'ಪುಷ್ಪ' ಬಿಟ್ಟು ಕೈ ಸುಟ್ಟುಕೊಂಡರಾ ಮಹೇಶ್ ಬಾಬು?
ಸಿನಿಮಾ ನಟರು ತಮಗೆ ಬಂದ ಕಥೆಗಳನ್ನೆಲ್ಲಾ ಹಾಗೆ ಕಣ್ಣು ಮುಚ್ಚಿಕೊಂಡು ಮಾಡುವುದಿಲ್ಲ. ಪ್ರತೀ ಕಥೆಯನ್ನು ಅಳೆದು ತೂಗಿ ಒಪ್ಪುತ್ತಾರೆ. ಹಾಗೆ ಕೆಲವು ನಟರು ಒಪ್ಪಿಕೊಳ್ಳದೆ ಬಿಟ್ಟಿರುವ ಅದೆಷ್ಟೋ ಸಿನಿಮಾಗಳಲ್ಲಿ ಬೇರೆ ನಟರು ಅಭಿನಯಿಸಿ ಯಶಸ್ಸು ಸಾಧಿಸಿರುವ ಉದಾಹಣೆಗಳು ಇವೆ. ಇದು ನಟ ಮಹೇಶ್ ಬಾಬು ವಿಚಾರದಲ್ಲಿ ಹಲವು ಬಾರಿ ಸಾಬೀತಾಗಿದೆ.
ಆದರೆ ಮತ್ತೆ ಮಹೇಶ್ ಬಾಬು ತಪ್ಪು ನಿರ್ಧಾರ ಮಾಡಿ ಒಳ್ಳೆಯ ಕತೆಯನ್ನು ಕೈ ಬಿಟ್ಟ ಬಗ್ಗೆ ಟಾಲಿವುಡ್‌ನಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಹೌದು ಸದ್ಯ ರಿಲೀಸ್ ಆಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸಿನಿಮಾದಲ್ಲಿ ನಟ ಮಹೇಶ್ ಬಾಬು ಅಭಿನಯಿಸಬೇಕಿತ್ತು. ಆದರೆ ಈಗ ಪುಷ್ಪ ರಾಜ್ ಆಗಿ ಅಲ್ಲು ಅರ್ಜುನ್ ಯಶಸ್ಸಿನ ಬಾವುಟ ಹಾರಿಸಿದ್ದಾರೆ.
ಈ ಬಗ್ಗೆ ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ ಮಾತನಾಡಿದ್ದಾರೆ. ಈ ಚಿತ್ರ ಮಹೇಶ್ ಬಾಬು ಬಳಿ ಹೋದಾಗ ಹೇಗಿತ್ತು. ನಂತರ ಏನಾಯ್ತು ಎನ್ನುವ ಬಗ್ಗೆ ಸಂದರ್ಶನದಲ್ಲಿ ಸುಕುಮಾರ್ ಮಾತನಾಡಿದ್ದಾರೆ.

ಪುಷ್ಪ ಚಿತ್ರಕ್ಕೆ ನಾಯಕ ಆಗಬೇಕಿತ್ತು ಮಹೇಶ್ ಬಾಬು!
ಸದ್ಯ ಬಾಕ್ಸಾಫೀಸ್ ಧೂಳಿ ಪಟ ಮಾಡುತ್ತಿರುವ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ಬದಲಿಗೆ ನಟ ಮಹೇಶ್ ಬಾಬು ಅಭಿನಯಿಸಬೇಕಿತ್ತು. ಆದರೆ ಅದು ಸಾಧ್ಯ ಆಗಿಲ್ಲ. ರಂಗಸ್ಥಳಂ ಸಿನಿಮಾದ ಬಳಿಕ ನಿರ್ದೇಶಕ ಸುಕುಮಾರ್ 'ಪುಷ್ಪ' ಚಿತ್ರದ ಕಥೆಯನ್ನು ಹಿಡಿದು ಮಹೇಶ್ ಬಾಬು ಬಳಿಗೆ ಹೋಗಿದ್ದರಂತೆ. ಆದರೆ ಈ ಕಥೆಯಲ್ಲಿ ಅಭಿನಯಿಸಲು ಮಹೇಶ್ ಬಾಬು ನಿರಾಕರಿಸಿದ್ದಾರೆ. ನಂತರ ಈ ಕಥೆಯನ್ನು ಅಲ್ಲು ಅರ್ಜುನ್‌ಗೆ ಹೇಳಿದ್ದಾರೆ ನಿರ್ದೇಶಕ ಸುಕುಮಾರ್. ಅಲ್ಲು ಅರ್ಜುನ್ ಈ ಪುಷ್ಪ ರಾಜ್ ಆಗಿ ಅಭಿನಯಿಸಲು ಒಪ್ಪಿದ್ದಾರೆ. ಅದರ ಪರಿಣಾಮ ಅಲ್ಲು ಅರ್ಜುನ್ ಸಿನಿಮಾ ಜರ್ನಿಯಲ್ಲಿ ಪುಷ್ಪ ದಾಖಲೆ ಮಾಡುತ್ತಿದೆ.

