ಸಿನಿಮಾ ನಟಿಯರ ಬಗ್ಗೆ ತುಚ್ಛವಾಗಿ ಮಾತನಾಡಿದ ನಿರ್ದೇಶಕ
ತೆಲುಗು ನಿರ್ದೇಶಕನೊಬ್ಬ ಸಿನಿಮಾ ನಾಯಕಿಯರ ಬಗ್ಗೆ ಬಹು ತುಚ್ಛವಾಗಿ ಮಾತನಾಡಿದ್ದಾನೆ. ತೆಲುಗು -ತಮಿಳಿನಲ್ಲಿ ಬೆರಳೆಣಿಕೆಯಷ್ಟು ಸಿನಿಮಾ ನಿರ್ದೇಶನ ಮಾಡಿರುವ ಗೀತ ಕೃಷ್ಣ ಎಂಬಾತ ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ನಾಯಕಿಯರು ಇರುವುದೇ 'ಲೈಂಗಿಕ ಸೇವೆ' ನೀಡಲು ಎಂಬರ್ಥದ ಮಾತುಗಳನ್ನಾಡಿದ್ದಾನೆ.
'ಆಗಿನ ಕಾಲದ ಚಿತ್ರರಂಗಕ್ಕೂ ಈಗಿನ ಕಾಲದ ಚಿತ್ರರಂಗಕ್ಕೂ ವ್ಯತ್ಯಾಸವೇನು'' ಎಂಬ ಸಂದರ್ಶಕಿಯ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕ ಗೀತ ಕೃಷ್ಣ, ''ಆಗಿನ ನಟಿಯರು ಅವಕಾಶಕ್ಕಾಗಿ ಮಂಚ ಹಂಚಿಕೊಳ್ಳುತ್ತಿದ್ದರು, ಈಗಲೂ ನಟಿಯರು ಅವಕಾಶಕ್ಕಾಗಿ ಮಂಚ ಏರುತ್ತಾರೆ'' ಎಂದು ನಾಲಗೆ ಹರಿಬಿಟ್ಟಿದ್ದಾನೆ ಗೀತ ಕೃಷ್ಣ.
ಆಗಲೂ ಕಾಸ್ಟಿಂಗ್ ಕೌಚ್ ಇತ್ತು, ಈಗಲೂ ಕಾಸ್ಟಿಂಗ್ ಕೌಚ್ ಇದೆ. ಅದು ಹೋಗಬೇಕು. ಆಗಲೂ ಫೈನಾನ್ಸ್‌ನವರು ಮೋಸ ಮಾಡುತ್ತಿದ್ದರು, ಈಗಲೂ ಮೋಸ ಮಾಡುತ್ತಿದ್ದಾರೆ. ಸಿನಿಮಾ ನೋಡುವ ಜನರು ಸ್ವಲ್ಪ ಬದಲಾಗಿದ್ದಾರೆ'' ಎಂದಿದ್ದಾನೆ ಗೀತ ಕೃಷ್ಣ.
ಬಹುತೇಕ ನಾಯಕಿಯರು 'ಲೈಂಗಿಕ ಸೇವೆ' ಒದಗಿಸಿಯೇ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಎಲ್ಲರೂ ಅಂಥಹವರೇ ಎಂದು ಹೇಳಲಾರೆ, ಹಾಗೆ ಹೇಳಿದರೆ ನನ್ನನ್ನು ಹೊಡೆಯುತ್ತಾರೆ. ಆದರೆ ಯಾವುದೇ ನಟಿಯನ್ನು ನೀನು ಹೀಗೆ ಕೆಟ್ಟ ದಾರಿಯಲ್ಲಿ ಅವಕಾಶ ಪಡೆದುಕೊಂಡೆಯಾ? ಎಂದು ಕೇಳಿದರೆ ಅವರು ಒಪ್ಪಿಕೊಳ್ಳುವುದಿಲ್ಲ. ಆದರೆ ಕಾಸ್ಟಿಂಗ್ ಕೌಚ್ ಎಂಬುದಂತೂ ದೊಡ್ಡ ಮಟ್ಟದಲ್ಲಿ ಇದೆ'' ಎಂದಿದ್ದಾನೆ ಗೀತ ಕೃಷ್ಣ.

