ಅಖಿಲ್ 'ಏಜೆಂಟ್' ಹೀನಾಯ ಸೋಲು; ಪರಿಹಾರವೆಂದು ಬೃಹತ್ ಹಣಕ್ಕೆ ಬೇಡಿಕೆ ಇಟ್ಟ ವಿತರಕರು!
ತೆಲುಗು ಚಿತ್ರರಂಗ ಈ ವರ್ಷ ಹಲವು ಹಿಟ್ ಚಿತ್ರಗಳನ್ನು ನೀಡಿದ್ದು, ನಿರೀಕ್ಷೆ ಹುಟ್ಟುಹಾಕಿದ ಚಿತ್ರಗಳಿಗಿಂತ ನಿರೀಕ್ಷೆ ಇಲ್ಲದೇ ಬಂದ ಚಿತ್ರಗಳು ಗೆದ್ದ ಉದಾಹರಣೆಯೇ ಹೆಚ್ಚು. ಹೌದು, ಬೃಹತ್ ನಿರೀಕ್ಷೆ ಹುಟ್ಟುಹಾಕಿ ಚಿತ್ರಮಂದಿರಗಳಿಗೆ ಬಂದ ಚಿತ್ರಗಳು ಹೀನಾಯವಾಗಿ ಸೋತದ್ದೇ ಹೆಚ್ಚು.
ಅದರಲ್ಲಿಯೂ ಈ ಬೇಸಿಗೆಯಲ್ಲಿ ಬಿಡುಗಡೆಗೊಂಡ ಚಿತ್ರಗಳ ಪೈಕಿ ವಿರೂಪಾಕ್ಷ ಹೊರತುಪಡಿಸಿ ಉಳಿದೆಲ್ಲಾ ಚಿತ್ರಗಳು ಮಕಾಡೆ ಮಲಗಿವೆ. ಹೀಗೆ ಸೋತ ತೆಲುಗು ಚಿತ್ರಗಳ ಪೈಕಿ ತೆಲುಗು ಚಿತ್ರರಂಗದ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರ ಕಿರಿಯ ಪುತ್ರ ಅಖಿಲ್ ಅಕ್ಕಿನೇನಿ ನಟನೆಯ ಏಜೆಂಟ್ ಕೂಡ ಒಂದು.

ಅನುಭವಿ ನಿರ್ದೇಶಕ ಸುರೇಂದರ್ ರೆಡ್ಡಿ ನಿರ್ದೇಶನದ ಈ ಚಿತ್ರ ಏಪ್ರಿಲ್ 28ರಂದು ಬಿಡುಗಡೆಗೊಂಡಿತ್ತು. ಬರೋಬ್ಬರಿ 65 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ ಒಟ್ಟಾರೆ 13.35 ಕೋಟಿ ರೂಪಾಯಿಗಳನ್ನು ಮಾತ್ರ ಗಳಿಸಿದ್ದು ದೊಡ್ಡ ಮಟ್ಟದಲ್ಲಿ ಫ್ಲಾಪ್ ಆಗಿದೆ. ಇನ್ನು ಚಿತ್ರ ಬಿಡುಗಡೆಗೂ ಮುನ್ನ 32 ಕೋಟಿ ಪ್ರಿ ರಿಲೀಸ್ ಬ್ಯುಸಿನೆಸ್ ಮಾಡಿತ್ತು. ಚಿತ್ರದ ಟ್ರೈಲರ್ ನೋಡಿದ್ದ ಸಿನಿ ರಸಿಕರು ಚಿತ್ರ ಚೆನ್ನಾಗಿರಬಹುದು ಎಂದು ಊಹಿಸಿದ್ದರು. ಆದರೆ ಈ ಕೆಲಸದಲ್ಲಿ ಚಿತ್ರ ಯಶಸ್ವಿಯಾಗಲೇ ಇಲ್ಲ.
