ಮೊದಲು ಸಮಂತಾನ ಜೈಲಿಗೆ ಕಳಿಸಿ ಎಂದ ಡಾಕ್ಟರ್...!
ಜನರಿಗೆ ಮಂಕು ಬೂದಿ ಎರಚಿ ದಾರಿ ತಪ್ಪಿಸುವ ಕೆಲಸವನ್ನು ಮಾಡಬಾರದು. ಆದರೆ, ಅದ್ಯಾಕೋ.. ಸಮಂತಾ ಈ ಕೆಲಸವನ್ನು ಅತ್ಯಂತ ಪ್ರಾಮಾಣಿಕ ಮತ್ತು ಶ್ರದ್ಧೆಯಿಂದ ಮಾಡುತ್ತಿದ್ದಾರೆ.ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ವೈರಲ್ ಇನ್ಫೆಕ್ಷನ್ ತಡೆಯುವುದು ಹೇಗೆ ಎಂಬ ಸಲಹೆಯನ್ನು ನೀಡಿ, ಸ್ಯಾಮ್ ಮತ್ತೊಮ್ಮೆ ಪೇಚಿಗೆ ಸಿಲುಕಿದ್ದಾರೆ.
ಹೌದು, ಅಸಲಿಗೆ ವೈರಲ್ ಇನ್ಫೆಕ್ಷನ್ ತಡೆಯಲು, ಹೈಡ್ರೋಜ್ ಪೆರಾಕ್ಸೈಡ್ ಹಾಗೂ ಭಟ್ಟಿ ಇಳಿಸಿದ ನೀರನ್ನು ಮಿಕ್ಸ್ ಮಾಡಿ ನೆಬ್ಯುಲೈಸರ್ ಮೂಲಕ ಅದನ್ನು ತೆಗೆದುಕೊಳ್ಳುವಂತೆ ಸಮಂತಾ ಹೇಳಿದ್ದಾರೆ. ಈ ಹೇಳಿಕೆಯ ಬಗ್ಗೆ ವೈದ್ಯರು ತಕರಾರು ತೆಗೆದಿದ್ದಾರೆ. ವಿಜ್ಞಾನ ಹಾಗೂ ವೈದ್ಯ ಲೋಕದಲ್ಲಿ ಸ್ವಲ್ಪವೂ ಜ್ಞಾನವಿಲ್ಲದ ವ್ಯಕ್ತಿ ಎಂದು ಜರಿದಿದ್ದಾರೆ.

ತಮ್ಮ ಲಕ್ಷಾಂತರ ಅಭಿಮಾನಿಗಳಿಗೆ ಹೈಡ್ರೋಜ್ ಪೆರಾಕ್ಸೈಡ್ನ ತೆಗೆದುಕೊಂಡು ವೈರಲ್ ಇನ್ಫೆಕ್ಷನ್ನ ಕಡಿಮೆ ಮಾಡಿ ಎಂದು ಹೇಳುವ ಮೂಲಕ ದಾರಿ ತಪ್ಪಿಸುತ್ತಿರುವ ಸಮಂತಾಗೆ ವಿಜ್ಞಾನದ ಜ್ಞಾನವೂ ಇಲ್ಲ, ಆರೋಗ್ಯದ ಬಗ್ಗೆಯೂ ಯಾವುದೇ ಜ್ಞಾನ ಇಲ್ಲ ಎಂದು ಡಾಕ್ಟರ್ ಸೈರಿಕ್ ಅಬ್ಬಿ ಫಿಲಿಪ್ಸ್ ಕಿಡಿ ಕಾರಿದ್ದಾರೆ. ಸಮಂತಾ ಅವರ ಈ ಮಾತು ಕೇಳಿ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನೆಬ್ಯುಲೈಸ್ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಅಮೇರಿಕದ ಸೈಂಟಿಫಿಕ್ ಸೊಸೈಟಿ ಅಸ್ತಮಾ ಮತ್ತು ಅಲರ್ಜಿ ಫೌಂಡೇಶನ್ ನವರೇ ಈ ಮಾತನ್ನು ಹೇಳಿದ್ದಾರೆ ಎಂದು ಕೂಡ ಹೇಳಿದ್ದಾರೆ ಡಾಕ್ಟರ್ ಸೈರಿಕ್ ಅಬ್ಬಿ ಫಿಲಿಪ್ಸ್ .
ಇನ್ನೂ ಆರೋಗ್ಯದ ಬಗ್ಗೆ ಬೇಕಾ ಬಿಟ್ಟಿ ಸಲಹೆಯನ್ನು ನೀಡುತ್ತಿರುವ ಸಮಂತಾ ಅವರ ವಿರುದ್ಧ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಆರೋಪದಡಿ ಜೈಲಿಗೆ ಹಾಕಬೇಕು ಎಂದು ಕೂಡ ಆಗ್ರಹಿಸಿರುವ ವೈದ್ಯರು, ಭಾರತದ ಆರೋಗ್ಯ ಸಚಿವಾಲಯ ಅಥವಾ ಯಾವುದೇ ಆರೋಗ್ಯ ಸಂಸ್ಥೆ ಇವರ ಮೇಲೆ ಕ್ರಮ ಕೈಗೊಳ್ಳುತ್ತದೆಯೇ ಅಥವಾ ಸುಮ್ಮನೆ ಇದ್ದು ಜನರನ್ನು ಸಾಯಲು ಬಿಡುತ್ತಾರಾ ಎಂದು ಪ್ರಶ್ನೆಯನ್ನೂ ಕೂಡ ಮಾಡಿದ್ದಾರೆ.