ಹಿಂದಿನ ಘಟನೆ ನೆನದ ಗೀತ ಕೃಷ್ಣ
''ಒಮ್ಮೆ ಮುಂಬೈನಲ್ಲಿ ಯುವತಿಯೊಬ್ಬಳ ಫೋಟೊಶೂಟ್ ಮಾಡಿಸಿದೆ. ಆದರೆ ಅಲ್ಲಿನ ಕೋಆರ್ಡಿನೇಟರ್ ಒಬ್ಬ, 'ಆ ಹುಡುಗಿ ನಿನಗೆ 'ಸಹಕರಿಸುವುದಿಲ್ಲ' ಎಂದ. ಆಗ ನನಗೆ ಅದು ಅರ್ಥವಾಗಲಿಲ್ಲ. ಆ ನಂತರ ಆ ಯುವತಿಯೇ ಬಿಡಿಸಿ ಹೇಳಿದಳು. ಆದರೆ ಆ ಯುವತಿ 'ಆ ರೀತಿಯ' ವ್ಯಕ್ತಿತ್ವದ ಯುವತಿ ಆಗಿರಲಿಲ್ಲ. ಅದಕ್ಕೆ ನಾನು ಆ ಯುವತಿಯನ್ನು ನನ್ನ ಸಿನಿಮಾಕ್ಕೆ ಆಯ್ಕೆ ಮಾಡಿದೆ. ಆದರೆ ಕಾರಣಾಂತರಗಳಿಂದ ಆ ಪಾತ್ರದಲ್ಲಿ ಸಿಮ್ರನ್ ನಟಿಸಬೇಕಾಯ್ತು'' ಎಂದು ಹಳೆಯ ಘಟನೆ ನೆನಪು ಮಾಡಿಕೊಂಡಿದ್ದಾನೆ ಈ ನಿರ್ದೇಶಕ ಮಹಾಷಯ.

ಪುರುಷರಿಗೆ, ಯುವತಿಯರನ್ನು ಆಸೆಯಾಗುತ್ತದೆ: ಗೀತ ಕೃಷ್ಣ
''ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎನ್ನುವುದು ನಿರ್ಮೂಲನೆ ಆಗುವುದಿಲ್ಲ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುತ್ತದೆ. ಪುರುಷರಿಗೆ, ಯುವತಿಯರನ್ನು ನೋಡಿದರೆ ಅವರೊಟ್ಟಿಗೆ ಮಲಗಬೇಕು ಎನಿಸುತ್ತದೆ. ಯುವತಿಯರಿಗೂ ಅಷ್ಟೆ ಪುರುಷರನ್ನು ಮರುಳು ಮಾಡಿ ಹಣ ಮಾಡಬೇಕು ಎಂಬ ಆಸೆ ಮೂಡುತ್ತದೆ. ನಟಿಯರು ಸಹ ತಮ್ಮ ಅಂದ ಮುಂದೆ ಮಾಡಿ ಹನಿಟ್ರಾಪ್ ಮಾಡುತ್ತಿದ್ದಾರೆ'' ಎಂದಿದ್ದಾರೆ ಗೀತ ಕೃಷ್ಣ.

