ರಜನಿ ಮಗಳ ಡಿವೋರ್ಸ್: ವಿಚ್ಛೇಧನಗಳನ್ನು ಸಂಭ್ರಮಿಸಬೇಕು ಎಂದ ರಾಮ್‌ಗೋಪಾಲ್ ವರ್ಮಾ!
ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಾರೆಯರ ವಿಚ್ಛೇದನ ಮುಂದುವರೆದಿದೆ. ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ಬಳಿಕ ಮತ್ತೊಂದು ತಾರಾ ಜೋಡಿ ದೂರವಾಗಿದೆ. ನಟ ಧನುಷ್ ಹಾಗೂ ಪತ್ನಿ ಐಶ್ವರ್ಯಾ ರಜನಿಕಾಂತ್ ಇಬ್ಬರ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಾರೆ. 18 ವರ್ಷಗಳ ಸಂಸಾರ ನಡೆಸಿದ ಬಳಿಕ ಇಬ್ಬರೂ ಬೇರೆಯಾಗಲು ನಿರ್ಧರಿಸಿರುವುದು ತಮಿಳು ಚಿತ್ರರಂಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿದೆ.
ಇದೆಲ್ಲದರ ಬೆನ್ನಲ್ಲೆ ಅದೆಷ್ಟೋ ಚಿತ್ರರಂಗದ ಕಲಾವಿದರು ಹಾಗೇ ಅಭಿಮಾನಿಗಳು ತಲೈವಾ ರಜನಿ ಅವರನ್ನು ನೆನೆದು ಬೇಸರಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಜನಿಕಾಂತ್ ಅವರಿಗೆ ಸಾಕಷ್ಟು ಮಂದಿ ಧೈರ್ಯ ತುಂಬುತ್ತಿದ್ದಾರೆ.
ಇದೀಗ ಇವರ ವಿಚ್ಛೇದನದ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪರೋಕ್ಷವಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮದುವೆ ಮತ್ತು ವಿಚ್ಛೇದನದ ಬಗ್ಗೆ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ. ಟ್ವೀಟ್ ಮಾಡುವ ಮೂಲಕ, ಮದುವೆ ಆಗುವುದೇ ತಪ್ಪು ಎಂದಿದ್ದಾರೆ.
ಮದುವೆ ಅತ್ಯಂತ ದುಷ್ಟ ಪದ್ದತಿ: ರಾಮ್ ಗೋಪಾಲ್ ವರ್ಮಾ!
ಸಿನಿಮಾ ಮಂದಿ ಸಾಲು ಸಾಲಾಗಿ ವಿಚ್ಛೇದನ ಪಡೆದು ಕೊಳ್ಳುತ್ತಿರುವ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ. ರಾಜಕೀಯ ಆಗಿರಲಿ ಅಥವಾ ಸಿನಿಮಾ ಆಗಿರಲಿ ಯಾವುದೇ ವಿಚಾರ ಆದರೂ ರಾಮ್ ಗೋಪಾಲ್ ವರ್ಮಾ ಎಂಟ್ರಿ ಕೊಡುತ್ತಾರೆ. ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅಂತೆಯೇ ಸದ್ಯ ರಜನಿಕಾಂತ್ ಪುತ್ರಿ ಐಶ್ವರ್ಯಾ ಮತ್ತು ಧನುಷ್ ವಿಚ್ಛೇದನದ ವಿಚಾರ ಹೊರ ಬರುತ್ತಿದ್ದ ಹಾಗೆ ಟ್ವೀಟ್ ಮಾಡಿ, ಮದುವೆಯೇ ಒಂದು ದುಷ್ಟ ಪದ್ದತಿ ಎಂದಿದ್ದಾರೆ.
ಮದುವೆ ಎನ್ನುವುದು ಪ್ರೀತಿಯ ಕೊಲೆ : ರಾಮ್‌ಗೋಪಾಲ್ ವರ್ಮಾ!
