'ಸಾರಂಗ ದರಿಯಾ' ಹಾಡು ವಿವಾದ: ಹಿನ್ನೆಲೆ ತಿಳಿಸಿದ ಶೇಖರ್ ಕಮ್ಮುಲ
ಸಾಯಿ ಪಲ್ಲವಿ-ನಾಗ ಚೈತನ್ಯ ನಟಿಸಿರುವ 'ಲವ್ ಸ್ಟೋರಿ' ಸಿನಿಮಾದ 'ಸಾರಂಗ ದರಿಯಾ' ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅದರ ಬೆನ್ನಲ್ಲೆ ಹಾಡಿನ ಬಗ್ಗೆ ಕೋಮಲಿ ಹಾಗೂ ಸಿರಿಶಾ ಎಂಬುವರು ತಕರಾರು ತೆಗೆದಿದ್ದಾರೆ. ಆ ಜನಪದ ಹಾಡನ್ನು ಮೊದಲಿಗೆ ಹಾಡಿದ್ದು ಹಾಗೂ ಸಂಪಾದನೆ ಮಾಡಿದ್ದು ನಾನು, ನನಗೆ ಕ್ರೆಡಿಟ್ಸ್ ನೀಡಲಾಗಿಲ್ಲ ಎಂದು ಕೋಮಲಿ ಆರೋಪಿಸಿದ್ದಾರೆ.
ಇದಕ್ಕೆ ಉತ್ತರ ನೀಡಿರುವ 'ಲವ್ ಸ್ಟೋರಿ' ಸಿನಿಮಾದ ನಿರ್ದೇಶಕ ಶೇಖರ್ ಕಮ್ಮುಲ, 'ಹಾಡು ಬಳಸಿಕೊಳ್ಳುವ ಮುಂಚೆ ಯಾರ್ಯಾರೊಂದಿಗೆ ಮಾತನಾಡಿದ್ದೆವು, ಯಾರು ಏನು ಹೇಳಿದ್ದರು' ಎಂಬೆಲ್ಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
'ಬಹಳ ವರ್ಷಗಳ ಹಿಂದೆ 'ರೇಲಾ ರೇ ರೇಲಾ' ಕಾರ್ಯಕ್ರಮದಲ್ಲಿ ಸಿರಿಶಾ ಎಂಬ ಯುವತಿ 'ಸಾರಂಗ ದರಿಯಾ' ಹಾಡು ಹಾಡಿದ್ದರು. ಆಗಿನಿಂದಲೂ ಆ ಹಾಡು ನನ್ನ ತಲೆಯಲ್ಲಿಯೇ ಇತ್ತು. ನಾನು ನನ್ನ ಮೊದಲ ಸಿನಿಮಾ 'ಡಾಲರ್ ಡ್ರೀಮ್ಸ್' ಮಾಡಿದಾಗ ಅದರಲ್ಲಿ ಲಕ್ಕಿ ಅಲಿ ಅವರ ಹಾಡೊಂದನ್ನು ಬಳಸಿಕೊಂಡಿದ್ದೆ, ಅದಕ್ಕಾಗಿ ನಾನು ಸೋನಿ ಸಂಸ್ಥೆಗೆ ಹಣ ಕೊಟ್ಟಿದ್ದೆ ಮತ್ತು ಕ್ರೆಡಿಟ್ಸ್ ಸಹ ಕೊಟ್ಟಿದ್ದೆ' ಎಂದಿದ್ದಾರೆ ಶೇಖರ್ ಕಮ್ಮುಲ.

ಈ ಹಿಂದೆ ಕೆಲವು ಹಾಡು ಬಳಸಿಕೊಂಡು ಹಣ ನೀಡಿದ್ದೇವೆ: ಕಮ್ಮುಲ
'ನನ್ನ ಆನಂದ್ ಸಿನಿಮಾದಲ್ಲಿ ಸುಬ್ಬಲಕ್ಷ್ಮಿ ಅವರ ಹಾಡನ್ನು ಬಳಸಿಕೊಂಡಿದ್ದೆ. ಫಿಧಾ ಸಿನಿಮಾದಲ್ಲಿ 'ಅಪ್ಪಗಿಂತಲೋ' ಹಾಡು ಬಳಸಿಕೊಂಡಿದ್ದೆ ಇವೆಲ್ಲವಕ್ಕೂ ನಾನು ಕ್ರೆಡಿಟ್ಸ್ ನೀಡಿದ್ದೇನೆ, ಹಣ ಸಹ ನೀಡಿದ್ದೇವೆ. 'ಸಾರಂಗ ದರಿಯಾ' ಹಾಡನ್ನು 'ಲವ್ ಸ್ಟೋರಿ' ಸಿನಿಮಾಕ್ಕೆ ಬಳಸಿಕೊಳ್ಳಬೇಕು ಎನಿಸಿದಾಗ ಚಿತ್ರಸಾಹಿತಿ ಸುದ್ದಾಲಾ ಅಶೋಕ್ ತೇಜ್ ಅವರನ್ನು ಸಂಪರ್ಕಿಸಿ ಹಾಡಿನ ಸಾಹಿತ್ಯವನ್ನು ಬದಲಾಯಿಸಿ ಕೊಡಲು ಕೇಳಿದೆ. ಅಂತೆಯೇ ಅವರು ಪಲ್ಲವಿ ಉಳಿಸಿಕೊಂಡು ಚರಣ ಬದಲಾಯಿಸಿದರು' ಎಂದಿದ್ದಾರೆ ಶೇಖರ್ ಕಮ್ಮುಲ.