ಸಂಗೀತ ನಿರ್ದೇಶಕರಿಗೆ ಗಾಯಕಿಯರನ್ನು 'ಬಳಸಿಕೊಳ್ಳುತ್ತಾರೆ'
''ಲೈಂಗಿಕ ಸೇವೆ' ಎನ್ನುವುದು ಈಗ ಬಂದಿರುವುದಲ್ಲ, ದಶಕಗಳ ಹಿಂದಿನಿಂದಲೂ ಇದೆ. ಅದರಲ್ಲಿಯೂ ಇದು ಜಾಹೀರಾತಿನಿಂದ ಬಂತು. ಅಲ್ಲಿ ಹೆಚ್ಚು ಕಾಸ್ಟಿಂಗ್ ಕೌಚ್ ನಡೆಯುತ್ತಿತ್ತು. ನಿನ್ನನ್ನು ಬ್ರ್ಯಾಂಡ್ ಮಾಡುತ್ತೇವೆ ಎಂದು ಹೇಳಿ ಯುವತಿಯರನ್ನು ಬಳಸಿಕೊಳ್ಳಲಾಗುತ್ತಿತ್ತು'' ಎಂದಿರುವ ಗೀತ ಕೃಷ್ಣ, ತಮಿಳು ಸ್ಟಾರ್ ನಟರಿಗೆಲ್ಲರಿಗೂ ಯುವತಿಯರ ಚಟವಿದೆ'' ಎಂದಿದ್ದಾನೆ. ಅಲ್ಲದೆ ತೆಲುಗು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಿಗೂ 'ಆ' ಚಟ ಇದೆ. ಸುಂದರವಾದ ಹಾಡುಗಾರ್ತಿಯರು ತಮ್ಮೊಟ್ಟಿಗೆ ಮಲಗಿಕೊಳ್ಳಲಿ ಎಂಬ ಆಸೆ ಅವರಿಗೆ ಇದೆ'' ಎಂದು ಗೀತ ಕೃಷ್ಣ ಹೇಳಿದ್ದಾನೆ.

ಕನ್ನಡ ಚಿತ್ರೋದ್ಯಮದ ಬಗ್ಗೆ ಕೆಟ್ಟ ಮಾತು
ಕನ್ನಡ ಚಿತ್ರೋದ್ಯಮದ ಬಗ್ಗೆಯೂ ಕೆಟ್ಟದಾಗಿ ಮಾತನಾಡಿರುವ ಗೀತ ಕೃಷ್ಣ, '' ಅಸಲಿಗೆ ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ, ಅವರಂಥಹಾ ಅಸಹ್ಯದ ಜನ ಇನ್ನೆಲ್ಲೂ ಇಲ್ಲ, ಕನ್ನಡದವರಂತೂ ಇನ್ನೂ ಅಸಹ್ಯದವರು, ಕೊಳಕು ಜನ. ಒಮ್ಮೆ ಒಂದು ಸಿನಿಮಾ ಚಿತ್ರೀಕರಣಕ್ಕೆ ಹೋಗಿದ್ದಾಗ ಒಬ್ಬ ಹುಡುಗಿ ಸಿಕ್ಕಳು, ಹೈದರಾಬಾದ್‌ಗೆ ಬಾ, ನನ್ನ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಇರು ಎಂದೇ, ಆಕೆ ನನ್ನನ್ನೇ ಬಲೆಗೆ ಬೀಳಿಸಿಕೊಳ್ಳಲು ಬಂದಲು, ನಾನು ಅಲ್ಲಿಂದ ಕೂಡಲೇ ವಿಮಾನ ನಿಲ್ದಾಣಕ್ಕೆ ಓಡಿ ಹೋದೆ. ಕನ್ನಡ ಚಿತ್ರರಂಗದ ಸಹವಾಸವೇ ನನಗೆ ಬೇಡ ಎಂದು ಓಡಿ ಬಂದೆ. ಕನ್ನಡ ಚಿತ್ರರಂಗದವರು ಬಹಳ ಅಸಹ್ಯ, ಅಲ್ಲಿ ವಿಪರೀತ ಕಾಸ್ಟಿಂಗ್ ಕೌಚ್ ಇದೆ'' ಎಂದು ಬಾಯಿಗೆ ಬಂದಂತೆ ತುಚ್ಛವಾಗಿ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾನೆ ಈ ನಿರ್ದೇಶಕ.


Click it and Unblock the Notifications











