ಕೆಜಿಎಫ್ ಡಬ್ಬಾ ಸಿನಿಮಾ ಎಂದಾಗ ಚಪ್ಪಾಳೆ ಹಾಕಿ ನಕ್ಕ ಈ ನಿರ್ದೇಶಕರ ಚಿತ್ರಗಳ ಫಲಿತಾಂಶವೇನು?
ಸದ್ಯ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿಹೆಚ್ಚು ಚರ್ಚೆಗೀಡಾಗಿರುವ ವಿಷಯವೆಂದರೆ ಅದು ತೆಲುಗಿನ ನಿರ್ದೇಶಕ ವೆಂಕಟೇಶ್ ಮಹಾ ಕೆಜಿಎಫ್ ಚಾಪ್ಟರ್ 2 ಚಿತ್ರದ ಬಗ್ಗೆ ನೀಡಿದ ಹೇಳಿಕೆಗಳು. ಅದ್ಯಾವ ಉದ್ದೇಶದಿಂದ ಕೆಜಿಎಫ್ ತಂಟೆಗೆ ಬಂದರೋ ಏನೋ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.
ಪ್ರೇಮ ದ ಜರ್ನಲಿಸ್ಟ್ ಎಂಬ ಯುಟ್ಯೂಬ್ ಚಾನೆಲ್ ಒಂದರಲ್ಲಿ ಡೈರೆಕ್ಟರ್ಸ್ ರೌಂಡ್ ಟೇಬಲ್‌ನಲ್ಲಿ ಭಾಗವಹಿಸಿದ್ದ ವೆಂಕಟೇಶ್ ಮಹಾ ಎಲ್ಲಿಯೂ ಕೆಜಿಎಫ್ ಎಂಬ ಹೆಸರನ್ನು ಹೇಳದೇ ಕೇವಲ ಚಿತ್ರದ ಕೆಲ ದೃಶ್ಯಗಳ ಬಗ್ಗೆ ಮಾತನಾಡಿ ಕೆಜಿಎಫ್ ಚಿತ್ರದಲ್ಲಿ ಬರುವ ತಾಯಿ ಪಾತ್ರವನ್ನು ಟ್ರೋಲ್ ಮಾಡಿದರು. ಇಡೀ ಪ್ರಪಂಚದಲ್ಲಿ ಯಾವ ತಾಯಿಯಾದರೂ ದೊಡ್ಡವನಾದ ಮೇಲೆ ಒಳ್ಳೆಯ ಹೆಸರು ಮಾಡು, ನಾಲ್ಕು ಜನರಿಗೆ ಅನ್ನ ಹಾಕು ಎಂದು ಮಗನಿಗೆ ಸಲಹೆ ನೀಡುತ್ತಾಳೆ, ಆದರೆ ಇಲ್ಲಿ ಈ ಮಹಾತಾಯಿ ದೊಡ್ಡ ಮಟ್ಟದಲ್ಲಿ ಚಿನ್ನ, ಹಣ ಸಂಪಾದಿಸು ಎಂದು ಹೇಳುತ್ತಾಳೆ ಎಂದು ಟೀಕಿಸಿದ್ದಾರೆ.

ಇನ್ನೂ ಮುಂದುವರಿದು ಮಾತನಾಡಿದ ವೆಂಕಟೇಶ್ ಮಹಾ ತಾಯಿ ಮಾತಿನಂತೆ ಆತ ಕೆಲಸಗಾರರ ಸಹಾಯ ಪಡೆದುಕೊಂಡು ಲೋಡ್‌ಗಟ್ಟಲೆ ಚಿನ್ನವನ್ನು ಹೊರತೆಗೆದು ಆ ಜನರಿಗೆ ಮನೆಗಳನ್ನು ನೀಡಿ, ಆ ಚಿನ್ನವನ್ನೆಲ್ಲಾ ತೆಗೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿಬಿಡುತ್ತಾನೆ, ಎಂತಹ ಕಂತ್ರಿ ನಾಯಿ ಇರಬೇಡ ಆತ, ಇಂತಹ ಕಂತ್ರಿ ನಾಯಿಯ ಕಥೆಯನ್ನು ಸಿನಿಮಾ ಮಾಡಿದ್ದಾರೆ, ಅದನ್ನು ನೋಡಿ ನಾವು ಚಪ್ಪಾಳೆ ತಟ್ಟಿ ಗೆಲ್ಲಿಸುತ್ತೇವೆ ಎಂದಿದ್ದಾರೆ.
