ಗುರುವಿಗೆ ತಿರುಮಂತ್ರ ಹಾಕಿದ ಶಿಷ್ಯ, ನಿರ್ದೇಶಕರ ನಡುವಿನ ಸಮರಕ್ಕೆ ಎಂಟ್ರಿಯಾದ ನಾಯಕಿ..!
ಸ್ಟಾರ್ ವಾರ್ ಇಂದು ನಿನ್ನೆಯದ್ದಲ್ಲ. ಇದಕ್ಕೆ ಹಲವಾರು ವರ್ಷದ ಇತಿಹಾಸ ಇದೆ. ಕೇವಲ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲ, ಅಕ್ಕ-ಪಕ್ಕದ ರಾಜ್ಯದಲ್ಲಿ ಕೂಡ ಸ್ಟಾರ್ ವಾರ್, ಫ್ಯಾನ್ಸ್ ವಾರ್ ಎಲ್ಲ ಮಾಮೂಲು. ಕೇವಲ ಸ್ಟಾರ್‌ಗಳ ನಡುವೆ ಅಷ್ಟೇ ಅಲ್ಲ, ಕೆಲವೊಮ್ಮೆ ನಿರ್ದೇಶಕರ ನಡುವೆ ಕೂಡ ಮನಸ್ತಾಪ, ಅಸಮಾಧಾನ ಇರುತ್ತೆ. ಇದಕ್ಕೆ ಒಂದು ಉದಾಹರಣೆ ಎಂಬಂತೆ, ತೆಲುಗು ನಿರ್ದೇಶಕರಿಬ್ಬರ ನಡುವೆ ಹತ್ತಿಕೊಂಡ ಕಿಡಿ ಈಗ ಹೊತ್ತಿ ಉರಿಯುತ್ತಿದೆ.
ಹೌದು, ಆಂಧ್ರದ ಸ್ಟಾರ್ ಡೈರೆಕ್ಟರ್ ಪುರಿ ಜಗನ್ನಾಥ್ ನಿರ್ದೇಶನದ ''ಡಬಲ್ ಇಸ್ಮಾರ್ಟ್'' ಚಿತ್ರ ಈ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ. ಆದರೆ ಅದೇ ದಿನ ''ಡಬಲ್ ಇಸ್ಮಾರ್ಟ್'' ಅಕ್ಕ-ಪಕ್ಕದ ಚಿತ್ರಮಂದಿರಗಳಲ್ಲಿ ಟಾಲಿವುಡ್‌ನ ಮಾಸ್ ಮಹಾರಾಜ ರವಿತೇಜಾ ಅಭಿನಯದ ''ಮಿಸ್ಟರ್ ಬಚ್ಚನ್'' ಸಿನಿಮಾ ಕೂಡ ಬಿಡುಗಡೆಯಾಗಲಿದೆ.

ನಿಜಾ.. ಒಂದೇ ದಿನ ಎರಡು ದೊಡ್ಡ ಮತ್ತು ನಿರೀಕ್ಷಿತ ಸಿನಿಮಾಗಳು ತೆರೆಗೆ ಬರುತ್ತಿರುವುದು ಇದು ಮೊದಲೇನಲ್ಲ. ಆದರೆ .. ಕಮರ್ಷಿಯಲ್ ಸಿದ್ಧ ಸೂತ್ರಗಳಿರುವ, ಮಾಸ್ ಪ್ರೇಕ್ಷಕರನ್ನೇ ಗುರಿಯಾಗಿಸಿಕೊಂಡು ಮಾಡಿರುವ ಎರಡು ಸಿನಿಮಾ ಒಂದೇ ದಿನ ತೆರೆಗೆ ಬಂದರೆ ಹೇಗೆ ಅನ್ನುವುದು ಸದ್ಯದ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ಸದ್ಯ ತೆಲುಗು ಉದ್ಯಮ ವಿಫಲವಾಗಿದೆ. ಹೀಗಾಗಿ ''ಡಬಲ್ ಇಸ್ಮಾರ್ಟ್'' ಮತ್ತು ''ಮಿಸ್ಟರ್ ಬಚ್ಚನ್'' ತಂಡದ ನಡುವೆ ಶೀತಲ ಸಮರ ಆರಂಭವಾಗಿದೆ.