ಏಜೆಂಟ್ ಮೊದಲ ದಿನ 6 ಕೋಟಿ ಗಳಿಸಿದ್ದು ಬಿಟ್ಟರೆ ಮೊದಲ ದಿನ ವ್ಯಕ್ತವಾದ ಸಿನಿ ರಸಿಕರ ಕೆಟ್ಟ ಪ್ರತಿಕ್ರಿಯೆಗೆ ನಂತರದ ದಿನಗಳಲ್ಲಿ ಮಕಾಡೆ ಮಲಗಿತು. ಇದರಿಂದ ಚಿತ್ರದ ಮೇಲೆ ನಂಬಿಕೆ ಇಟ್ಟು ದೊಡ್ಡ ಮೊತ್ತಕ್ಕೆ ಚಿತ್ರದ ವಿತರಣೆಯ ಹಕ್ಕುಗಳನ್ನು ಖರೀದಿಸಿದ್ದ ವಿತರಕರು ಈಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಚಿತ್ರ ತಮಗೆ ದೊಡ್ಡ ನಷ್ಟ ಉಂಟು ಮಾಡಿದ ಕಾರಣ ಪರಿಹಾರವಾಗಿ ಹಣ ನೀಡಬೇಕೆಂದು ಚಿತ್ರದ ವಿತರಕರು ಬೇಡಿಕೆ ಇಟ್ಟಿದ್ದಾರೆ. ಬರೋಬ್ಬರಿ 50 ಕೋಟಿ ರೂಪಾಯಿಗಳನ್ನು ಪರಿಹಾರವೆಂದು ನೀಡಿ ಎಂದು ವಿತರಕರು ಪಟ್ಟು ಹಿಡಿದಿದ್ದಾರೆ ಎಂದು ತೆಲುಗು ವೆಬ್ ತಾಣಗಳು ಸುದ್ದಿ ಮಾಡಿವೆ. ಈ ಮೂಲಕ ಎಕೆ ಎಂಟರ್‌ಟೈನ್‌ಮೆಂಟ್ಸ್ ಹಾಗೂ ಸುರೇಂದರ್ 2 ಸಿನಿಮಾ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ವಿತರಕರು ಇಟ್ಟಿರುವ ಈ ಬೇಡಿಕೆಯನ್ನು ನಿರ್ಮಾಪಕರು ಯಾವ ರೀತಿ ಎದುರಿಸುತ್ತಾರೋ ಕಾದು ನೋಡಬೇಕಿದೆ.
ಅಖಿಲ್ ಅಣ್ಣನ ಸಿನಿಮಾನೂ ಸಹ ಫ್ಲಾಪ್: ಅಖಿಲ್ ಅಕ್ಕಿನೇನಿಯ ಅಣ್ಣ ನಾಗಚೈತನ್ಯ ನಟನೆಯ ಕಸ್ಟಡಿ ಚಿತ್ರ ಸಹ ಈ ಬೇಸಿಗೆಯಲ್ಲಿ ಮಕಾಡೆ ಮಲಗಿದ ಚಿತ್ರಗಳಲ್ಲೊಂದು. ವೆಂಕಟ್ ಪ್ರಭು ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಚಿತ್ರ ತೆಲುಗು ಹಾಗೂ ತಮಿಳು ಎರಡು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. 45 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಕಸ್ಟಡಿ 10 ಕೋಟಿ ಕಲೆಹಾಕುವಷ್ಟರಲ್ಲಿ ಸುಸ್ತಾಗಿ ಹೋಗಿತ್ತು.
ಗೆದ್ದದ್ದು ಒಂದೇ ಚಿತ್ರ: ಹೀಗೆ ಈ ಬಾರಿಯ ಬೇಸಿಗೆಯಲ್ಲಿ ಬಿಡುಗಡೆಗೊಂಡ ತೆಲುಗು ಚಿತ್ರಗಳೆಲ್ಲಾ ಮಕಾಡೆ ಮಲಗಿದರೆ ವಿರೂಪಾಕ್ಷ ಎಂಬ ಚಿತ್ರ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿತ್ತು. 103 ಕೋಟಿ ಗಳಿಸುವ ಮೂಲಕ ಈ ಬಾರಿಯ ಬೇಸಿಗೆಯಲ್ಲಿ ನೂರು ಕೋಟಿ ಗಳಿಸಿದ ಹಾಗೂ ಗೆದ್ದ ಏಕೈಕ ತೆಲುಗು ಚಿತ್ರ ಎನಿಸಿಕೊಂಡಿತು.


Click it and Unblock the Notifications











