101 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣ; ಅಲ್ಲು ಅರ್ಜುನ್ ತಂದೆಗೆ ಇಡಿ ವಿಚಾರಣೆ
ಜಾರಿ ನಿರ್ದೇಶನಾಲಯ (ED) ಪದೇ ಪದೆ ಟಾಲಿವುಡ್ ಮಂದಿಗೆ ಶಾಕ್ ಕೊಡುತ್ತಿದೆ. ಬ್ಯಾಂಕ್ ಹಗರಣ ಪ್ರಕರಣವೊಂದರಲ್ಲಿ ನಟ ಅಲ್ಲು ಅರ್ಜುನ್ ತಂದೆ ತೆಲುಗು ನಿರ್ಮಾಪಕ ಅಲ್ಲು ಅರವಿಂದ್ ಅವರನ್ನು ಪ್ರಶ್ನಿಸಿದೆ. ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿ, ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಹೈದರಾಬಾದ್ ಮೂಲದ ರಾಮಕೃಷ್ಣ ಎಲೆಕ್ಟ್ರಾನಿಕ್ಸ್ ಸಂಸ್ಥೆಗೆ ಸಂಬಂಧಿಸಿದ 101 ಕೋಟಿ ರೂ. ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅಲ್ಲು ಅರವಿಂದ್ ED ವಿಚಾರಣೆ ಎದುರಿಸುವಂತಾಗಿತ್ತು. 2018-19ರ ನಡುವೆ ನಡೆದ ಬ್ಯಾಂಕ್ ವಹಿವಾಟುಗಳ ಸಮಯದಲ್ಲಿ ವಂಚನೆ ನಡೆದಿತ್ತು ಎಂದು ವರದಿಯಾಗಿದೆ.

ರಾಮಕೃಷ್ಣ ಎಲೆಕ್ಟ್ರಾನಿಕ್ಸ್, RTPL ಕಂಪನಿ ಮಾಲೀಕರು ಸಾಲದ ಹಣವನ್ನು ತಮ್ಮ ಸ್ವಂತ ಲಾಭಕ್ಕಾಗಿ ಮತ್ತು ಅಕ್ರಮ ಹಣ ವರ್ಗಾವಣೆಗಾಗಿ ಬಳಸಿಕೊಂಡಿದ್ದಾರೆ ಎಂದು ED ಗುರ್ತಿಸಿದೆ. ರಾಮಕೃಷ್ಣ ಎಲೆಕ್ಟ್ರಾನಿಕ್ಸ್ ಮತ್ತು ಅಲ್ಲು ಅರವಿಂದ್ ಒಡೆತನದ ಕಂಪನಿಗಳ ನಡುವೆ ಕೆಲವು ಅನುಮಾನಾಸ್ಪದ ಹಣಕಾಸಿನ ವಹಿವಾಟುಗಳು ನಡೆದಿರುವುದು ಕಂಡುಬಂದಿದೆ. ಈ ವಹಿವಾಟುಗಳ ಕುರಿತು ಸ್ಪಷ್ಟೀಕರಣ ಕೋರಿ ED ಅವರಿಗೆ ನೋಟಿಸ್ ನೀಡಿದೆ. ಮುಂದಿನ ವಾರ ಮತ್ತೊಂದು ವಿಚಾರಣೆಗೆ ಹಾಜರಾಗುವಂತೆ ಅಲ್ಲು ಅರವಿಂದ್‌ಗೆ ಆದೇಶಿಸಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಸಿಬಿಐ ದಾಖಲಿಸಿದ ಎಫ್‌ಐಆರ್ ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಕರ್ನೂಲ್, ಹೈದರಾಬಾದ್ ಮತ್ತು ಗಾಜಿಯಾಬಾದ್ ಪ್ರದೇಶಗಳಲ್ಲಿ ಶೋಧ ನಡೆಸಿದರು. ಸಂಸ್ಥೆಗಳ ನಿರ್ದೇಶಕರು ಮತ್ತು ಪಾಲುದಾರ ವಿ. ರಾಘವೇಂದ್ರ, ವಿ. ರವಿ ಕುಮಾರ್ ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಪ್ರಕರಣದ ಆರೋಪಿಗಳಾಗಿರುವ ವಿ. ರಾಘವೇಂದ್ರ ಮತ್ತು ವಿ. ರವಿ ಕುಮಾರ್ ಜೊತೆಗಿನ ಅಲ್ಲು ಅರವಿಂದ್ ಒಡನಾಟ, ಆಸ್ತಿ ಖರೀದಿ ಸಂಬಂಧ ತನಿಖೆ ನಡೆಯುತ್ತಿದೆ. ಸಾಕಷ್ಟು ಪ್ರಶ್ನೆಗಳನ್ನು ಸಿದ್ಧಪಡಿಸಿ ಇಡಿ ಅಧಿಕಾರಿಗಳು ಅಲ್ಲು ಅರವಿಂದ್ ಉತ್ತರವನ್ನು ದಾಖಲಿಸಿಕೊಂಡಿದ್ದಾರೆ. ವಿಚಾರಣೆ ಬಳಿಕ ಅಲ್ಲು ಅರವಿಂದ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
"2017ರಲ್ಲಿ ನಾನು ಒಂದು ಪ್ರಾರ್ಪಟಿ ಖರೀದಿಸಿದ್ದೆ. ಅದು ಒಬ್ಬ ಅಪ್ರಾಪ್ತನ ಆಸ್ತಿ ಭಾಗವಾಗಿತ್ತು. ಇಡಿ ಸಮಸ್ಯೆಯಿಂದ ಆತ ಬ್ಯಾಂಕ್‌ನಲ್ಲಿ ಸಾಲ ಪಡೆದು ಮರುಪಾವತಿ ಮಾಡಿರಲಿಲ್ಲ. ಹಾಗಾಗಿ ಆತನ ಇಡಿ ವಿಚಾರಣೆಗೆ ಹಾಜರಾಗಿದ್ದಾನೆ. ಅಲ್ಲಿ ಅಕೌಂಟ್ಸ್ ಬುಕ್‌ನಲ್ಲಿ ನನ್ನ ಹೆಸರು ಕೂಡ ಇತ್ತು. ಹಾಗಾಗಿ ವಿಚಾರಣೆಗೆ ಕರೆದಿದ್ದರು" ಎಂದು ಅಲ್ಲು ಅರವಿಂದ್ ಹೇಳಿದ್ದಾರೆ.
ನಾನು ಜವಾಬ್ದಾರಿಯುತ ಪ್ರಜೆಯಾಗಿ ಇಡಿ ವಿಚಾರಣೆಗೆ ಕರೆದಾಗ ಬರಲೇಬೇಕು. ಹೋಗಿ ವಿಚಾರಣೆ ಎದುರಿಸಿ ಬಂದಿದ್ದೇನೆ. ಅದು ಬಿಟ್ಟು ಮಾಧ್ಯಮಗಳಲ್ಲಿ ದೊಡ್ಡದಾಗಿ ತೋರಿಸುತ್ತಿರುವಂತೆ ಏನು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅಲ್ಲು ಅರವಿಂದ್ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. 'ಮಗಧೀರ', 'ಸರೈನೋಡು', 'ಬದ್ರಿನಾಥ್', 'ಧ್ರುವ', 'ಅಲಾ ವೈಕುಂಠಪುರಂಲೊ' ಆ ಸಂಸ್ಥೆಯ ಕೆಲ ಸಿನಿಮಾಗಳು.
6 ತಿಂಗಳ ಹಿಂದೆ 'ಪುಷ್ಪ' ಸಿನಿಮಾ ಬಿಡುಗಡೆ ವೇಳೆ ಹೈದ್ರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಾಗಿ ಬಂಧನವಾಗಿತ್ತು. ವಿಚಾರಣಾಧೀನ ಕೈದಿಯಾಗಿ ಒಂದು ದಿನ ಅಲ್ಲು ಅರ್ಜುನ್ ಕೇಂದ್ರ ಕಾರಾಗೃಹದಲ್ಲಿ ಇರುವಂತಾಯಿತು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು.


Click it and Unblock the Notifications