ಇನ್ನೂ.. ಮಿಸ್ಟರ್ ಬಚ್ಚನ್ ನಿರ್ದೇಶಕ ಹ್ಯಾರಿಸ್ ಶಂಕರ್ ಬೇರೆ ಯಾರು ಅಲ್ಲ, ಬದಲಿಗೆ ಪುರಿ ಜಗನ್ನಾಥ್ ಶಿಷ್ಯ. ಒಂದ್ಕಾಲದಲ್ಲಿ ಪುರಿ ಬಳಿ ಕೆಲಸ ಕಲಿತ ಹ್ಯಾರಿಸ್ ಶಂಕರ್ ಈಗ ಗುರುವಿಗೆ ತಿರುಮಂತ್ರ ಹಾಕುತ್ತಿದ್ದಾರೆ. ಕೇವಲ ಹ್ಯಾರಿಸ್ ಶಂಕರ್ ಮಾತ್ರ ಅಲ್ಲ, ಮಿಸ್ಟರ್ ಬಚ್ಚನ್ ಚಿತ್ರದ ಮೂಲಕ ರವಿತೇಜಾ ಕೂಡ ಪುರಿ ಜಗನ್ನಾಥ್ ಅವರಿಗೆ ಸೆಡ್ಡು ಹೊಡೆದಿದ್ದಾರೆ. ರವಿತೇಜಾ ಅವರಿಂದ ಪುರಿ ಜಗನ್ನಾಥ್ ಇದನ್ನು ನಿರೀಕ್ಷೆ ಮಾಡಿರಲಿಲ್ಲ.

ಯಾಕೆಂದರೆ .. ಪುರಿ ಜಗನ್ನಾಥ್ ಮತ್ತು ರವಿತೇಜಾ ಒಂದ್ಕಾಲದ ಸ್ನೇಹಿತರು. ಚಿತ್ರರಂಗದಲ್ಲಿ ಜೊತೆಯಲ್ಲಿ ಬೆಳೆದವರು. ಹತ್ ಹತ್ರ ಅರ್ಧ ಡಜನ್ ಚಿತ್ರಗಳನ್ನೂ ಪುರಿ ಜಗನ್ನಾಥ್ ಮತ್ತು ರವಿತೇಜಾ ಜೊತೆಯಾಗಿ ಮಾಡಿದ್ದಾರೆ. ಆ ಪೈಕಿ ''ಅಪ್ಪು'' ಚಿತ್ರದ ರಿಮೇಕ್ ''ಈಡಿಯಟ್'', ''ನೇನಿಂತೆ'', ಚಿತ್ರಗಳನ್ನು ತೆಲುಗು ಪ್ರೇಕ್ಷಕರು ಇವತ್ತು ನೆನಪು ಮಾಡಿಕೊಳ್ಳುತ್ತಾರೆ. ಈ ಸ್ನೇಹಕ್ಕೆ ಬೆಲೆ ನೀಡಿಯಾದರೂ ಕೊನೆ ಪಕ್ಷ ರವಿತೇಜಾ ತಮ್ಮ ಚಿತ್ರದ ಬಿಡುಗಡೆಯನ್ನು ಮುಂದೂಡಬಹುದಿತ್ತು. ಆದರೆ ಅದಾಗಲಿಲ್ಲ.