ಹೀಗೆ ಕೆಜಿಎಫ್ ಚಿತ್ರದ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಚಿತ್ರ ಚೆನ್ನಾಗಿಲ್ಲ ಎಂದು ಹೇಳುವ ಹಕ್ಕು ಎಲ್ಲರಿಗೂ ಇದೆ, ಆದರೆ ಇಲ್ಲಿ ವೆಂಕಟೇಶ್ ಮಹಾ ಉಪಯೋಗಿಸಿದ ಪದಗಳು ತಪ್ಪಾಗಿವೆ. ತೀರ ಕಳಪೆ ಪದಗಳನ್ನು ಓರ್ವ ನಿರ್ದೇಶಕನಾದವನು ಉಪಯೋಗಿಸಿ ಮತ್ತೊಂದು ಚಿತ್ರವನ್ನು ತೆಗಳುವುದು ಎಷ್ಟು ಸರಿ ಎಂದು ನೆಟ್ಟಿಗರು ವೆಂಕಟೇಶ್ ಮಹಾ ವಿರುದ್ಧ ಕಿಡಿಕಾರಿದ್ದಾರೆ. ಒಂದು ಕಡೆ ವೆಂಕಟೇಶ್ ಮಹಾ ಕೆಜಿಎಫ್ ಚಿತ್ರವನ್ನು ಕೆಟ್ಟ ಪದಗಳಿಂದ ಟ್ರೋಲ್ ಮಾಡುತ್ತಿದ್ದರೆ, ಮತ್ತೊಂದೆಡೆ ಸಂದರ್ಶನದಲ್ಲಿ ಭಾಗವಹಿಸಿದ್ದ ಉಳಿದವರು ಕೇಕೆ ಹಾಕಿ ನಕ್ಕಿದ್ದರು.

ಒಬ್ಬ ನಿರ್ದೇಶಕನೇನೋ ಮಾತಿನ ಭರಾಟೆಯಲ್ಲಿ ಮಿತಿಮೀರಿದ ಹೇಳಿಕೆಗಳನ್ನು ಕೊಟ್ಟ ಎಂದುಕೊಳ್ಳಬಹುದು, ಆದರೆ ಉಳಿದವರು ಆತನ ಹೇಳಿಕೆಗಳನ್ನು ಆನಂದಿಸುತ್ತಾ ಚಪ್ಪಾಳೆ ತಟ್ಟಿ ನಕ್ಕಿದ್ದು ಅವರಿಗೆ ಕೆಜಿಎಫ್ ಸಕ್ಸಸ್ ಮೇಲೆ ಇರುವ ಹೊಟ್ಟೆಕಿಚ್ಚನ್ನು ತೋರಿಸುತ್ತದೆ ಎಂದು ನೆಟ್ಟಿಗರು ಆ ನಿರ್ದೇಶಕರ ವಿರುದ್ಧ ಕಿಡಿಕಾರಿದ್ದಾರೆ. ಅಂದಹಾಗೆ ಕೆಜಿಎಫ್ ಚಿತ್ರದ ಕುರಿತು ಆಡಿಕೊಂಡು ನಕ್ಕ ಆ ನಿರ್ದೇಶಕರ ಚಿತ್ರಗಳ ಫಲಿತಾಂಶವೇನು ಎಂಬ ಮಾಹಿತಿ ಈ ಕೆಳಕಂಡಂತಿದೆ.
ಈ ಸಂದರ್ಶನದಲ್ಲಿ ನಂದಿನಿ ರೆಡ್ಡಿ ಎಂಬ ನಿರ್ದೇಶಕಿ ಸಹ ಇದ್ದರು. ಇವರೂ ಸಹ ಕೆಜಿಎಫ್ ಟ್ರೋಲ್ ಆದಾಗ ನಕ್ಕಿದ್ದರು. ಅಲಾ ಮೊದಲಾಯಿಂದಿ ಎಂಬ ಚಿತ್ರವನ್ನು ನಿರ್ದೇಶಿಸಿ ಗೆದ್ದಿದ್ದ ಈ ನಿರ್ದೇಶಕಿ ನಂತರ ಮಾಡಿದ್ದೆಲ್ಲಾ ಕಾಪಿ, ರಿಮೇಕ್. ಈಕೆ ನಿರ್ದೇಶಿಸಿದ ಜಬರ್ದಸ್ತ್ ಎಂಬ ಚಿತ್ರ ಬ್ಯಾಂಡ್ ಬಾಜಾ ಭಾರತ್ ಎಂಬ ಹಿಂದಿ ಸಿನಿಮಾದ ಕಾಪಿ, ಓಹ್ ಬೇಬಿ ಚಿತ್ರ ಮಿಸ್ ಗ್ರ್ಯಾನಿ ಎಂಬ ಸೌತ್ ಕೊರಿಯಾ ಸಿನಿಮಾದ ರಿಮೇಕ್. ಇನ್ನುಳಿದಂತೆ ಕಲ್ಯಾಣ ವೈಭೋಗಮೆ ಎಂಬ ಸಿನಿಮಾ ಹೀನಾಯವಾಗಿ ಸೋತಿತ್ತು.
ಇನ್ನುಳಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿದ್ದ ಮೋಹನ್ ಕೃಷ್ಣ ಇಂದ್ರಗಂಟಿ ಸಹ ಕೆಜಿಎಫ್ ಟೀಕೆ ಕೇಳಿ ನಕ್ಕಿದ್ದರು. ಇವರು ಆರಂಭದಲ್ಲಿ ಹಿಟ್ ಚಿತ್ರಗಳನ್ನು ನೀಡಿದರಾದರೂ ಈಗಿನ ಪ್ಯಾನ್ ಇಂಡಿಯಾ ಪೈಪೋಟಿಯಲ್ಲಿ ನೆಲಕಚ್ಚಿದ್ದಾರೆ. ಇವರ ಕೊನೆಯ ಎರಡು ಚಿತ್ರಗಳಾದ ವಿ ಹಾಗೂ ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಮಕಾಡೆ ಮಲಗಿದಂತಹ ಸಿನಿಮಾಗಳು.
