'ಕಲ್ಕಿ 2898 AD' ಚಿತ್ರದಲ್ಲಿ ಕಲ್ಕಿ ಆಗಿ ನಟಿಸೋದು ಪ್ರಭಾಸ್ ಅಲ್ಲ, ಮತ್ಯಾರು? ನಿರ್ದೇಶಕ ಪ್ರತಿಕ್ರಿಯೆ
ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಮಿಶ್ರಪ್ರತಿಕ್ರಿಯೆ ನಡುವೆಯೂ ಸಿನಿಮಾ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಚಿತ್ರದ ಚಿತ್ರದ ಮೊದಲ ಭಾಗ ಮಾತ್ರ ತೆರೆಗೆ ಬಂದಿದೆ. ಎರಡನೇ ಭಾಗ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಸದ್ಯಕ್ಕೆ ಸೀಕ್ವೆಲ್ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಹಾಗೂ ದೀಪಿಕಾ ಪಡುಕೋಣೆ ರೀತಿಯ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದರು. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಕರ್ಣನಾಗಿ ಪ್ರಭಾಸ್ ಆರ್ಭಟ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದರು. ಭೈರವ ಹಾಗೂ ಕರ್ಣನ ಪಾತ್ರಗಳಲ್ಲಿ ಪ್ರಭಾಸ್ ಅವರನ್ನು ತೋರಿಸಿ ನಿರ್ದೇಶಕರು ಗೆದ್ದಿದ್ದರು.

ಪ್ರಭಾಸ್‌ಗಿಂತಲೂ ಅಮಿತಾಬ್ ಬಚ್ಚನ್ ಮಾಡಿದ್ದ ಅಶ್ವತ್ಥಾಮ ಪಾತ್ರಕ್ಕೆ ಹೆಚ್ಚಿನ ಮಹತ್ವ ಇತ್ತು. ಆ ಪಾತ್ರವನ್ನು ಅಷ್ಟೇ ಸೊಗಸಾಗಿ ಬಿಗ್‌ಬಿ ಜೀವಿಸಿದ್ದರು. ಕಲ್ಕಿಯ ತಾಯಿ ಸುಮತಿ ಆಗಿ ದೀಪಿಕಾ ಪಡುಕೋಣೆ ನಟಿಸಿ ಗಮನ ಸೆಳೆದಿದ್ದರು. ಆದರೆ ಇಡೀ ಕತೆಗೆ ಮೊದಲ ಭಾಗದಲ್ಲಿ ಪೀಠಿಕೆ ಮಾತ್ರ ಹಾಕಿಕೊಳ್ಳಲಾಗಿದೆ. ಅಸಲಿ ಕಲ್ಕಿ ಕಥೆ 2ನೇ ಭಾಗದಲ್ಲೇ ಬರಬೇಕಿದೆ. ಹಾಗಾಗಿ ಸೀಕ್ವೆಲ್ ಬಗ್ಗೆ ಭಾರೀ ನಿರೀಕ್ಷೆಯಿದೆ.
'ಕಲ್ಕಿ 2898 AD' ಟೈಟಲ್ ನೋಡಿದಾಗಲೇ ಪ್ರಭಾಸ್ ಚಿತ್ರದಲ್ಲಿ ಟೈಟಲ್ ರೋಲ್ ಪ್ಲೇ ಮಾಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಬಳಿಕ ಭೈರವನ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವುದು ಗೊತ್ತಾದಾಗ ದ್ವಿಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳುತ್ತಾರೆ ಎನ್ನುವ ಎಂದು ಕೆಲವರು ಅಂದುಕೊಂಡಿದ್ದರು. ಅಥವಾ ಭೈರವನೇ ಕಲ್ಕಿ ಆಗಿರಬಹುದಾ? ಎನ್ನುವ ಚರ್ಚೆ ನಡೆದಿತ್ತು. ಆದರೆ ಸಿನಿಮಾ ನೋಡಿದ ಮೇಲೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು. ಸೀಕ್ವೆಲ್‌ನಲ್ಲಿ ಕಲ್ಕಿ ಪಾತ್ರವನ್ನು ಪ್ರಭಾಸ್ ಅವರೇ(ತ್ರಿಪಾತ್ರ) ಮಾಡಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು.