ಇನ್ನೂ ''ಡಬಲ್ ಇಸ್ಮಾರ್ಟ್'' ಚಿತ್ರಕ್ಕೆ ಒಂದು ಕಾಲದಲ್ಲಿ ಪಡ್ಡೆಗಳ ಹೃದಯಕ್ಕೆ ಕನ್ನ ಹಾಕಿದ್ದ ಚಾರ್ಮಿ ಕೌರ್ ಕೂಡ ಬಂಡವಾಳ ಹೂಡಿದ್ದಾರೆ.ರವಿತೇಜಾ ಜೊತೆ ಚಾರ್ಮಿ ಕೂಡ ಹಿಂದೆ ತೆರೆ ಹಂಚಿಕೊಂಡಿದ್ಧಾರೆ. ಹೀಗಾಗಿಯೇ ಸಲುಗೆ ಮತ್ತು ಪ್ರೀತಿಯಿಂದನೇ ತಮ್ಮ ''ಮಿಸ್ಟರ್ ಬಚ್ಚನ್'' ಚಿತ್ರದ ಬಿಡುಗಡೆಯನ್ನು ಮುಂದೂಡುವಂತೆ ಚಾರ್ಮಿ, ರವಿತೇಜಾ ಅವರಲ್ಲಿ ಮನವಿಯನ್ನೂ ಮಾಡಿಕೊಂಡಿದ್ದಾರೆ. ಆದರೆ ಆ ಮನವಿಗೆ ರವಿತೇಜಾ ಮಣೆ ಹಾಕಲಿಲ್ಲ. ಹೀಗಾಗಿಯೇ ಪುರಿ ಜಗನ್ನಾಥ್ ಜೊತೆ ರವಿತೇಜಾ ಮೇಲೆ ಕೋಪ ಮಾಡಿಕೊಂಡಿರುವ ಚಾರ್ಮಿ,ಸದ್ಯಕ್ಕೆ ''ಮಿಸ್ಟರ್ ಬಚ್ಚನ್'' ನಿರ್ದೇಶಕ ಹರೀಶ್ ಶಂಕರ್ ಮತ್ತು ನಾಯಕ ರವಿತೇಜಾ ಇಬ್ಬರನ್ನೂ ಸಾಮಾಜಿಕ ಜಾಲತಾಣದಲ್ಲಿ ಅನ್ಫಾಲೋ ಮಾಡಿದ್ದಾರೆ.ಹೀಗೊಂದು ಸುದ್ದಿ ಸದ್ಯಕ್ಕೆ ಕೇಳಿ ಬರುತ್ತಿದೆ.

ಈ ವಾದ-ವಿವಾದದ ಬಗ್ಗೆ ಮೌನ ಮುರಿದಿರುವ ''ಮಿಸ್ಟರ್ ಬಚ್ಚನ್'' ಚಿತ್ರದ ನಿರ್ದೇಶಕ ಹರೀಶ್ ಶಂಕರ್, 'ಕೆಲವು ಆರ್ಥಿಕ ಕಾರಣಗಳಿಂದಾಗಿ ನಾವು ಆಗಸ್ಟ್ 15 ರಂದೇ ಸಿನಿಮಾ ಬಿಡುಗಡೆ ಮಾಡಬೇಕಿದೆ. ಒಟಿಟಿ ಬಿಡುಗಡೆ ಇನ್ನಿತರೆ ಒಪ್ಪಂದಗಳನ್ನು ನಾವು ಈಗಾಗಲೇ ಮಾಡಿಕೊಂಡಿದ್ದು, ಒಂದೊಮ್ಮೆ ಸಿನಿಮಾ ಬಿಡುಗಡೆಯನ್ನು ತಡ ಮಾಡಿದರೆ ಸಿನಿಮಾಕ್ಕೆ ಆರ್ಥಿಕವಾಗಿ ಪೆಟ್ಟು ಬೀಳಲಿದೆ' ಎಂದಿದ್ದಾರೆ. ತಮಗೆ ಪುರಿ ಜಗನ್ನಾಥ್ ಗುರುವಿದ್ದಂತೆ, ಅವರಿಗೆ ಸವಾಲು ಹಾಕುವಷ್ಟು ಪ್ರತಿಭೆ ನನಗೆ ಇಲ್ಲವೆಂದು ಹೇಳಿದ್ದಾರೆ.
ಒಟ್ನಲ್ಲಿ ಸದ್ಯಕ್ಕೆ ''ಡಬಲ್ ಇಸ್ಮಾರ್ಟ್'' ಮತ್ತು ''ಮಿಸ್ಟರ್ ಬಚ್ಚನ್'' ಒಂದೇ ದಿನ ಬಿಡುಗಡೆಯಾಗುತ್ತಿರುವ ಹಿನ್ನೆಲೆ ತೆಲುಗು ಚಿತ್ರರಂಗ ಸದ್ಯಕ್ಕೆ ಚಿಂತೆಗೀಡಾಗಿದೆ. ಎರಡು ತಂಡಗಳು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ತೆಗೆದುಕೊಂಡು ಚಿತ್ರದ ಬಿಡುಗಡೆಗೆ ತಯಾರಿಗಳನ್ನೂ ಮಾಡಿಕೊಳ್ಳುತ್ತಿವೆ. ಫಲಿತಾಂಶ ಆಗಸ್ಟ್ 15ರಂದು ಹೊರಬರಲಿದೆ.


Click it and Unblock the Notifications











