ಸೋನು ಸೂದ್‌ಗಾಗಿ ದೊಡ್ಡ ಯೋಜನೆಯೊಂದಿಗೆ ಸ್ಟಾರ್ ನಿರ್ದೇಶಕ ತಯಾರು
ವಿಲನ್ ಪಾತ್ರಗಳಲ್ಲಿ ಮಿಂಚುತ್ತಿದ್ದ ನಟ ಸೋನು ಸೂದ್ ಕೊರೊನಾ ಸಂಕಷ್ಟದ ಸಮಯದಲ್ಲಿ ತಾವು ನಿಜ ಜೀವನದ ಹೀರೋ ಎಂಬುದನ್ನು ತೋರಿಸಿದ್ದಾರೆ. ಇಡೀಯ ದೇಶವೇ ಸೋನು ಸೂದ್‌ರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದೆ.
ಸೋನು ಸೋದ್ ಮಾಡಿರುವ, ಮಾಡುತ್ತಿರುವ ಜನಸೇವೆ ಅವರ ಸಿನಿಮಾ ವೃತ್ತಿಯ ಮೇಲೂ ಪ್ರಭಾವ ಬೀರಿದ್ದು, ವಿಲನ್ ಪಾತ್ರಗಳ ಬದಲಿಗೆ ಅವರಿಗೆ ನಾಯಕ ನಟನ ಪಾತ್ರಗಳು ಒಂದರ ಹಿಂದೊಂದು ಹುಡುಕಿ ಬರುತ್ತಿವೆ.
ವಿಲನ್ ಪಾತ್ರಕ್ಕಾಗಿ ಸೂನು ಸೂದ್ ಅನ್ನು ಆಯ್ಕೆ ಮಾಡಿಕೊಂಡಿದ್ದ ನಿರ್ದೇಶಕರು ಸಹ ಸೋನುಸೂದ್‌ರ ಪ್ರಸ್ತುತ ಇಮೇಜಿಗೆ ತಕ್ಕಂತೆ ಪಾತ್ರದ ವ್ಯಕ್ತಿತ್ವ ಬದಲಾವಣೆ ಮಾಡುತ್ತಿದ್ದಾರೆ. ಇವುಗಳ ನಡುವೆ ತೆಲುಗಿನಲ್ಲಿ 'ವೇದಂ', 'ಕೃಷ್ಣಂ ವಂದೇ ಜಗದ್ಗುರು', 'ಗೌತಮೀ ಪುತ್ರ ಶಾತಕರ್ಣಿ', 'ಎನ್‌ಟಿಆರ್-ಕಥಾನಾಯಕುಡು' ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಕ್ರಿಶ್, ಸೋನು ಸೂದ್‌ಗಾಗಿಯೇ ಭಾರಿ ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶಿಸಲು ಅಣಿಯಾಗಿದ್ದಾರೆ.

ಮಣಿಕರ್ಣಿಕಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಕ್ರಿಶ್-ಸೋನು ಸೂದ್
ಕ್ರಿಶ್ ಹಾಗೂ ಸೋನು ಸೂದ್ ಹಿಂದಿಯ ಮಣಿಕರ್ಣಿಕಾ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಕಂಗನಾ ನಾಯಕಿಯಾಗಿದ್ದ ಆ ಸಿನಿಮಾದಿಂದ ಸೋನು ಸೂದ್ ಅನ್ನು ಹೊರಗೆ ಹಾಕಲಾಯಿತು. ನಂತರ ನಿರ್ದೇಶಕರಾಗಿದ್ದ ಕ್ರಿಶ್ ಅನ್ನೂ ಸಹ ಹೊರಗೆ ಹಾಕಿ ಸಿನಿಮಾದ ನಿರ್ದೇಶನವನ್ನು ತಮ್ಮ ಹೆಸರಿಗೆ ಮಾಡಿಕೊಂಡರು ಕಂಗನಾ. ಮಣಿಕರ್ಣಿಕಾ ಸಮಯದಿಂದಲೂ ಕ್ರಿಶ್ ಹಾಗೂ ಸೋನು ಸೂದ್ ಉತ್ತಮ ಗೆಳೆಯರಾಗಿದ್ದರು.

ಕತೆ ಹೇಳಿರುವ ಕ್ರಿಶ್
ಇನ್ನು ಕ್ರಿಶ್ ಅವರು ಇತ್ತೀಚೆಗೆ ಸೋನು ಸೂದ್ ಅನ್ನು ಭೇಟಿಯಾಗಿ ಕತೆಯೊಂದನ್ನು ಹೇಳಿದ್ದು ಸೋನುಗೆ ಸಹ ತಮ್ಮ ಪಾತ್ರ ಬಹಳ ಇಷ್ಟವಾಗಿದೆ. ಸೋನು ಸೂದ್‌ರ ಪ್ರಸ್ತುತ ಇಮೇಜಿಗೆ ಪೂರಕವಾಗಿರುವ ಕತೆಯನ್ನೇ ಕ್ರಿಶ್ ಹೆಣೆದಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ
ಸೋನು ಸೂದ್‌ಗೆ ಮೊದಲಿನಿಂದಲೂ ದೇಶದ ಹಲವು ರಾಜ್ಯಗಳಲ್ಲಿ ಅಭಿಮಾನಿಗಳಿದ್ದಾರೆ. ಈಗಂತೂ ಅಭಿಮಾನಿಗಳ ಸಂಕ್ಯೆ ಹತ್ತು ಪಟ್ಟು ಹೆಚ್ಚಾಗಿದೆ. ಹಾಗಾಗಿಯೇ ಸೋನು ಸೂದ್-ಕ್ರಿಶ್ ಸಿನಿಮಾ ಪ್ಯಾನ್ ಸಿನಿಮಾ ಆಗಲಿದ್ದು, ಹಲವು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಆಗಲಿದೆ.
Recommended Video

ಪವನ್ ಕಲ್ಯಾಣ್ ಸಿನಿಮಾ ನಿರ್ದೇಶಿಸುತ್ತಿರುವ ಕ್ರಿಶ್
ಇನ್ನು ಕ್ರಿಶ್ ಪ್ರಸ್ತುತ ಪವನ್ ಕಲ್ಯಾಣ್ ನಟಿಸುತ್ತಿರುವ 'ಹರಿಹರ ವೀರ ಮಲ್ಲು' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಪಂಜಾ ವಿಷ್ಣುತೇಜ್ ಜೊತೆಗೆ ಹೆಸರಿಡದ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಎರಡೂ ಸಿನಿಮಾಗಳ ಬಳಿಕ ಸೋನು ಸೂದ್ ಜೊತೆಗಿನ ಸಿನಿಮಾ ಪ್ರಾರಂಭ ಮಾಡಲಿದ್ದಾರೆ.


Click it and Unblock the Notifications