₹120 ಕೋಟಿಗೆ ದಿಲ್‌ರಾಜು 'ಟಾಕ್ಸಿಕ್' ರೈಟ್ಸ್ ತಗೊಂಡಿದ್ದು ಸುಳ್ಳಾ? ಎಲ್ಲಾ ಪಬ್ಲಿಸಿಟಿ ಗಿಮಿಕ್ಕಾ?
ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದ 'ಟಾಕ್ಸಿಕ್' ಸಿನಿಮಾ ಆರ್ಭಟ ಶುರುವಾಗಿದೆ. ಪ್ರೀ ರಿಲೀಸ್ ಬ್ಯುಸಿನೆಸ್ ಲೆಕ್ಕ ಕೇಳಿ ಕೆಲವರು ಶಾಕ್ ಆಗಿದ್ದಾರೆ. ಆಂಧ್ರ, ತೆಲಂಗಾಣ ಡಿಸ್ಟ್ರಿಬ್ಯೂಷನ್ ರೈಟ್ಸ್ ತೆಲುಗು ನಿರ್ಮಾಪಕ ದಿಲ್ ರಾಜು ಪಾಲಾಗಿದೆ. ಫಾರ್ಸ್ ಫಿಲ್ಮ್ಸ್ ಸಂಸ್ಥೆ ಓವರ್‌ಸೀಸ್ ರೈಟ್ಸ್ ಕೊಂಡುಕೊಂಡಿದೆ. ಎಎ ಫಿಲ್ಮ್ಸ್ ಸಂಸ್ಥೆ ಉತ್ತರ ಭಾರತದ ರೈಟ್ಸ್ ಗಿಟ್ಟಿಸಿಕೊಂಡಿದೆ.
ಆಂಧ್ರ, ತೆಲಂಗಾಣ ರೈಟ್ಸ್ ದಾಖಲೆಯ 120 ಕೋಟಿ ರೂ.ಗೆ ಮಾರಾಟವಾಗಿರುವುದು ಎಲ್ಲರಿಗೂ ತಂದಿದೆ. ಪರಭಾಷೆಯ ಚಿತ್ರವೊಂದರ ತೆಲುಗು ರಾಜ್ಯಗಳ ರೈಟ್ಸ್ ಈ ಮಟ್ಟಿಗೆ ಬ್ಯುಸಿನೆಸ್ ಮಾಡಿರುವುದು ಇದೇ ಮೊದಲು. 'ವಾರ್- 2' ಸಿನಿಮಾ ರೈಟ್ಸ್ 90 ಕೋಟಿ ರೂ.ಗೆ ಸೇಲ್ ಆಗಿದ್ದೇ ಈವರೆಗೆ ದಾಖಲೆ ಎನ್ನಲಾಗಿತ್ತು. ಅದನ್ನು 'ಟಾಕ್ಸಿಕ್' ಸಿನಿಮಾ ಮೀರಿಸಿ ದಾಖಲೆ ಬರೆದಿದೆ.

ಇನ್ನು 120 ಕೋಟಿ ರೂ. ಡೀಲ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಇದೆಲ್ಲಾ ಪಬ್ಲಿಸಿಟಿ ಗಿಮಿಕ್. ಇಷ್ಟು ದೊಡ್ಡಮೊತ್ತದ ಹಣ ಕೊಟ್ಟು ರೈಟ್ಸ್ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಅಷ್ಟು ಬ್ಯುಸಿನೆಸ್ ಆಗಲ್ಲ. ಹಾಗಾಗಿ ಇದೆಲ್ಲಾ ಬರೀ ಗಿಮಿಕ್ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 'ಟಾಕ್ಸಿಕ್' ಚಿತ್ರಕ್ಕೆ ಹೆದರಿ ಕೆಲವರು ನೆಗೆಟಿವ್ ಹರಡುತ್ತಿದ್ದಾರೆ. ಈ ಬಗ್ಗೆ ಸ್ವತಃ ದಿಲ್ ರಾಜು ಪ್ರತಿಕ್ರಿಯಿಸಿದ್ದಾರೆ.
'ಮಾರ್ಕಂಡೇಯ' ಎಂಬ ತೆಲುಗು ಸಿನಿಮಾ ಕಾರ್ಯಕ್ರಮದಲ್ಲಿ ನಿರ್ಮಾಪಕ ದಿಲ್ ರಾಜು ಭಾಗಿ ಆಗಿದ್ದರು. ಈ ವೇಳೆ ನೇರವಾಗಿ ಮಾಧ್ಯಮದವರಿಗೆ 'ಟಾಕ್ಸಿಕ್' ಚಿತ್ರದ ರೈಟ್ಸ್ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಖಡಕ್ ಆಗಿಯೇ ತಿರುಗೇಟು ಕೊಟ್ಟಿದ್ದಾರೆ. ಹೀಗೆ ಕಾಮೆಂಟ್ ಮಾಡುವವರಿಗೆ ನನ್ನ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡುವ ದಾಖಲೆಯನ್ನು ತೋರಿಸುತ್ತೇನೆ ಎಂದಿದ್ದಾರೆ.
