ಸುದೀಪ್ ನನ್ನ ಗೆಳೆಯ ಎಂದ ರಾಜಮೌಳಿ, ಹಾಗಾದರೆ 'RRR' ನಲ್ಲಿ ಕಿಚ್ಚ ಯಾಕಿಲ್ಲ?
ರಾಜಮೌಳಿ ಸಿನಿಮಾಗಳಿಗೆ ನಟರನ್ನು ಆಯ್ಕೆ ಮಾಡಬೇಕಾದರೆ ಬಹಳ ಜಾಗೃತವಹಿಸುತ್ತಾರೆ. ರಾಜಮೌಳಿ ಸಿನಿಮಾದಲ್ಲಿ ದೃಶ್ಯ ವೈಭವ ಎಷ್ಟು ಅದ್ಭುತವಾಗಿರುತ್ತದೆಯೋ ನಟರ ನಟನೆಯೂ ಅಷ್ಟೆ ಉತ್ತಮವಾಗಿರುತ್ತದೆ.
ಕನ್ನಡದ ಸ್ಟಾರ್ ನಟ ಸುದೀಪ್ ಅವರು ರಾಜಮೌಳಿಯವರ ಮೆಚ್ಚಿನ ನಟರಲ್ಲಿ ಒಬ್ಬರು ಹಾಗಾಗಿ ರಾಜಮೌಳಿ ನಿರ್ದೇಶನ ಮಾಡಿರುವ ಎರಡು ಸಿನಿಮಾಗಳಲ್ಲಿ ಸುದೀಪ್ ಅವರನ್ನು ಕಾಸ್ಟ್ ಮಾಡಿದ್ದಾರೆ ರಾಜಮೌಳಿ.
ರಾಜಮೌಳಿ ನಿರ್ದೇಶನದ ಸೂಪರ್ ಹಿಟ್ ಸಿನಿಮಾ 'ಈಗ'ನಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸ್ವತಃ ರಾಜಮೌಳಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಇದೇ ಸಿನಿಮಾದಲ್ಲಿ ನಾನಿ ಹಾಗೂ ಸಮಂತಾ ಸಹ ನಟಿಸಿದ್ದರು. ನಂತರ 'ಬಾಹುಬಲಿ' ಸಿನಿಮಾದಲ್ಲಿಯೂ ಸುದೀಪ್ ಒಂದು ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಹಾಗಾಗಿ 'ಆರ್‌ಆರ್‌ಆರ್' ಸಿನಿಮಾದಲ್ಲಿಯೂ ಸುದೀಪ್ ನಟಿಸಬಹುದು ಎಂಬ ಇರಾದೆ ಇತ್ತು. ಈ ಬಗ್ಗೆ ಇಂದು ಬೆಂಗಳೂರಿಗೆ ಆಗಮಿಸಿದ್ದ ರಾಜಮೌಳಿ ಉತ್ತರಿಸಿದ್ದಾರೆ.
'ಆರ್‌ಆರ್‌ಆರ್' ಸಿನಿಮಾದ ಪ್ರಚಾರಕ್ಕಾಗಿ ರಾಮ್ ಚರಣ್ ತೇಜ, ಜೂ ಎನ್‌ಟಿಆರ್, ಆಲಿಯಾ ಭಟ್ ಹಾಗೂ ನಿರ್ದೇಶಕ ರಾಜಮೌಳಿ ಬೆಂಗಳೂರಿಗೆ ಬಂದಿದ್ದರು. ಈ ಸಮಯದಲ್ಲಿ 'ನಿಮ್ಮ 'ಈಗ' ಹಾಗೂ 'ಬಾಹುಬಲಿ' ಸಿನಿಮಾದಲ್ಲಿ ಸುದೀಪ್ ನಟಿಸಿದ್ದರು. ಈ ಸಿನಿಮಾದಲ್ಲಿ ಸುದೀಪ್ ಏಕೆ ಇಲ್ಲ?'' ಎಂದು ಪತ್ರಕರ್ತರು ಪ್ರಶ್ನೆ ಮಾಡಿದರು.

