ಅಂಬಾನಿ ಪ್ರೀ ವೆಡ್ಡಿಂಗ್ ಈವೆಂಟ್‌ನಲ್ಲಿ ರಾಮ್‌ಚರಣ್‌ಗೆ ಶಾರುಖ್ ಖಾನ್ ಅವಮಾನ? ಪೋಸ್ಟ್ ವೈರಲ್
ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ ಸಮಾರಂಭ ಬಹಳ ಅದ್ಧೂರಿಯಾಗಿ ನೆರವೇರಿದೆ. ಸಿನಿಮಾ, ಕ್ರೀಡೆ, ಉದ್ಯಮ ಕ್ಷೇತ್ರದ ಸಾಕಷ್ಟು ಜನ 3 ದಿನಗಳ ಈ ಸಂಭ್ರಮದಲ್ಲಿ ಭಾಗಿ ಆಗಿದ್ದರು. ದೇಶ ವಿದೇಶದ ತಾರೆಯರು, ಧನವಂತರು ಹಾಜರಾಗಿ ಹೊಸ ಬಾಳಿಗೆ ಕಾಲಿಡುತ್ತಿರುವ ಜೋಡಿಗೆ ಶುಭ ಹಾರೈಸಿದ್ದಾರೆ.
ಖಾನ್‌ತ್ರಯರು ಸೇರಿದಂತೆ ಬಾಲಿವುಡ್‌ನ ಖ್ಯಾತ ನಟ-ನಟಿಯರು ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ ಈವೆಂಟ್‌ಗೆ ಸಾಕ್ಷಿ ಆಗಿದ್ದಾರೆ. ದಕ್ಷಿಣದಿಂದ ರಜನಿಕಾಂತ್ ಹಾಗೂ ರಾಮ್‌ಚರಣ್ ದಂಪತಿ ಈ ಕಾರ್ಯಕ್ರಮಕ್ಕೆ ವಿದೇಶ ಆಹ್ವಾನಿತರಾಗಿ ಹೋಗಿದ್ದರು. ಡ್ಯಾನ್ಸ್, ಸಿಂಗಿಂಗ್ ಅಂತ ಸಂಗೀತ ರಸಸಂಜೆ ಕಾರ್ಯಕ್ರಮ ನಡೆದಿದೆ. ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಜೋಡಿ ಕೂಡ ತಾರೆಯರ ಜೊತೆ ಹೆಜ್ಜೆ ಹಾಕಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್ ಒಟ್ಟಿಗೆ ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಮೂವರೊಟ್ಟಿಗೆ ರಾಮ್‌ಚರಣ್ 'ನಾಟು ನಾಟು' ಗೀತೆಗೆ ಹೆಜ್ಜೆ ಹಾಕಿರುವುದು ಹೈಲೆಟ್ ಆಗಿದೆ.

ಶಾರುಖ್ ಖಾನ್ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ನಿರೂಪಣೆ ಕೂಡ ಮಾಡಿದ್ದಾರೆ. ಖಾನ್‌ತ್ರಯರಿಗೆ ರಾಮ್‌ಚರಣ್ 'ನಾಟು ನಾಟು' ಸ್ಟೆಪ್ಸ್ ಹೇಳಿಕೊಟ್ಟಿರುವ ವಿಡಿಯೋ ವೈರಲ್ ಆಗುತ್ತಿದೆ. ಇದೆಲ್ಲದರ ನಡುವೆ ವೇದಿಕೆಯಲ್ಲಿ ತೆಲುಗು ನಟ ರಾಮ್‌ಚರಣ್‌ಗೆ ಶಾರುಖ್ ಖಾನ್ ಅವಮಾನ ಮಾಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್ ಜೊತೆ ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಿದ್ದ ಶಾರುಖ್ ಖಾನ್ ಇದ್ದಕ್ಕಿದ್ದಂತೆ ರಾಮ್‌ಚರಣ್‌ನ ವೇದಿಕೆಗೆ ಕರೆದರು. ಇಡ್ಲಿ ವಡಾ ಮೇಲೆ ಬಾ ಎಂದರಂತೆ. ರಾಮ್‌ಚರಣ್ ಪತ್ನಿ ಉಪಾಸನಾಗೆ ಮೇಕಪ್ ಆರ್ಟಿಸ್ಟ್ ಆಗಿರುವ ಜೆಬಾ ಹಾಸನ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗ್ತಿದೆ. ರಾಮ್ ಚರಣ್ ಅವರನ್ನು ಶಾರುಖ್ ಖಾನ್ ಇಡ್ಲಿ ಸಾಂಬಾರ್ ಎಂದು ಕರೆದಿದ್ದು ನನಗೆ ಇಷ್ಟವಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ಶಾರುಖ್ ಖಾನ್ ತಮಾಷೆಗಾಗಿ ಹೀಗೆ ಕರೆದರೂ ಅಷ್ಟು ದೊಡ್ಡ ಸ್ಟಾರ್ ಹೀರೋಗೆ ಅವಮಾನ ಮಾಡುವುದು ಸರಿಯಲ್ಲ ಎನ್ನುವುದು ಕೆಲವರ ಅಭಿಪ್ರಾಯ. ದಕ್ಷಿಣ ಭಾರತದ ಬಗ್ಗೆ ಶಾರುಖ್ ಖಾನ್‌ಗೆ ಎಂತಹ ಸಣ್ಣ ಮನಸ್ಥಿತಿ ಎನ್ನುವುದು ಇದರಲ್ಲೇ ಗೊತ್ತಾಗುತ್ತದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಕಿಂಗ್ ಖಾನ್ ಕ್ಷಮೆ ಕೇಳಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.