ಕಳೆದ ವರ್ಷ ಬಿಡುಗಡೆಗೊಂಡ ನಾನಿ ನಟನೆಯ ಅಂಟೆ ಸುಂದರಾನಿಕಿ ಚಿತ್ರದ ನಿರ್ದೇಶಕ ವಿವೇಕ್ ಆತ್ರೇಯ ಸಹ ಈ ಸಂದರ್ಶನದಲ್ಲಿ ಭಾಗವಹಿಸಿದ್ದರು. ಅಂಟೆ ಸುಂದರಾನಿಕಿ ಚಿತ್ರ ನಷ್ಟ ಅನುಭವಿಸಿತ್ತು. ಇದಕ್ಕೂ ಮುನ್ನ ಮೆಂಟಲ್ ಮದಿಲೋ ಹಾಗೂ ಬ್ರೊ ಚೆವರೆವರುರಾ ಚಿತ್ರಗಳನ್ನು ನಿರ್ದೇಶಿಸಿದ್ದ ವಿವೇಕ್ ಆತ್ರೇಯ ಸೈ ಎನಿಸಿಕೊಂಡಿದ್ದರಾದರೂ ದೊಡ್ಡ ಮಟ್ಟಕ್ಕೆ ಬೆಳೆಯುವಲ್ಲಿ ವಿಫಲರಾಗಿದ್ದಾರೆ.
ಇನ್ನು ಮತ್ತೋರ್ವ ನಿರ್ದೇಶಕ ಶಿವ ನಿರ್ವಾಣ. ಈತ ನಿರ್ದೇಶಿಸಿರುವ ಮಜಿಲಿ ಹೊರತುಪಡಿಸಿ ಉಳಿದೆಲ್ಲಾ ಚಿತ್ರಗಳು ನಿರೀಕ್ಷೆಯನ್ನು ತಲುಪಿಲ್ಲ. ನಾನಿ ನಟನೆಯ ನಿನ್ನು ಕೋರಿ ಹಾಗೂ ಟಕ್ ಜಗದೀಶ್ ಚಿತ್ರಕ್ಕೆ ಇವರೇ ಆಕ್ಷನ್ ಕಟ್ ಹೇಳಿದ್ದರು. ನಿನ್ನು ಕೋರಿ ಸೋತರೆ, ಟಕ್ ಜಗದೀಶ್ ಹೀನಾಯವಾಗಿ ಸೋತು ಸುಣ್ಣವಾಗಿತ್ತು.
ಇನ್ನು ಕೆಜಿಎಫ್ ಕುರಿತು ಹೇಳಿಕೆ ಕೊಟ್ಟ ನಿರ್ದೇಶಕ ವೆಂಕಟೇಶ್ ಮಹಾ ನಿರ್ದೇಶಿಸಿರುವುದು ಎರಡೇ ಸಿನಿಮಾ. ಕೇರ್ ಆಫ್ ಕಾಂಚೆರಪಾಲೆಂ ಎಂಬ ಒಳ್ಳೆಯ ಸಿನಿಮಾವನ್ನೇ ನೀಡಿದ್ದ ಈತ ಬಳಿಕ ಮಲಯಾಳಂ ಮಹೇಶಿಂಟೆ ಪ್ರತೀಕಾರಂ ಸಿನಿಮಾವನ್ನು ರಿಮೇಕ್ ಮಾಡಿದರು. ಇಷ್ಟು ಬಿಟ್ಟರೆ ಈತನಿಗೆ ಯಾವ ಚಿತ್ರಗಳನ್ನು ನಿರ್ದೇಶಿಸುವ ಅವಕಾಶಗಳು ಒದಗಿ ಬಂದಿಲ್ಲ.
ಹೀಗೆ ಪ್ಯಾನ್ ಇಂಡಿಯಾ ಟ್ರೆಂಡ್ ಹುಟ್ಟಿಕೊಂಡ ಮೇಲೆ ಕಳಪೆ ಚಿತ್ರಗಳನ್ನು ನೀಡಿರುವ ಈ ನಿರ್ದೇಶಕರು ತೆಲುಗಿನವರೇ ಕೋಟಿ ಕೋಟಿ ಸುರಿದು ಚಿತ್ರ ಮಾಡಿ ಎಂದು ಕರೆದೊಯ್ದಿರುವ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ 1250 ಕೋಟಿ ಗಳಿಸಿರುವ ಕೆಜಿಎಫ್ ಬಗ್ಗೆ ನಾಲಿಗೆ ಹರಿಬಿಟ್ಟು ನಕ್ಕರೆ ಸಿನಿ ರಸಿಕರು ಟ್ರೋಲ್ ಮಾಡದೇ ಬಿಡ್ತಾರಾ?


Click it and Unblock the Notifications