ಸುದೀಪ್ ಬಗ್ಗೆ ರಾಜಮೌಳಿ ಮಾತು
ಇದಕ್ಕೆ ಉತ್ತರಿಸಿದ ರಾಜಮೌಳಿ, ''ಸುದೀಪ್ ನನ್ನ ಗೆಳೆಯ. ಬಾಹುಬಲಿ ಸಿನಿಮಾದಲ್ಲಿ ಆ ಪಾತ್ರವನ್ನು ಸುದೀಪ್ ಮಾಡಿದರೆ ಚೆಂದ ಎಂದು ನನಗೆ ಅನಿಸಿತ್ತು. ಹಾಗಾಗಿ ಅವರನ್ನು ಸಂಪರ್ಕಿಸಿದೆ. ಅವರು ಖುಷಿಯಿಂದ ಒಪ್ಪಿಕೊಂಡರು. ಆ ಸಿನಿಮಾದಲ್ಲಿ ಯಾವುದೇ ಹಣಕಾಸಿನ ಅಡ್ಡಿ ಆತಂಕ ನಮಗೆ ಇರಲಿಲ್ಲ. ಅದೇ ಸಿನಿಮಾಕ್ಕೆ ಎಂದಲ್ಲ. ನನ್ನ ಯಾವುದೇ ಸಿನಿಮಾಕ್ಕೂ ಹಣಕಾಸಿನ ವಿಷಯ ಲೆಕ್ಕ ಹಾಕಿ ನಾವು ನಟರನ್ನು ಆಯ್ಕೆ ಮಾಡುವುದಿಲ್ಲ. 'ಬಾಹುಬಲಿ' ಸಿನಿಮಾದ ಪಾತ್ರಕ್ಕೆ ಸುದೀಪ್ ಬೇಕಾಗಿದ್ದರು. ಹಾಗಾಗಿ ಅವರನ್ನು ಹಾಕಿಕೊಂಡೆವು. ಆದರೆ, ಇಲ್ಲಿ ಹಾಗಿರಲಿಲ್ಲ. ಕತೆಗೆ ಯಾರು ಸೂಕ್ತ ಎನಿಸುತ್ತಾರೊ ಅವರನ್ನು ಹಾಕಿಕೊಳ್ಳುತ್ತೇವೆ'' ಎಂದರು ರಾಜಮೌಳಿ.

ಕನ್ನಡದ ಯಾವ ನಟರೊಟ್ಟಿಗೆ ಸಿನಿಮಾ ಮಾಡಲು ಇಷ್ಟ?
ಕನ್ನಡದ ಯಾವ ನಟರೊಟ್ಟಿಗೆ ನಿಮಗೆ ಸಿನಿಮಾ ಮಾಡಲು ಇಷ್ಟವಿದೆ ಎಂಬ ಪ್ರಶ್ನೆಗೆ ಜಾಣತನದಿಂದ ಉತ್ತರಿಸಿದ ನಟ ರಾಜಮೌಳಿ, ''ನಿಮ್ಮ ಪ್ರಶ್ನೆಗೆ ನಾನು ಉತ್ತರ ಕೊಡಬಲ್ಲೆ, ನನ್ನ ಬಳಿ ಉತ್ತರ ಇದೆ. ಆದರೆ ನಾವೀಗ 'ಆರ್‌ಆರ್‌ಆರ್' ಸಿನಿಮಾದ ಪ್ರಚಾರಕ್ಕಾಗಿ ಬಂದಿದ್ದೇವೆ. ನಿಮ್ಮ ಪ್ರಶ್ನೆಗೆ ಉತ್ತರ ನೀಡಿ ನಾನು ಯಾರಾದರೂ ಹೀರೋ ಹೆಸರು ಹೇಳಿದರೆ ನಾಳೆ ನಿಮ್ಮ ಸುದ್ದಿಗಳೆಲ್ಲ, 'ರಾಜಮೌಳಿಗೆ ಕನ್ನಡದ ಈ ನಟನೊಂದಿಗೆ ಕೆಲಸ ಮಾಡುವುದು ಇಷ್ಟ' ಎಂದಾಗಿಬಿಡುತ್ತದೆ, 'ಆರ್‌ಆರ್‌ಆರ್' ಸಿನಿಮಾದ ಪ್ರಚಾರ ಮಂಕಾಗಿಬಿಡುತ್ತದೆ'' ಎಂದರು.