ವೈದ್ಯರು ಮಾಡಿದ ಈ ಟೀಕೆ ಟಿಪ್ಪಣಿಯ ನಂತರ ಎಚ್ಚೆತ್ತುಕೊಂಡ ಸಮಂತಾ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟೀಕರಣ ಕೊಡುವ ಪ್ರಯತ್ನ ಮಾಡಿದ್ದಾರೆ. ಮೂರು ಪುಟಗಳಷ್ಟು ಸುಧೀರ್ಘ ಲೇಖನವನ್ನೂ ಬರೆದಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ವಿವಿಧ ರೀತಿಯ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿತ್ತು ಎಂದಿರುವ ಸಮಂತಾ, ಹಲವು ಚಿಕಿತ್ಸೆಗಳು ತುಂಬಾ ದುಬಾರಿಯಾಗಿದ್ದವು. ಆದರೆ ಅದೃಷ್ಟವಶಾತ್ ನಾನು ಆ ಖರ್ಚು-ವೆಚ್ಚ ನಿಭಾಯಿಸಬಲ್ಲೆ. ಆದರೆ.. ಈ ದುಬಾರಿ ಚಿಕಿತ್ಸೆಯನ್ನ ಪಡೆಯಲು ಅನೇಕರಿಗೆ ಸಾಧ್ಯವಾಗಲ್ಲ. ಈ ಅಂಶವೇ ನನಗೆ ಪರ್ಯಾಯ ಚಿಕಿತ್ಸೆಗಳು ಮತ್ತು ಚಿಕಿತ್ಸೆಗಳ ಬಗ್ಗೆ ಓದಲು ಕಾರಣವಾಯಿತು ಎಂದಿದ್ದಾರೆ. ಪ್ರಯೋಗ ಮತ್ತು ದೋಷದ ನಂತರ, ನನಗೆ ಅದ್ಭುತವಾಗಿ ಕೆಲಸ ಮಾಡುವ ಚಿಕಿತ್ಸೆಯನ್ನು ನಾನು ಕಂಡುಕೊಂಡೆ ಎಂದಿದ್ದಾರೆ. ಕಳೆದೆರಡು ವರ್ಷಗಳಲ್ಲಿ ನಾನು ಎದುರಿಸಿದ ಮತ್ತು ಕಲಿತ ಎಲ್ಲದರಿಂದ ನಾನು ಕೇವಲ ಒಳ್ಳೆಯ ಉದ್ದೇಶದಿಂದ ಸಲಹೆ ನೀಡಿದ್ದೇನೆ ಎಂದು ಕೂಡ ಸಮಂತಾ ಹೇಳಿದ್ದಾರೆ.
ಇನ್ನೂ.. ನನ್ನನ್ನು ಜೈಲಿಗೆ ಕಳುಹಿಸಬೇಕು ಎಂದು ವೈದ್ಯರೊಬ್ಬರು ಹೇಳಿದ್ದಾರೆ. ಅವರು ನನ್ನನ್ನು ಗುರಿಯಾಗಿಸಿ ಮಾತನಾಡುವ ಬದಲು.. ನಾನು ನನ್ನ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿರುವ ನನ್ನ ಡಾಕ್ಟರನ್ನು ಅವರು ಕೇಳಬೇಕಿತ್ತು ಎಂದಿದ್ದಾರೆ. ಆಗ ಇಬ್ಬರು ವೃತ್ತಿಪರ ವೈದ್ಯರ ನಡುವೆ ಚರ್ಚೆಯಾಗುತ್ತಿತ್ತು. ಆ ಚರ್ಚೆಯಿಂದ ನಾನು ಇನ್ನೂ ಹೆಚ್ಚು ಕಲಿಯಬಹುದಿತ್ತು ಎಂದು ಕೂಡ ಸಮಂತಾ ಹೇಳಿದ್ದಾರೆ. ನಾವೆಲ್ಲರೂ ವಿದ್ಯಾವಂತ ವೈದ್ಯರ ಮೇಲೆ ಅವಲಂಬಿತರಾಗಿದ್ದೇವೆ. 25 ವರ್ಷಗಳ ಕಾಲ ಡಿಆರ್‌ಡಿಒಗೆ ಸೇವೆ ಸಲ್ಲಿಸಿದ MD ಆಗಿರುವ ಹೆಚ್ಚು ಅರ್ಹ ವೈದ್ಯರು ಈ ಚಿಕಿತ್ಸೆಯನ್ನು ನನಗೆ ಸೂಚಿಸಿದ್ದಾರೆ ಎಂದು ಸಮಂತಾ ಹೇಳಿದ್ದಾರೆ. ಇನ್ನು ಮುಂದೆ ತಾನು ಹಂಚಿಕೊಳ್ಳುವ ವೈದ್ಯಕೀಯ ಸಲಹೆಯ ಬಗ್ಗೆ 'ಹೆಚ್ಚು ಜಾಗರೂಕರಾಗಿರುತ್ತೇನೆ' ಎಂದು ತಮ್ಮ ಬರಹವನ್ನು ಮುಗಿಸಿದ್ದಾರೆ ಸಮಂತಾ


Click it and Unblock the Notifications