₹20 ಕೋಟಿ ಕೊಟ್ಟರೂ ನಾನು ತೆಲುಗು ಮಾತನಾಡುವುದಿಲ್ಲ ; ದೀಪಿಕಾ ಪಡುಕೋಣೆ ?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪುರುಷ ಪ್ರಧಾನ ಚಿತ್ರರಂಗದಲ್ಲಿ ನಾಯಕರದ್ದೇ ಕಾರುಬಾರು ಇತ್ತು. ಸಂಭಾವನೆ ವಿಚಾರದಲ್ಲಿಯೂ ನಾಯಕಿಯರಿಗೆ ಆಗ್ತಿದ್ದಿದ್ದು ಅನ್ಯಾಯನೇ. ನಾಯಕರಿಗೆ ಕೊಡಲಾಗುತ್ತಿದ್ದ ಸಂಭಾವನೆಯ ಅರ್ಧದಷ್ಟು ಹಣ ನಾಯಕಿಗೆ ಕೊಡಲು ಹಿಂದೇಟು ಹಾಕ್ತಿದ್ದ ಕಾಲ ಅದು. ಆದರೆ ಈಗ ಕಾಲ ಪರಿಸ್ಥಿತಿ ಬದಲಾಗಿದೆ. ಅಲ್ಲೊಬ್ಬರು .. ಇಲ್ಲೊಬ್ಬರು .. ನಾಯಕರಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುತ್ತಿದ್ದಾರೆ.
ಕೇವಲ ಸಂಭಾವನೆ ಮಾತ್ರವಲ್ಲ ನಾಯಕರಂತೆ ಚಿತ್ರದ ಗಳಿಕೆಯಲ್ಲಿ ಕೂಡ ಪರ್ಸಟೇಂಜ್ ಕೇಳುತ್ತಿದ್ದಾರೆ. ನಾಯಕಿಯರ ಈ ಷರತ್ತು ಈಗ ಹಲವರ ತಲೆ ನೋವಿಗೆ ಕಾರಣವಾಗುತ್ತಿದೆ. ಆರಂಭದಲ್ಲಿಯೇ ತಂಡದಲ್ಲಿ ಇದರಿಂದ ಬಿರುಕು ಮೂಡುತ್ತಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಸದ್ಯ ದೀಪಿಕಾ ಪಡುಕೋಣೆ ಪ್ರಭಾಸ್ ಅಭಿನಯದ ಸ್ಪಿರಿಟ್ ಚಿತ್ರದಿಂದ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಚಿತ್ರ ನಗರಿಯಲ್ಲಿ ಚಾಲ್ತಿಯಲ್ಲಿದೆ.

ಹೌದು, ಸದ್ಯ ತಾಯ್ತನದ ಸುಖ ಅನುಭವಿಸುತ್ತಿರುವ ದೀಪಿಕಾ ಪಡುಕೋಣೆ ಚಿತ್ರರಂಗದಲ್ಲಿ ತಮ್ಮ ಎರಡನೇ ಇನಿಂಗ್ಸ್‌ಗೆ ಸಜ್ಜಾಗಿದ್ದಾರೆ. ಕಥೆಗಳನ್ನು ಕೇಳುತ್ತಿದ್ದಾರೆ.
ಆ ಪೈಕಿ ಅರ್ಜುನ್ ರೆಡ್ಡಿ ಮತ್ತು ಅನಿಮಲ್ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹೇಳಿದ್ದ ಸ್ಪಿರಿಟ್ ಚಿತ್ರದ ಕಥೆಯನ್ನು ಕೇಳಿದ್ದ ದೀಪಿಕಾ ಪಡುಕೋಣೆ ಚಿತ್ರವನ್ನು ಒಪ್ಪಿಕೊಂಡಿದ್ದರು. ಈ ಮೂಲಕ ಕಲ್ಕಿ ಚಿತ್ರದ ನಂತರ ಮತ್ತೊಮ್ಮೆ ಪ್ರಭಾಸ್ ಜೊತೆ ಚಿತ್ರವನ್ನು ಮಾಡಲು ಮುಂದಾಗಿದ್ದರು.
