ಶಿ ಪುಲಿಕೊಂಡ ಕೂಡ ನಭಾ ಪೋಸ್ಟ್ ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. "ವಾಹ್ ಸೂಪರ್ ಡಾರ್ಲಿಂಗ್, ಸಖತ್ ಆಗಿ ಇದ್ದೀಯಾ?" ಎಂದು ಬರೆದಿದ್ದಾರೆ. ಆದರೆ ತಮ್ಮನ್ನು ಡಾರ್ಲಿಂಗ್ ಎಂದು ಕರೆದಿದ್ದಕ್ಕೆ ನಭಾ ಬೇಸರಗೊಂಡಿದ್ದಾರೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪರಿಚಯ ಇಲ್ಲದ ಮಹಿಳೆಯನ್ನು ಡಾರ್ಲಿಂಗ್ ಎಂದು ಕರೆಯುವುದು ಕೂಡ ಲೈಂಗಿಕ ದೌರ್ಜನ್ಯವಾಗುತ್ತದೆ ಎಂದು ಹಿಂದೆ ಕೊಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿತ್ತು. ಅದಕ್ಕೆ ಸಂಬಂಧಿಸಿ ನ್ಯೂಸ್ ಕ್ಲಿಪ್ ಅನ್ನು ಶೇರ್ ಮಾಡಿ "ಮಿಸ್ಟರ್, ಮಾತನಾಡುವಾಗ ಎಚ್ಚರಿಕೆ ಇರಲಿ" ಎಂದು ನಭಾ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಟ ಪ್ರಿಯದರ್ಶಿ, "ನೀವೇನೊ ಡಾರ್ಲಿಂಗ್ ಎಂದು ಕರೆಯಬಹುದು. ನಾವು ಕರೆದರೆ ಐಪಿಸಿ ಸೆಕ್ಷನ್ ಆಗುತ್ತಾ? ತಲೆ ಕೆಡಿಸಿಕೊಳ್ಳಬೇಡ ಡಾರ್ಲಿಂಗ್" ಎಂದು ರಿಪ್ಲೇ ಮಾಡಿದ್ದಾರೆ.
ಇದೆಲ್ಲಾ ಬರೀ ತಮಾಷೆಗಾಗಿ ನಡೆದ ಚರ್ಚೆ ಎನ್ನಲಾಗುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಭಾ ನಟೇಶ್ ಹಾಗೂ ಪ್ರಿಯದರ್ಶಿ ಟ್ವೀಟ್ ಚಾಟ್ ಸಖತ್ ಚರ್ಚೆ ಹುಟ್ಟಾಕ್ಕಿದೆ. ಇತ್ತೀಚೆಗೆ ನಟಿ ನಭಾ ನಟೇಶ್ ಕೈಗೆ ಪೆಟ್ಟಾಗಿತ್ತು, ಅದಕ್ಕೆ ಕೆಲ ದಿನಗಳ ಕಾಲ ಆಕೆ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದರು. ಮತ್ತೆ ಸಿನಿಮಾಗಳಲ್ಲಿ ನಟಿಸಲು ಮನಸ್ಸು ಮಾಡಿದ್ದಾರೆ.
ಶೃಂಗೇರಿ ಬೆಡಗಿ ನಭಾ ನಟೇಶ್ ತೆಲುಗಿನ 'ಇಸ್ಮಾರ್ಟ್ ಶಂಕರ್' ಚಿತ್ರದಲ್ಲಿ ನಟಿಸಿ ಗೆದ್ದರು. ಈ ಸಿನಿಮಾ ಆಕೆಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಆದರೆ ಬಳಿಕ ನಟಿಸಿದ 4 ಸಿನಿಮಾಗಳು ಕೈ ಹಿಡಿಯಲಿಲ್ಲ. ಕನ್ನಡದಲ್ಲಿ 'ವಜ್ರಕಾಯ' ನಂತರ 'ಲೀ', 'ಸಾಹೇಬ' ಸಿನಿಮಾಗಳಲ್ಲಿ ನಟಿಸಿದರು. ಶಿವಣ್ಣನ ಜೊತೆ 'ವಜ್ರಕಾಯ' ಚಿತ್ರದಲ್ಲಿ ಪಟಾಕ ಪಾರ್ವತಿ ಆಗಿ ಅಬ್ಬರಿಸಿದ್ದರು.
ಇವತ್ತಿಗೂ ಕನ್ನಡ ಸಿನಿರಸಿಕರಿಗೆ ನಭಾ 'ಪಟಾಕ' ಪಾರ್ವತಿ ಆಗಿಯೇ ಹೆಚ್ಚು ಚಿರಪರಿಚಿತ. ಶೃಂಗೇರಿಯಲ್ಲಿ ಹುಟ್ಟಿ ಬೆಳೆದ ನಭಾ ಉಡುಪಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಪ್ರಕಾಶ್ ಬೆಳವಾಡಿ ಮಾರ್ಗದರ್ಶನದಲ್ಲಿ ನಟನೆ ಕಲಿತ ನಭಾ ಜೊತೆ ಜೊತೆಗೆ ಮಾಡೆಲಿಂಗ್ ಆರಂಭಿಸಿದ್ದರು. ಬಳಿಕ ಚಿತ್ರರಂಗಕ್ಕೆ ಬಂದು ಗಮನ ಸೆಳೆದರು. ಸದ್ಯಕ್ಕೆ ಆಕೆ ಕನ್ನಡ ಸಿನಿಮಾಗಳ ಕಡೆ ಗಮನ ಹರಿಸಿದಂತೆ ಕಾಣುತ್ತಿಲ್ಲ. ತೆಲುಗು ಸಿನಿಮಾಗಳಲ್ಲೇ ಮತ್ತೆ ನಟಿಸೋ ಸಾಧ್ಯತೆಯಿದೆ.


Click it and Unblock the Notifications