ಇದೀಗ ನಿರ್ದೇಶಕ ನಾಗ್ ಅಶ್ವಿನ್ ಕಲ್ಕಿ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಆ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವ ಬಗ್ಗೆ ಸುಳಿವು ನೀಡಿದ್ದಾರೆ. ಪ್ರಭಾಸ್ ನಟಿಸುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಆ ಪಾತ್ರ ಯಾರು ಮಾಡಬೇಕು ಎನ್ನುವ ಬಗ್ಗೆ ನಿರ್ಧಾರ ಮಾಡಿಲ್ಲ. ಆದರೆ ಹೊಸ ಮುಖ ಇರುತ್ತದೆ ಎಂದು ಸುಳಿವು ನೀಡಿದ್ದಾರೆ. ಈವರೆಗೆ ಸಿನಿಮಾಗಳಲ್ಲಿ ನಟಿಸದ ಹೊಸ ಪ್ರತಿಭೆಯನ್ನು ಕಲ್ಕಿ ಪಾತ್ರಕ್ಕೆ ಆಯ್ಕೆ ಮಾಡುವುದಾಗಿ ಹೇಳಿದ್ದಾರೆ. ಅಲ್ಲಿಗೆ ಕಲ್ಕಿಯಾಗಿ ಪ್ರಭಾಸ್ ನಟಿಸಲ್ಲ ಎನ್ನುವುದು ಸ್ಪಷ್ಟವಾದಂತಾಗಿದೆ.
ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ 'ಕಲ್ಕಿ 2898 AD' ಸಿನಿಮಾ ಬಹಳ ಅದ್ಧೂರಿಯಾಗಿ ತೆರೆಗೆ ಬಂದಿತ್ತು. ಕಳೆದ ವರ್ಷ ಜೂನ್ 27ಕ್ಕೆ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಿತ್ತು. ಕ್ಲೈಮ್ಯಾಕ್ಸ್ ಕಾರಣಕ್ಕೆ ಸಿನಿಮಾ ಭಾರೀ ಸದ್ದು ಮಾಡಿತ್ತು. ಅದರಲ್ಲೂ ಕರ್ಣನ ಪಾತ್ರವನ್ನು ತೋರಿಸಿದ್ದ ಬಗೆ ಚರ್ಚೆ ಹುಟ್ಟುಹಾಕಿತ್ತು. ಆದರೆ ನಿರ್ದೇಶಕರು ಸಿನಿಮ್ಯಾಟಿಕ್ ಲಿಬರ್ಟಿ ತೆಗೆದುಕೊಂಡು ಅದನ್ನು ಚಿತ್ರಿಸಿದ್ದರು. ಅರ್ಜುನನಾಗಿ ವಿಜಯ್ ದೇವರಕೊಂಡ ಮಿಂಚಿದ್ದರು.
ನಾಗ್ ಅಶ್ವಿನ್ ಬೇರೆ ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. ಪ್ರಭಾಸ್ 'ರಾಜಾ ಸಾಬ್', 'ಫೌಜಿ' ಹಾಗೂ 'ಸಲಾರ್- 2' ಚಿತ್ರಗಳನ್ನು ಮುಗಿಸಿ 'ಕಲ್ಕಿ 2898 AD' ಚಿತ್ರದಲ್ಲಿ ನಟಿಸೋ ಸಾಧ್ಯತೆ ದಟ್ಟವಾಗಿದೆ. ಇನ್ನು ಸೀಕ್ವೆಲ್‌ನಲ್ಲಿ ಕಮಲ್ ಹಾಸನ್ ಹಾಗೂ ದೀಪಿಕಾ ಪಡುಕೋಣೆ ಪಾತ್ರಗಳಿಗೆ ಹೆಚ್ಚಿನ ಮಹತ್ವ ಇರುವ ಸಾಧ್ಯತೆಯಿದೆ. ಕಲ್ಕಿಯಾಗಿ ಯಾರು ನಟಿಸುತ್ತಾರೆ? ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ 'ಕಲ್ಕಿ 2898 AD' ಪಾರ್ಟ್-2 ಮೂಡಿ ಬರಲಿದೆ.


Click it and Unblock the Notifications











