ಚಿರಂಜೀವಿ ಸಿನಿಮಾದಿಂದ ನಷ್ಟ, ಹಣ ಹಿಂತಿರುಗಿಸಿ ಎಂದ ವಿತರಕರು
ನಟ ಚಿರಂಜೀವಿ ಹಾಗೂ ರಾಮ್ ಚರಣ್ ತೇಜ ಒಟ್ಟಿಗೆ ನಟಿಸಿದ್ದ 'ಆಚಾರ್ಯ' ಸಿನಿಮಾ ಕಳೆದ ವಾರ ಬಿಡುಗಡೆ ಆಗಿತ್ತು. ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆಗಳೇನೋ ಇದ್ದವು, ಆದರೆ ಚಿತ್ರಮಂದಿರದಲ್ಲಿ ಸಿನಿಮಾ ಧಾರುಣವಾಗಿ ನೆಲಕಚ್ಚಿದೆ. ಸಿನಿಮಾಕ್ಕೆ ಹಾಕಿದ್ದ ಬಂಡವಾಳ ಇನ್ನೂ ವಾಪಸ್ಸಾಗಿಲ್ಲ.
ಆಂಧ್ರ-ತೆಲಂಗಾಣದಲ್ಲಿಯೇ ಸಿನಿಮಾ ಧಾರುಣ ಸೋಲು ಕಂಡಿದೆ. ಎರಡೂ ರಾಜ್ಯಗಳಿಂದ ಕಳೆದ ಏಳು ದಿನದಲ್ಲಿ ಸಿನಿಮಾ ಗಳಿಸಿರುವುದು ಕೇವಲ 42 ಕೋಟಿ! ಈ ಎರಡು ರಾಜ್ಯಗಳಿಂದಲೇ ಸುಮಾರು ನೂರು ಕೋಟಿ ಗಳಿಕೆ ಆಗುವ ಲೆಕ್ಕಾಚಾರವನ್ನು ಚಿತ್ರತಂಡ ಹಾಕಿತ್ತು. ಆದರೆ ಅದು ಸುಳ್ಳಾಗಿದೆ.
ಸಿನಿಮಾದ ನಿರ್ಮಾಪಕ ಸ್ವತಃ ರಾಮ್ ಚರಣ್ ಅವರೇ ಆಗಿದ್ದು ಸಿನಿಮಾವನ್ನು ವಿತರಕರಿಗೆ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿ ಸೇಫ್ ಆಗಿದ್ದಾರೆ. ಅಲ್ಲದೆ ಒಟಿಟಿ, ಟಿವಿ ಹಕ್ಕುಗಳು, ಆಡಿಯೋ ಹಕ್ಕುಗಳ ಮಾರಾಟದಿಂದಲೂ ಒಂದಷ್ಟು ಒಳ್ಳೆಯ ಮೊತ್ತವನ್ನೇ ಕಲೆ ಹಾಕಿದ್ದಾರೆ. ಆದರೆ ವಿತರಕರು ತೀವ್ರ ನಷ್ಟ ಅನುಭವಿಸಿದ್ದಾರೆ.

ಇದೀಗ 'ಆಚಾರ್ಯ' ಸಿನಿಮಾ ಧಾರುಣ ಸೋಲು ಕಂಡಿರುವ ಕಾರಣ ವಿತರಕರು ಚಿರಂಜೀವಿ ಹಾಗೂ ರಾಮ್ ಚರಣ್ ಅವರಿಂದ ನಷ್ಟ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ತಾವು ದೊಡ್ಡ ಮೊತ್ತ ತೆತ್ತು ಸಿನಿಮಾ ಖರೀದಿಸಿದ್ದು, ಹಾಕಿದ ಬಂಡವಾಳದ ಅರ್ಧದಷ್ಟು ಸಹ ವಾಪಸ್ಸಾಗಿಲ್ಲವಾದ್ದರಿಂದ ನಷ್ಟ ಪರಿಹಾರ ನೀಡಿ ಎಂದು ಒತ್ತಾಯಿಸಿದ್ದಾರೆ.