120 ಕೋಟಿ ರೂ. ಕೊಟ್ಟು 'ಟಾಕ್ಸಿಕ್' ರೈಟ್ಸ್ ಖರೀದಿಸಿ ಬಿಡುಗಡೆ ಮಾಡುವ ಸಾಹಸ ಮಾಡ್ತಿದ್ದೀರಾ. ನೀವು ದಿಲ್ ರಾಜು ಅಲ್ಲ ಡೇರ್ ರಾಜು ಎಂದು ಪತ್ರಕರ್ತರೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಏನೇ ಅಂದ್ರು ಸರಿ ಎಂದು ದಿಲ್ ರಾಜು ಉತ್ತರಿಸಿದ್ದಾರೆ. ಪೋಸ್ಟರ್ ಸಮೇತ ಅನೌನ್ಸ್ ಮಾಡಿದ್ದಾರೆ. 120 ಕೋಟಿ ರೂ. ರೈಟ್ಸ್ ವಿಚಾರ ಬರೀ ಪಬ್ಲಿಸಿಟಿ ಗಿಮಿಕ್ ಅಂತ ಕಾಮೆಂಟ್ ಮಾಡ್ತಿದ್ದಾರೆ. ಇದಕ್ಕೆ ಏನಂತೀರಾ ಎಂದು ಕೇಳಿದ್ದಾರೆ. "ಒಂದು ಕೆಲಸ ಮಾಡ್ತೀನಿ. ಹೀಗೆ ಅನುಮಾನ ಪಡುವವರಿಗೆ ಬ್ಯಾಂಕ್‌ನಲ್ಲಿ ಹಣ ವರ್ಗಾವಣೆ ಮಾಡಿದ ಸ್ಟೇಟ್‌ಮೆಂಟ್ ತೋರಿಸ್ತೀನಿ, ಆಗ ನಂಬುತ್ತಾರೆ ಅನ್ಸತ್ತೆ" ಎಂದಿದ್ದಾರೆ.
'ಟಾಕ್ಸಿಕ್' ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ 1000 ಕೋಟಿ ರೂ. ಗಡಿ ದಾಟುವ ಲೆಕ್ಕಾಚಾರ ಶುರುವಾಗಿದೆ. ಓಟಿಟಿ ರೈಟ್ಸ್ ಭಾರೀ ಬೆಲೆಗೆ ಬಿಕರಿಯಾಗುವ ಬಗ್ಗೆ ಚರ್ಚೆ ನಡೀತಿದೆ. ದೊಡ್ಡ ಓಟಿಟಿ ಸಂಸ್ಥೆಗಳು ರೈಟ್ಸ್ ಕೊಂಡುಕೊಳ್ಳಲು ಮುಗಿಬಿದ್ದಿವೆ ಎನ್ನಲಾಗ್ತಿದೆ. ಇನ್ನು ಓವರ್‌ಸೀಸ್ ಇಂಗ್ಲೀಷ್ ವರ್ಷನ್ ರೈಟ್ಸ್ ಮಾರಾಟವಾಗಿಲ್ಲ. ಹಾಲಿವುಡ್ ಸಂಸ್ಥೆ ಈ ಬಗ್ಗೆ ಚರ್ಚಿಸುತ್ತಿದೆ ಎನ್ನುವ ಊಹಾಪೋಹ ಶುರುವಾಗಿದೆ.
ತಮಿಳುನಾಡು, ಕೇರಳ, ಕರ್ನಾಟಕ ಹೀಗೆ ಎಲ್ಲಾ ಭಾಗಗಳ ಡಿಸ್ಟ್ರಿಬ್ಯೂಷನ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲಾಗುವ ಅಂದಾಜಿದೆ. ಬಹುಕೋಟಿ ವೆಚ್ಚದಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗ್ತಿದೆ. ಹಾಲಿವುಡ್ ರೇಂಜ್‌ನಲ್ಲಿ ಮೇಕಿಂಗ್ ಇದೆ. 'ಕೆಜಿಎಫ್- 2' ಸಿನಿಮಾ ಬಂದೋಗಿ 4 ವರ್ಷಗಳ ಬಳಿಕ ಯಶ್ ನಟನೆಯ ಸಿನಿಮಾ ಬರ್ತಿದೆ. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.


Click it and Unblock the Notifications











