ಉಪ್ಪಿ 'ಕಬ್ಜ' ಚಿತ್ರಕ್ಕೆ ತೆಲುಗಿನ ಸ್ಟಾರ್ ನಿರ್ಮಾಪಕ ಸಾಥ್
ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿರುವ ಬಹುನಿರೀಕ್ಷೆಯ ಕಬ್ಜ ಸಿನಿಮಾ ಶೂಟಿಂಗ್ ಹಂತದಲ್ಲಿ ದೊಡ್ಡ ಮಟ್ಟದ ಸದ್ದು ಮಾಡ್ತಿದೆ. ಬಹುಭಾಷೆಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಈಗ ತೆಲುಗಿನ ಸ್ಟಾರ್ ನಿರ್ಮಾಪಕರೊಬ್ಬರು ಸಾಥ್ ಕೊಡುತ್ತಿದ್ದಾರೆ.
ಕನ್ನಡದಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದ ಕಬ್ಜ ಈಗ ತೆಲುಗಿನಲ್ಲಿ ಪೋಸ್ಟರ್ ರಿಲೀಸ್ ಮಾಡುತ್ತಿದೆ. ಜನವರಿ 4 ರಂದು ಹೈದರಾಬಾದ್ ನಲ್ಲಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದ್ದು, ನಿರ್ಮಾಪಕ ಡಿವಿವಿ ದಾನಯ್ಯ ಪೋಸ್ಟರ್ ಲಾಂಚ್ ಮಾಡಲಿದ್ದಾರೆ.
ಈ ಕುರಿತು ಸ್ವತಃ ಉಪೇಂದ್ರ ಅವರೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. 'ಆರ್ ಚಂದ್ರು ನಿರ್ದೇಶನದ #ಕಬ್ಜ ಚಿತ್ರದ ಮೋಷನ್ ಪೋಸ್ಟರ್ ಅನ್ನು ರಾಜ್ ಮೌಳಿ ಅವರ RRR ಚಿತ್ರದ ನಿರ್ಮಾಪಕರಾದ ಡಿವಿವಿ ದಾನಯ್ಯ ನವರು ತೆಲುಗು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಹೈದರಾಬಾದ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ಬರಿ ಪೋಸ್ಟರ್ ಮಾತ್ರವಲ್ಲ, ತೆಲುಗು ಅವತರಣಿಕೆ ಸಿನಿಮಾದ ಮುಹೂರ್ತ ಕೂಡ ನಾಳೆಯೇ ನಡೆಯಲಿದೆ. ಬಿ ಗೋಪಾಲ್ ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ರಮೇಶ್ ಪ್ರಸಾದ್ ಕ್ಲಾಪ್ ಮಾಡಲಿದ್ದಾರೆ. ಕ್ಯಾಮೆರಾಗೆ ಡಿವಿವಿ ದಾನಯ್ಯ ಚಾಲನೆ ನೀಡಲಿದ್ದಾರೆ.
ತೆಲುಗಿನ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿರುವ ಆರ್ ಆರ್ ಆರ್ ಚಿತ್ರವನ್ನು ದಾನಯ್ಯ ನಿರ್ಮಿಸುತ್ತಿದ್ದಾರೆ. ಈ ಹಿಂದೆ ವಿನಯ ವಿಧೇಯ ರಾಮ, ಭರತ್ ಅನೇ ನೇನು, ಬ್ರೂಸ್ ಲೀ, ನಾಯಕ್, ವರಡು, ದೇಶಮುದುರು ಅಂತಹ ಹಿಟ್ ಚಿತ್ರಗಳನ್ನು ದಾನಯ್ಯ ನಿರ್ಮಿಸಿದ್ದಾರೆ.

ಇನ್ನುಳಿದಂತೆ ಕಬ್ಜ ಚಿತ್ರವನ್ನು ಆರ್ ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ವರ್ಷ ಐ ಲವ್ ಯೂ ಸಿನಿಮಾ ಮಾಡಿದ್ದ ಉಪ್ಪಿ ಮತ್ತು ಆರ್ ಚಂದ್ರು ಜೋಡಿ ಈ ವರ್ಷ ಕಬ್ಜ ಮೂಲಕ ಮೋಡಿ ಮಾಡಲು ಸಜ್ಜಾಗುತ್ತಿದ್ದಾರೆ.


Click it and Unblock the Notifications