ಆಂಧ್ರ ಮತ್ತು ತೆಲಂಗಾಣ ಭಾಗದಲ್ಲಿ ಸಿನಿಮಾ ಬಿಡುಗಡೆ ಆದ ದಿನ 29 ಕೋಟಿ ರುಪಾಯಿ ಗಳಿಸಿದ್ದು ಬಿಟ್ಟರೆ ಆ ನಂತರ ಸಿನಿಮಾದ ಕಲೆಕ್ಷನ್ ಧಾರುಣವಾಗಿ ಕುಸಿಯಿತು. ಎರಡನೇ ದಿನ ಕೇವಲ 5 ಕೋಟಿ, ಮೂರನೇ ದಿನ 4 ಕೋಟಿ, ನಾಲ್ಕನೇ ದಿನ 53 ಲಕ್ಷ, ಐದನೇ ದಿನ 82 ಲಕ್ಷ, ಆರನೇ ದಿನ 26 ಲಕ್ಷ, ಏಳನೇ ದಿನ ಕೇವಲ 12 ಲಕ್ಷವನ್ನಷ್ಟೆ ಗಳಿಸಿದೆ 'ಆಚಾರ್ಯ' ಸಿನಿಮಾ.
ಚಿರಂಜೀವಿ ಸಿನಿಮಾ ಒಂದು ಇಷ್ಟು ಧಾರುಣವಾಗಿ ಸೋತಿದ್ದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಚಿರಂಜೀವಿ ಪಕ್ಕಾ ಹಿಟ್ ನಾಯಕ, ಸಿನಿಮಾ ಕೆಟ್ಟದಾಗಿದ್ದರು ಯಾರಿಗೂ ನಷ್ಟವಾಗದಂತೆ ಕಲೆಕ್ಷನ್ ಆಗುತ್ತಿತ್ತು. ಆದರೆ ಈ ಬಾರಿ ಸಿನಿಮಾ ಧಾರುಣ ಸೋಲುಂಡಿದೆ. ಹಾಗಾಗಿಯೇ ವಿತರಕರು ನಷ್ಟ ಪರಿಹಾರ ಕೇಳುತ್ತಿದ್ದಾರೆ.
ಈ ಹಿಂದೆ ನಟ ರಜನೀಕಾಂತ್ ಸೇರಿದಂತೆ ಕೆಲವು ನಾಯಕ ನಟರು ತಮ್ಮ ಸಿನಿಮಾ ಧಾರುಣ ಸೋಲುಂಡಾಗ ವಿತರಕರಿಗೆ ಹಣ ವಾಪಸ್ ಮಾಡಿದ್ದಾರೆ. ಚಿರಂಜೀವಿ ಸಹ ಈ ಬಾರಿ ಹಣ ವಾಪಸ್ಸು ಮಾಡುತ್ತಾರೆಯೇ ಕಾದು ನೋಡಬೇಕಿದೆ.
'ಆಚಾರ್ಯ' ಸಿನಿಮಾ ವಿತರಕರ ಪಾಲಿಗೆ ನಷ್ಟ ಉಂಟು ಮಾಡಿದೆಯಾದರೂ ನಿರ್ಮಾಪಕ ರಾಮ್ ಚರಣ್ ಲಾಭದಲ್ಲಿಯೇ ಇದ್ದಾರೆ. 'ಆಚಾರ್ಯ' ಸಿನಿಮಾ ವಿಶ್ವದಾದ್ಯಂತ ಏಳು ದಿನದಲ್ಲಿ ಬರೋಬ್ಬರಿ 131 ಕೋಟಿ ಕಲೆಕ್ಷನ್ ಮಾಡಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಇದರ ಮೇಲೆ ಸಿನಿಮಾವನ್ನು ಉತ್ತಮ ಮೊತ್ತಕ್ಕೆ ಅಮೆಜಾನ್ ಪ್ರೈಂಗೆ ಮಾರಾಟ ಮಾಡಲಾಗಿದೆ. ಚಿರಂಜೀವಿ ಸಿನಿಮಾದ ಸ್ಯಾಟಲೈಟ್ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗುವುದು ಸಾಮಾನ್ಯ. ಜೊತೆಗೆ ಆಡಿಯೋ ಹಕ್ಕುಗಳು ಸಹ ಉತ್ತಮ ಮೊತ್ತಕ್ಕೆ ಸೇಲ್ ಆಗಿವೆ.


Click it and Unblock the Notifications