ಕೆಲವರು ಮಾತ್ರ ಶಾರುಖ್ ಖಾನ್ ಯಾರಿಗೂ ಅವಮಾನ ಮಾಡಿಲ್ಲ. ತಮ್ಮದೇ ಸೂಪರ್ ಹಿಟ್ ಸಿನಿಮಾ ಡೈಲಾಗ್ ಅನ್ನು ಕೊಂಚ ಬದಲಿಸಿ ಸ್ಟೇಜ್ ಮೇಲೆ ಹೇಳಿದ್ದಾರೆ. ಆ ಡೈಲಾಗ್ ಏನು ಎನ್ನುವುದನ್ನು ನೋಡಿ ಎಂದು 'ವನ್ 2 ಕಾ 4' ಚಿತ್ರದ ತುಣಕನ್ನು ವೈರಲ್ ಮಾಡಿದ್ದಾರೆ. ಶಾರುಖ್ ಖಾನ್ ಈ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು.
ಸನ್ನಿವೇಶವೊಂದರಲ್ಲಿ ದಕ್ಷಿಣದಲ್ಲಿ ಫೇಮಸ್ ಆಗಿರುವ ವಿಷಯಗಳ ಬಗ್ಗೆ ಮಾತನಾಡುತ್ತಾ. ಇಡ್ಲಿ, ವಡೆ, ರಜನಿಕಾಂತ್, ವೆಂಕಟೇಶ್, ನಾಗಾರ್ಜುನ ಎಂದು ಹೇಳುತ್ತಾರೆ. ಇದೇ ಡೈಲಾಗ್ ಅನ್ನು ಅಂಬಾನಿ ಪ್ರೀ ವೆಡ್ಡಿಂಗ್ ವೇದಿಕೆಯಲ್ಲಿ ರಾಮ್‌ಚರಣ್‌ನ ಕರೆಯುವಾಗ ಬಳಸಿದ್ದರು. ಸಿನಿಮಾ ಡೈಲಾಗ್‌ನಲ್ಲಿ ಇದ್ದ ರಜನಿಕಾಂತ್ ಹೆಸರು ತೆಗೆದು ರಾಮ್ ಚರಣ್ ಹೆಸರು ಸೇರಿಸಿ ಶಾರುಖ್ ಹೇಳಿದ್ದರು. ಆದರೆ ಆ ಡೈಲಾಗ್ ಸೌತ್ ಪ್ರೇಕ್ಷಕರಿಗೆ ಹೆಚ್ಚು ತಿಳಿಯದ ಕಾರಣ ಚರಣ್‌ಗೆ ಅವಮಾನ ಮಾಡಲಾಗಿದೆ ಎಂದು ತಪ್ಪಾಗಿ ಭಾವಿಸಲಾಗಿದೆ ಎನ್ನುವುದು ಕೆಲವರ ವಾದ.
ರಾಮ್‌ಚರಣ್ ವೇದಿಕೆ ಏರಿದಾಗ ಶಾರುಖ್ ಖಾನ್ ಶಿರಬಾಗಿ ನಮಸ್ಕರಿದ್ದಾರೆ. ಇದರಲ್ಲೇ ಗೊತ್ತಾಗುತ್ತದೆ ಶಾರುಖ್ ಖಾನ್ ಸ್ವಭಾವ ಎಂಥದ್ದು ಎಂದು. ಸುಖಾ ಸುಮ್ಮನೆ ವಿಷಯ ಗೊತ್ತಿಲ್ಲದೇ ಏನೇನೋ ಮಾತನಾಡಬೇಡಿ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಸಿಗುತ್ತದೆ. ಸ್ವಲ್ಪ ಕಾಯಬೇಕ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications










