Breaking: ಟಾಲಿವುಡ್‌ಗೆ ಇಡಿ ಶಾಕ್: 'ಪುಷ್ಪ' ನಿರ್ಮಾಪಕ- ನಿರ್ದೇಶಕರ ಮನೆ, ಕಚೇರಿಗಳ ಮೇಲೆ ಇಡಿ ಅಧಿಕಾರಿಗಳ ದಾಳಿ
ತೆಲುಗಿನ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಪ್ರೈವೇಟ್ ಲಿಮಿಟೆಡ್ ಕಛೇರಿಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬುಧವಾರ ಬೆಳಗಿನ ಜಾವದಿಂದಲೇ ಇಡಿ ಅಧಿಕಾರಿಗಳು ಮನೆಯಲ್ಲಿ ಶೋಧ ಕಾರ್ಯ ಮುಂದುವರೆಸಿರುವುದಾಗಿ ವರದಿ ಆಗಿದೆ. ನಿರ್ಮಾಪಕರಾ ನವೀನ್ ಯೆರ್ನೇನಿ ಹಾಗೂ ಯಲಮಂಚಿಲಿ ರವಿಶಂಕರ್ ಕಚೇರಿಗಳಲ್ಲಿ ಪರಿಶೀಲನೆ ನಡೀತಿದೆ.
ಮೈತ್ರಿ ಮೂವಿ ಮೇಕರ್ಸ್ ಹಾಗೂ ಅದರ ಪ್ರಮೋಟರ್ಸ್ ಕಚೇರಿಯಲ್ಲಿ ಇಡಿ ಹಾಗೂ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡಸಿದ್ದಾರೆ. ಹವಾಲಾ ಮಾರ್ಗದಲ್ಲಿ ಹಣದ ಸಂಗ್ರಹಣೆ ಮೂಲಕ ಪ್ರಮೋಟರ್‌ಗಳು ಮನಿ ಲಾಂಡರಿಂಗ್‌ಗೆ ಮುಂದಾಗಿರುವ ಅನುಮಾನದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಈ ಶೋಧ ಕಾರ್ಯ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆಯಾದ 'ವಾಲ್ತೇರು ವೀರಯ್ಯ' ಹಾಗೂ 'ವೀರಸಿಂಹ ರೆಡ್ಡಿ' ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಾಣ ಮಾಡಿತ್ತು. ಎರಡು ಸಿನಿಮಾಗಳು ಪ್ರೇಕ್ಷಕರ ಮನಗೆದ್ದಿತ್ತು.

ಈ ಪ್ರಮೋಟರ್‌ಗಳು ವಿದೇಶದಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿರುವ ಎನ್‌ಆರ್‌ಐಗಳೆಂದು ಹೇಳಲಾಗ್ತಿದೆ. ಜಿಎಸ್‌ಟಿ ನಿಯಮಾವಳಿಗಳನ್ನು ಉಲ್ಲಂಘಿಸಿದಕ್ಕಾಗಿ ಹಾಗೂ ಆದಾಯ ತೆರಿಗೆ ಪಾವತಿಯಲ್ಲಿ ಸುಳ್ಳು ಮಾಹಿತಿ ನೀಡಿರುವ ಆರೋಪ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಪಕರ ನಿವಾಸಗಳು ಹಾಗೂ ಕಚೇರಿಗಳಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಇದೇ ಸಂಸ್ಥೆ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸರಣಿ ಸಿನಿಮಾಗಳನ್ನು ನಿರ್ಮಿಸಿದೆ. ಮತ್ತಷ್ಟು ಸಿನಿಮಾಗಳಿಗೆ ಬಂಡವಾಳ ಹೂಡಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಸುಕುಮಾರ್ ಮನೆ ಮೇಲೂ ದಾಳಿ ನಡೆಸಿರುವುದಾಗಿ ಹೇಳಲಾಗ್ತಿದೆ. ಸುಕುಮಾರ್ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣದ 'ಪುಷ್ಪ' ಸರಣಿ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರದ ಮೊದಲ ಭಾಗ ಹಿಟ್ ಆಗಿದ್ದು 2ನೇ ಭಾಗ ಚಿತ್ರೀಕರಣ ನಡೀತಿದೆ.


Click it and Unblock the Notifications