ಮದುವೆ ಮತ್ತು ಪ್ರೀತಿಯ ಬಗ್ಗೆ ರಾಮ್ ಗೋಪಾಲ್ ವರ್ಮಾ ಸರಣಿ ಟ್ವೀಟ್ ಮಾಡಿದ್ದಾರೆ. "ಮದುವೆಗಿಂತ ವೇಗವಾಗಿ ಪ್ರೀತಿಯನ್ನು ಕೊಲೆ ಮಾಡುವುದು ಯಾವುದೂ ಇಲ್ಲ. ಸಂತೋಷದ ಗುಟ್ಟು ಎಂದರೆ ಇರುವವರೆಗೂ ಪ್ರೀತಿಸುವುದು. ಆದರೆ ಮದುವೆ ಎಂಬ ಜೈಲು ಸೇರುವ ಬದಲು ಪ್ರೀತಿಯಲ್ಲಿ ಮುಂದುವರಿಯುವುದು ಉತ್ತಮ".
ಎಂದು ಒಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಮತ್ತೊಂದು ಟ್ವೀಟ್‌ನಲ್ಲಿ "ಸ್ಟಾರ್ ವಿಚ್ಛೇದನಗಳು ಮದುವೆಯ ಅಪಾಯಗಳ ಬಗ್ಗೆ ಯುವಕರನ್ನು ಎಚ್ಚರಿಸಲು ಉತ್ತಮ ಟ್ರೆಂಡ್ ಸೆಟ್ಟರ್‌ಗಳಾಗಿವೆ". ಎಂದು ಬರೆದುಕೊಂಡಿದ್ದಾರೆ.
ವಿಚ್ಛೇದನಗಳನ್ನು ಸಂಭ್ರಮಿಸ ಬೇಕು: ರಾಮ್ ಗೋಪಾಲ್ ವರ್ಮಾ!
ಮುಂದುವರೆದು ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ "ಮದುವೆ ಆಚರಿಸುವ 3 ರಿಂದ 5 ದಿನಗಳಿಗಿಂತ ಕಡಿಮೆ ದಿನಗಳವರೆಗೆ ಅವರ ನಡುವೆ ಪ್ರೀತಿ ಇರುತ್ತದೆ". ಎಂದು ಬರೆದು ಕೊಂಡಿದ್ದಾರೆ. ಜೊತೆಗೆ "ವಿಮೋಚನೆಯನ್ನು ಪಡೆಯುವ ಕಾರಣದಿಂದ ವಿಚ್ಛೇದನಗಳನ್ನು ಮಾತ್ರ ಸಂಗೀತದೊಂದಿಗೆ ಆಚರಿಸಬೇಕು ಮತ್ತು ಪರಸ್ಪರರ ಅಪಾಯಕಾರಿ ಗುಣಗಳನ್ನು ಪರೀಕ್ಷಿಸುವ ಪ್ರಕ್ರಿಯೆಯಲ್ಲಿ ವಿವಾಹಗಳು ಸದ್ದಿಲ್ಲದೆ ನಡೆಯಬೇಕು". ಎಂದು ಮತ್ತೊಂದು ಟ್ವೀಟ್‌ನಲ್ಲಿ ಬರೆದು ಕೊಂಡಿದ್ದಾರೆ.
ಮೂರ್ಖ ಮದುವೆ ಆಗುತ್ತಾರೆ: ಬುದ್ಧಿವಂತರು ಪ್ರೀತಿಸುತ್ತಾರೆ!
ಇನ್ನು ರಾಮ್ ಗೋಪಾಲ್ ವರ್ಮಾ ಅವರು ಇಷ್ಟಕ್ಕೆ ಸುಮ್ಮನೇ ಆಗಲಿಲ್ಲ. ಜೊತೆಗೆ ಮತ್ತೊಂದು ಮಾತನ್ನು ಹೇಳಿ ಬಿಟ್ಟಿದ್ದಾರೆ. "ಮೂರ್ಖರು ಮದುವೆ ಆಗುತ್ತಾರೆ, ಬುದ್ಧಿವಂತ ಜನರು ಪ್ರೀತಿ ಮಾಡುತ್ತಾರೆ". ಎಂದು ಮತ್ತೊಂದು ಟ್ವೀಟ್‌ನಲ್ಲಿ ಬರೆದು ಕೊಂಡಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಈ ಅಭಿಪ್ರಾಯಕ್ಕೆ ಹಲವರು ಮಣೆ ಹಾಕಿ, ಇದು ಸರಿ ಎಂದಿದ್ದಾರೆ. ಆದರೆ ಇನ್ನು ಕೆಲವರು ಅವರ ಮಾತುಗಳಿಗೆ ವಿರೋಧ ವ್ಯಕ್ತ ಪಡಿಸಿದ್ದಾರೆ.


Click it and Unblock the Notifications