ಇನ್ನು. ಇಂಡಿಯಾ ಟುಡೇ ವರದಿ ಮಾಡಿರುವಂತೆ ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ 5 ಅಲ್ಲ 10 ಅಲ್ಲ ಬದಲಿಗೆ 20 ಕೋಟಿ ಸಂಭಾವನೆಯನ್ನು ಕೇಳಿದ್ದರು. ನಿರ್ಮಾಣ ಸಂಸ್ಥೆ ಕೂಡ ದೀಪಿಕಾ ಕೇಳಿದಷ್ಟು ಸಂಭಾವನೆ ಕೊಡಲು ಮುಂದಾಗಿತ್ತು. ಆದರೂ ಕೂಡ ದೀಪಿಕಾ ಪಡುಕೋಣೆ ಚಿತ್ರ ತಂಡದ ಮುಂದೆ ಕೆಲ ಷರತ್ತುಗಳನ್ನು ಹಾಕಿದ್ದರು.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ 20 ಕೋಟಿಯ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದ ದೀಪಿಕಾ ಪಡುಕೋಣೆ ಆ ನಂತರ ಚಿತ್ರದ ಗಳಿಕೆಯಲ್ಲಿ ಪಾಲನ್ನು ಕೂಡ ಕೇಳಿದ್ದರು. ಇದು ಮಾತ್ರವಲ್ಲದೇ ಕೆಲ ಷರತ್ತುಗಳನ್ನು ಕೂಡ ಹಾಕಿದ್ದರು. ಆ ಪೈಕಿ ಯಾವುದೇ ಕಾರಣಕ್ಕೂ ನಾನು ತೆಲುಗು ಮಾತನಾಡುವುದಿಲ್ಲ ಎನ್ನುವುದು ಪ್ರಮುಖವಾದದ್ದು.
ಹೌದು, ಅಸಲಿಗೆ ಸ್ಪಿರಿಟ್ ತೆಲುಗು ಚಿತ್ರವಲ್ಲ ಬದಲಿಗೆ ಪ್ಯಾನ್ ಇಂಡಿಯಾ ಸಿನಿಮಾ. ತೆಲುಗಿನಲ್ಲಿ ನಿರ್ಮಾಣವಾಗುವ ಈ ಚಿತ್ರ ಆ ನಂತರ ಹಿಂದಿ ಸೇರೆ ಬೇರೆ ಭಾಷೆಗಳಿಗೆ ಡಬ್ ಆಗಲಿದೆ. ಇನ್ನು.. ಮೂಲ ಚಿತ್ರ ತೆಲುಗು ಆದ ಕಾರಣ ಚಿತ್ರೀಕರಣದ ಸಮಯದಲ್ಲಿ ಪಾತ್ರದ ಭಾವನೆಗಳನ್ನು ಅರ್ಥ ಮಾಡಿಕೊಂಡು ಸಂಭಾಷಣೆಯನ್ನು ತೆಲುಗಿನಲ್ಲಿಯೇ ದೀಪಿಕಾ ಹೇಳಬೇಕೆನ್ನುವುದು ಸಂದೀಪ್ ರೆಡ್ಡಿ ವಂಗಾ ಒತ್ತಾಸೆಯಾಗಿತ್ತು.
ಆದರೆ ದೀಪಿಕಾ ಇದಕ್ಕೆ ಒಪ್ಪಲಿಲ್ಲ. ಬದಲಿಗೆ ನನ್ನ ಸಾಲುಗಳನ್ನು ನಾನು ತೆಲುಗಿನಲ್ಲಿ ಹೇಳುವುದಿಲ್ಲ ಎಂದು ಷರತ್ತು ಹಾಕಿದ್ದರು. ಇದಲ್ಲದೇ 8 ಗಂಟೆ ಕೆಲಸ ಮಾಡಿದ ನಂತರ ನಾನು ಸ್ಥಳದಲ್ಲಿ ಒಂದು ಸೆಕೆಂಡ್ ಕೂಡ ಇರುವುದಿಲ್ಲ ಎಂದು ಕಡ್ಡಿ ಮುರಿದಂತೆ ದೀಪಿಕಾ ಹೇಳಿದರು. ಇದೆಲ್ಲದರಿಂದ ಕಂಗಾಲಾದ ವಂಗಾ ಸದ್ಯ ದೀಪಿಕಾ ಪಡುಕೋಣೆ ಸಹವಾಸ ಬೇಡ ಎಂದು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ತೆಲುಗು ಮಾತನಾಡಲು ಹಿಂದೇಟು ಹಾಕುವುದಲ್ಲದೇ ದೀಪಿಕಾ ಪಡುಕೋಣೆ ಹಾಕಿರುವ ಷರತ್ತುಗಳ ಕುರಿತು ಸದ್ಯ ಚಿತ್ರರಂಗದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ದೀಪಿಕಾ ಪಡುಕೋಣೆ ಅವರದ್ದು ವೃತ್ತಿಪರವಲ್ಲದ ವರ್ತನೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸ್ಪಿರಿಟ್ ಚಿತ್ರದಿಂದ ನಿಜಕ್ಕೂ ಹೊರ ಬರಲು ಕಾರಣವೇನು ? ದೀಪಿಕಾ ಪಡುಕೋಣೆ ಈ ಕುರಿತು ಮಾತನಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