ಮಹೇಶ್ ಬಾಬುಗೆ ಬೇರೆ ರೀತಿ ಕಥೆ ಮಾಡಿದ್ದ ಸುಕುಮಾರ್!
ಮೊದಲು ಪುಷ್ಪ ಸಿನಿಮಾ ಮಹೇಶ್ ಬಾಬು ಬಳಿಗೆ ಹೋದಾಗ ಕಥೆ ಇದೆ ರೀತಿ ಇರಲಿಲ್ಲ. ಮಹೇಶ್ ಬಾಬುಗಾಗಿ ನಿರ್ದೇಶಕ ಸುಕುಮಾರ್ ವಿಭಿನ್ನ ರೀತಿಯಲ್ಲಿ ಕತೆ ಮಾಡಿದ್ದರಂತೆ. ಆದರೆ ಮಹೇಶ್ ಬಾಬು ಸಿನಿಮಾದಲ್ಲಿ ಮಾಡದೇ ಇದ್ದಾಗ, ಈ ಕಥೆಯನ್ನು ಅಲ್ಲು ಅರ್ಜುನ್ ಒಪ್ಪಿದ್ದಾರೆ. ಹಾಗಾಗಿ ಅಲ್ಲು ಅರ್ಜುನ್‌ಗೆ ತಕ್ಕಂತೆ ಕಥೆಯಲ್ಲಿ ಸುಕುಮಾರ್ ಬದಲಾವಣೆ ಮಾಡಿಕೊಂಡಿದ್ದಾರೆ. ಹಾಗಾಗಿ ಇದು ಅದೇ ಕಥೆಯಾಗಿ ಉಳಿದಿಲ್ಲ ಎಂದು ಸುಕುಮಾರ್ ಸ್ಪಷ್ಟ ಪಡಿಸಿದ್ದಾರೆ.

ಮಾಹೇಶ್ ಬಾಬು ನಿರಾಕರಿಸಿದ ಹಲವು ಚಿತ್ರಗಳು ಸೂಪರ್ ಹಿಟ್!
ನಟ ಮಹೇಶ್ ಬಾಬು ಅದೃಷ್ಟದ ಬಗ್ಗೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆ ಆಗುತ್ತಿರುತ್ತದೆ. ಯಾಕೆಂದರೆ ಅದೃಷ್ಟವೇ ಹುಡುಕಿಕೊಂಡು ಬಂದರೂ ಕೂಡ ಮಹೇಶ್ ಬಾಬು ರಿಜೆಕ್ಟ್ ಮಾಡುತ್ತಾರೆ. ಅಂದರೆ ಅವರು ಕೈ ಬಿಟ್ಟ ಬಹುತೇಕ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡುವುದರ ಜೊತೆಗೆ ಹಿಟ್ ಲಿಸ್ಟ್ ಸೇರಿ ಬಿಡುತ್ತವೆ. 'ಮನಸಂತಾ ನುವ್ವೆ', ಪ್ರಭಾಸ್ ಅಭಿನಯದ 'ವರ್ಷಂ', 'ಗಜಿನಿ', ಏ ಮಾಯಾ ಚೇಸಾವೆ, ಸೂರ್ಯ ಅಭಿನಯದ '24', ಚಿತ್ರಗಳು ತೆಲುಗಿನಲ್ಲಿ ಆಯಾ ಕಾಲಘಟ್ಟಕ್ಕೆ ದಾಖಲೆ ಮಾಡಿದ ಚಿತ್ರಗಳು. ಈ ಎಲ್ಲಾ ಚಿತ್ರಗಳು ಮೊದಲು ಅರಸಿ ಹೋಗಿದ್ದು ನಟ ಮಹೇಶ್ ಬಾಬು ಅವರನ್ನು. ಆದರೆ ಈ ಚಿತ್ರಗಳನ್ನ ಮಹೇಶ್ ಬಾಬು ಒಪ್ಪಿರಲಿಲ್ಲ. ಹಾಗಾಗಿ ಮತ್ತೊಬ್ಬರ ಪಾಲಾಗಿವೆ.

ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ಅಭಿನಯ!
ಸದ್ಯ 'ಸರ್ಕಾರು ವಾರಿ ಪಾಠ' ಚಿತ್ರದಲ್ಲಿ ಮಹೇಶ್ ಬಾಬು ಬ್ಯುಸಿ ಆಗಿದ್ದಾರೆ. ಈ ಚಿತ್ರದ ಬಳಿಕ ಮಹೇಶ್ ಬಾಬು ಮತ್ತೊಂದು ಇತಿಹಾಸ ಸೃಷ್ಟಿಸಲು ಮುಂದಾಗಿದ್ದಾರೆ. ಯಾಕೆಂದರೆ ಮಹೇಶ್ ಬಾಬು ಮುಂದಿನ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡುತ್ತಿದ್ದಾರೆ. ರಾಜಮೌಳಿ ಜೊತೆಗೆ ಒಬ್ಬ ನಟ ಕೆಲಸ ಮಾಡುತ್ತಾನೆ ಅಂದರೆ ಅದು ದಾಖಲೆಯ ಪುಟ ಸೇರುವುದು ಪಕ್ಕಾ ಎನ್ನುವಂತಾಗಿದೆ. ಹಾಗಾಗಿ ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ ಹೊಸ ದಾಖಲೆ ಬರೆಯುವುದು ಪಕ್ಕಾ ಎನ್ನುವ ಹಾಗೆ ಆಗಿದೆ.


Click it and Unblock the Notifications