'ಬಾಹುಬಲಿ'ಯನ್ನು ಕನ್ನಡದಲ್ಲಿ ಡಬ್ ಮಾಡಲಿಲ್ಲ ಏಕೆ?
'ಆರ್‌ಆರ್‌ಆರ್' ಸಿನಿಮಾದ ಕನ್ನಡ ಡಬ್ಬಿಂಗ್ ಬಗ್ಗೆ ಮಾತನಾಡಿದ ರಾಜಮೌಳಿ, 'ಬಾಹುಬಲಿ' ಸಿನಿಮಾವನ್ನು ನಾವು ಮಲಯಾಳಂ, ಹಿಂದಿಗೆ ಡಬ್ ಮಾಡಿದ್ದೆವು. ಆಗ ನನ್ನನ್ನು ಬಹಳಷ್ಟು ಜನ ಬೈದರು, ಶಾಪ ಹಾಕಿದರು ಕನ್ನಡದಲ್ಲಿ ಯಾಕೆ ಡಬ್ಬಿಂಗ್ ಮಾಡಿಲ್ಲ, ಕನ್ನಡಿಗರೆಂದರೆ ಕಡಿಮೆ ಎಂದು ತಿಳಿದುಕೊಂಡಿದ್ದೀಯ? ಎಂದೆಲ್ಲ ಪ್ರಶ್ನೆ ಮಾಡಿದರು. ಆದರೆ ನಾವು 'ಬಾಹುಬಲಿ' ಮಾಡಿದಾಗ ಕನ್ನಡದಲ್ಲಿ ಡಬ್ಬಿಂಗ್ ಮಾಡುವಂತೆ ಇರಲಿಲ್ಲ. ಹಾಗಾಗಿ ಆಗ ಡಬ್ಬಿಂಗ್ ಮಾಡಲಿಲ್ಲ'' ಎಂದರು ರಾಜಮೌಳಿ.

ಹೆಚ್ಚು ಜಾಗೃತೆವಹಿಸಿ ಕೆಲಸ ಮಾಡಿದ್ದೇವೆ: ರಾಜಮೌಳಿ
ಕರ್ನಾಟಕದಲ್ಲಿ ಕೆಲವು ಜನ ಸಿನಿಮಾವನ್ನು ಮೂಲ ಭಾಷೆಯಲ್ಲಿಯೇ ನೋಡಲು ಇಷ್ಟಪಡುತ್ತಾರೆ. ಕೆಲವರು ಡಬ್ಬಿಂಗ್‌ನಲ್ಲಿ ನೋಡಲು ಇಷ್ಟಪಡುತ್ತಾರೆ. ನಾವು ಸಹ ಕನ್ನಡ ಡಬ್ಬಿಂಗ್ ಬಗ್ಗೆ ಹೆಚ್ಚು ಕಾಳಜಿವಹಿಸಿ ಮಾಡಿದ್ದೇವೆ. ಎಲ್ಲೂ ಅಕ್ಷರಗಳು, ಪದಗಳು, ಉಚ್ಛಾರಣೆ ತಪ್ಪಾಗದಂತೆ ಎಚ್ಚರ ವಹಿಸಿದ್ದೇವೆ. ಇಲ್ಲಿನ ನಟರೇ ತಪ್ಪಾಗಿ ಉಚ್ಚರಿಸಿದರೆ ಕ್ಷಮಿಸಿಬಿಡುತ್ತಾರೆ, ಆದರೆ ಬೇರೆ ಭಾಷೆಯ ನಟರು ತಪ್ಪಾಗಿ ಉಚ್ಚರಿಸಿದರೆ ಬೈಯ್ಯುತ್ತಾರೆ. ಹಾಗಾಗಿ ನಾವು ಹೆಚ್ಚು ಜಾಗೃತೆವಹಿಸಿ ಕೆಲಸ ಮಾಡಿದ್ದೇವೆ'' ಎಂದರು ರಾಜಮೌಳಿ.


Click it and Unblock the Notifications