'ಸಿರಿಶಾಗೆ ಕರೆ ಮಾಡಿದ್ದೆ ಆದರೆ ಆಕೆ ಬರುವ ಸ್ಥಿತಿಯಲ್ಲಿರಲಿಲ್ಲ'
'ನಮ್ಮ ಸಿನಿಮಾ ತಂಡದಿಂದ ಒಬ್ಬರು, ಹಾಡನ್ನು ಮೊದಲು ಹಾಡಿದ್ದ ಸಿರಿಶಾ ಅನ್ನು ಸಂಪರ್ಕಿಸಿ ರೆಕಾರ್ಡಿಂಗ್‌ಗೆ ಬರುವಂತೆ ಹೇಳಿದರು. ಆದರೆ ಆಕೆ ಆಗ ಗರ್ಭಿಣಿ ಹಾಗಾಗಿ ಆಕೆ ಬರಲಾಗಲಿಲ್ಲ. ಆ ನಂತರ ಕೊರೊನಾ ಕಾರಣ ಕಾರಣ ಚಿತ್ರೀಕರಣ ಬಂದ್ ಆಯಿತು. ಮತ್ತೆ ಚಿತ್ರೀಕರಣ ಆರಂಭವಾದಾಗ ಸಿರಿಶಾಗೆ ಮಗುವಾಗಿತ್ತು. ಹಾಗಾಗಿ ಅವರಿಗೆ ತೊಂದರೆ ಕೊಡುವುದು ಬೇಡವೆಂದು ನಾನೇ ಸುಮ್ಮನಾದೆ' ಎಂದಿದ್ದಾರೆ.

ಆರೋಗ್ಯ ಸರಿಯಿಲ್ಲವೆಂದು ಕೋಮಲಿ ಬರಲಿಲ್ಲ: ಕಮ್ಮುಲ
'ನಾವು ನವೆಂಬರ್‌ನಲ್ಲಿ ಟ್ರ್ಯಾಕ್ ಸಿಂಗರ್ ಹಾಡಿದ ಹಾಡನ್ನು ಇಟ್ಟುಕೊಂಡು ಚಿತ್ರೀಕರಣ ಮಾಡಿದೆವು. ಆಗ ಇಬ್ಬರು 'ಸಾರಂಗ ದರಿಯಾ' ಹಾಡು ಹಾಡಲು ಮುಂದೆ ಬಂದಿದ್ದರು. ಕೋಮಲಿ ಹಾಡಿದರೆ ಚೆನ್ನಾಗಿರುತ್ತದೆಯೆಂದು ಆಕೆಯನ್ನು ಕೇಳಿದೆವು. ಆದರೆ ಆಕೆ ತನಗೆ ಆರೋಗ್ಯ ಸರಿಯಿಲ್ಲದ ಕಾರಣ ಈಗ ಹಾಡಲು ಆಗುವುದಿಲ್ಲ ಎಂದರು. ನಾವು ಹಾಡಿನ ಬಿಡುಗಡೆ ದಿನಾಂಕ ಘೋಷಿಸಿದ್ದ ಕಾರಣ ಫೆಬ್ರವರಿಯಲ್ಲಿ ಮಂಗ್ಲಿ ಕೈಲಿ ಹಾಡು ಹಾಡಿಸಿ ಬಿಡುಗಡೆ ಮಾಡಿದೆವು' ಎಂದು ಮಾಹಿತಿ ನೀಡಿದರು ಶೇಖರ್ ಕಮ್ಮುಲ.
Recommended Video

ಆಮಂತ್ರಣ ಪತ್ರಿಕೆ ತಲುಪಿಸುತ್ತೇವೆ: ಕಮ್ಮುಲ
ಈ ಮೊದಲೇ ನಾನು ಸುದ್ದಾಲ ಅವರ ಮನೆಯಿಂದ ಕೋಮಲಿಗೆ ಕರೆ ಮಾಡಿ ಮಾತನಾಡಿ, 'ನಿನಗೆ ಕ್ರೆಡಿಟ್ಸ್ ಕೊಡುತ್ತೇನೆ. ಹಣ ಸಹ ಕೊಡುತ್ತೇನೆ ಎಂದು ಹೇಳಿದ್ದೆ ಆಕೆ ಸಹ ಒಪ್ಪಿದ್ದರು. ನಿಮಗೆ ಇಷ್ಟ ಬಂದಷ್ಟು ಹಣ ನೀಡಿ ಎಂದು ಸಹ ಹೇಳಿದ್ದರು. ಅಷ್ಟೇ ಅಲ್ಲದೆ, ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ಹಾಡನ್ನು ಹಾಡುವಂತೆಯೂ ನಾನು ಹೇಳಿದ್ದೆ. ಇದೀಗ ಆಡಿಯೋ ಬಿಡುಗಡೆ ಕಾರ್ಯಕ್ರಮ ನಿಗದಿಯಾದರೆ ನಾನೇ ಕೋಮಲಿಗೆ ಆಮಂತ್ರಣ ಪತ್ರಿಕೆ ತಲುಪಿಸುತ್ತೇನೆ. ಸ್ಟೇಜ್ ಮೇಲೆ ಅವರಿಂದಲೇ 'ಸಾರಂಗ ದರಿಯಾ' ಹಾಡು ಹಾಡಿಸುತ್ತೇನೆ' ಎಂದಿದ್ದಾರೆ ಕಮ್ಮುಲ.


Click it and Unblock the Notifications











