ಪ್ರಿಯಾಮಣಿ 'ಚಾರುಲತಾ' ಬಿಡಗಡೆಗೆ ದ್ವಾರಕೀಶ್ ಸಜ್ಜು
ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಹಿಂದಿಯಲ್ಲೂ ದ್ವಾರಕೀಶ್ ತಮ್ಮ ಛಾಪು ಮೂಡಿಸಿದ್ದಾರೆ. ಪರಭಾಷೆಯ ಚಿತ್ರರಂಗಗಳಲ್ಲಿಯೂ ನಟಿಸಿ, ಚಿತ್ರವನ್ನು ನಿರ್ಮಿಸಿ ಅಲ್ಲೂ ಸಂದ ಅಪರೂಪದ ವ್ಯಕ್ತಿಗಳ ಸಾಲಿಗೆ ದ್ವಾರಕೀಶ್ಸೇರಿಕೊಂಡಿದ್ದಾರೆ. 'ಆಪ್ತಮಿತ್ರ' ನಂತರ ನಟ ಹಾಗೂ ತಮ್ಮ ಆಪ್ತಮಿತ್ರ ವಿಷ್ಣುವರ್ಧನರ ಹೆಸರಿನಲ್ಲಿ 'ವಿಷ್ಣುವರ್ಧನ' ಚಿತ್ರವನ್ನು ನಿರ್ಮಿಸಿದ ದ್ವಾರಕೀಶ್, ಈ ಚಿತ್ರದ ಮೂಲಕ ಮತ್ತೊಂದು ಯಶಸ್ಸನ್ನು ತಮ್ಮದಾಗಿಸಿಕೊಂಡಿದ್ದಾರೆ.
ಆದರೆ ಈ 'ವಿಷ್ಣುವರ್ಧನ' ಹೆಸರಿನ ಚಿತ್ರ ನಿರ್ಮಿಸುವ ವೇಳೆ ಚಿತ್ರದ ಶೀರ್ಷಿಕೆ ಬಗ್ಗೆ ಅವರು ತೀವ್ರ ವಿರೋಧ ಎದುರಿಸುವಂತಾಯಿತು. ಆದರೆ ಚಿತ್ರದ ನಾಯಕ ನಟ ಕಿಚ್ಚ ಸುದೀಪ್ ಅವರು ನೀಡಿದ ಸಂಪೂರ್ಣ ಸಹಕಾರ ದ್ವಾರಕೀಶ್ ಅವರಿಗೆ ವರದಾನವಾಯ್ತು. ಕಿಚ್ಚ ಸುದೀಪ್ ಹಾಗೂ ದ್ವಾರಕೀಶ್ ತಮ್ಮ ಪಟ್ಟು ಸಡಿಲಿಸದೇ ಅದೇ 'ವಿಷ್ಣುವರ್ಧನ' ಹೆಸರನ್ನು ತಮ್ಮ ಚಿತ್ರಕ್ಕಿಟ್ಟು ಚಿತ್ರವನ್ನು ಬಿಡುಗಡೆ ಮಾಡಿ ಸೂಪರ್ ಹಿಟ್ ದಾಖಲಿಸಿದರು. ಈಗ ಆ ವಾದ-ವಿವಾದವೆಲ್ಲಾ ಇತಿಹಾಸದ ಪುಟ ಸೇರಿದೆ.
ಅದೇನೆ ಇರಲಿ, ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಚಿತ್ರಕಥೆಗಾರರಾಗಿ ಸ್ಯಾಂಡಲ್ ವುಡ್ ನಲ್ಲಿ ಖ್ಯಾತರಾದ ದ್ವಾರಕೀಶ್, ಇದೀಗ 70 ಹರೆಯದಲ್ಲೂ ಹೊಸ ಹುರುಪು, ಅದೇ ಹುಮ್ಮಸ್ಸಿನಿಂದ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ವಿಶೇಷ. ಕಿಚ್ಚ ಸುದೀಪ್ ನಟನೆಯ ವಿಷ್ಣುವರ್ಧನ ಚಿತ್ರದ ನಂತರ ಇದೀಗ ನಟಿ ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿರುವ 'ಚಾರುಲತಾ' ಚಿತ್ರವನ್ನು ಬಹುಭಾಷೆಗಳಲ್ಲಿ ನಿರ್ಮಿಸಿ ಚಿತ್ರದ ಬಿಡುಗಡೆಗೆ ಸಜ್ಜಾಗಿದ್ದಾರೆ.
ಕನ್ನಡದ ಪ್ರಚಂಡ ಕುಳ್ಳ ದ್ವಾರಕೀಶ್ ನಿರ್ಮಾಣದ ಚಿತ್ರ 'ಚಾರುಲತಾ' ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಬರುವ ತಿಂಗಳು 6 ರಂದು (6 ಸೆಪ್ಟೆಂಬರ್ 2012) ಚಾರುಲತಾ ಬಿಡುಗಡೆಯಾಗುವುದು ಪಕ್ಕಾ ಎಂಬ ಮಾಹಿತಿಯನ್ನು ದ್ವಾರಕೀಶ್ ಮಗ ಯೋಗೇಶ್ ಮಾಧ್ಯಮಗಳಿಗೆ ರವಾನಿಸಿದ್ದಾರೆ. 'ಚಾರುಲತಾ' ಚಿತ್ರದ ಮೂಲಕ ದ್ವಾರಕೀಶ್ ಮತ್ತೊಮ್ಮೆ ಸದ್ದು-ಸುದ್ದಿ ಮಾಡಲಿದ್ದಾರೆ. ದ್ವಾರಕೀಶ್ ಅವರಿಗೆ ಒನ್ ಇಂಡಿಯಾ ಕನ್ನಡದ 'ಹುಟ್ಟುಹಬ್ಬದ ಶುಭಾಶಯಗಳು'. (ಒನ್ ಇಂಡಿಯಾ ಕನ್ನಡ)


Click it and Unblock the Notifications











