ಅಲ್ಲು ಅರ್ಜುನ್ ವಿರುದ್ಧ ತೊಡೆ ತಟ್ಟಲು ಸ್ಟಾರ್ ನಟನನ್ನು ಕರೆತಂದ ಸುಕುಮಾರ್
ನಟ ಅಲ್ಲು ಅರ್ಜುನ್ ನಟನೆಯ "ಪುಷ್ಪ' ಸಿನಿಮಾ ದಕ್ಷಿಣ ಭಾರತದ ಅತ್ಯಂತ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾಗಳಲ್ಲಿ ಒಂದು.
ರಕ್ತ ಚಂದನ ಕಳ್ಳ ಸಾಗಣೆದಾರನ ಕತೆ ಹೊಂದಿರುವ ಈ ಸಿನಿಮಾಕ್ಕೆ ಭಾರಿ ಪವರ್‌ಫುಲ್ ವಿಲನ್‌ಅನ್ನು ಕರೆತರುವ ಬಗ್ಗೆ ಈ ಮೊದಲಿನಿಂದಲೂ ಚಿತ್ರತಂಡ ಹೇಳಿತ್ತು. ಅಂತೆಯೇ ಈಗ ಅದ್ಭುತ ನಟನೊಬ್ಬನನ್ನು ಸಿನಿಮಾಕ್ಕೆ ವಿಲನ್ ಆಗಿ ಆಯ್ಕೆ ಮಾಡಿದ್ದಾರೆ "ಪುಷ್ಪ' ನಿರ್ದೇಶಕ ಸುಕುಮಾರ್.
ಮಲಯಾಳಂ ಸ್ಟಾರ್ ನಟ, ರಾಷ್ಟ್ರಪ್ರಶಸ್ತಿ ವಿಜೇತ ನಟ ಫಹಾದ್ ಫಾಸಿಲ್ ಅವರು ಪುಷ್ಪ ಸಿನಿಮಾದಲ್ಲಿ ಖಳನಟನ ಪಾತ್ರದಲ್ಲಿ ನಟಿಸಲಿದ್ದಾರೆ. ಈ ವಿಷಯವನ್ನು ಸಿನಿಮಾದ ಪ್ರೊಡಕ್ಷನ್ ಹೌಸ್ ಆದ ಮೈತ್ರಿ ಮೂವೀಸ್ ಸ್ಪಷ್ಟಪಡಿಸಿದೆ.

ಟ್ವಿಟ್ಟರ್‌ನಲ್ಲಿ ವಿಡಿಯೋ ಪ್ರಕಟಿಸಿರುವ ಮೈತ್ರಿ ಮೂವೀಸ್, "ಪುಷ್ಪ ಚಿತ್ರತಂಡಕ್ಕೆ ಸ್ವಾಗತ ಫಹಾದ್ ಫಾಸಿಲ್' ಎಂದಿದೆ.
ಫಹಾದ್ ಫಾಸಿಲ್ ನಟನೆಯ ಬಗ್ಗೆ ಹೊಸದಾಗಿ ಪರಿಚಯ ಮಾಡಿಸುವ ಅಗತ್ಯವಿಲ್ಲ. "ಟ್ರಾನ್ಸ್', 'ಕುಂಬಳಂಗಿ ನೈಟ್ಸ್' 'ಸಿ ಯು ಸೂನ್' ಇನ್ನೂ ಕೆಲವು ಇತ್ತೀಚಿನ ಸಿನಿಮಾಗಳನ್ನು ಗಮನಿಸಿದರೂ ಫಹಾದ್ ಫಾಸಿಲ್ ನಟನೆಯ ಆಳ, ಶಕ್ತಿ ಎಂತದ್ದು ಎಂಬುದು ಗೊತ್ತಾಗುತ್ತದೆ.
ಮಲಯಾಳಂ ಸಿನಿಮಾದ ಈ ಸ್ಟಾರ್ ನಟನಿಗೆ ವಿಲನ್ ಪಾತ್ರಗಳು ಹೊಸದೇನೂ ಅಲ್ಲ. ನಟನೆಗೆ 'ಸ್ಕೋಪ್' ಇರುವ ಪಾತ್ರಗಳು ಹೀರೋ ಆಗಿರಲಿ, ವಿಲನ್ ಆಗಿರಲಿ ಕೈತಪ್ಪಿ ಹೋಗಲು ಬಿಡುವುದಿಲ್ಲ ಫಹಾದ್.
Recommended Video
"ಪುಷ್ಪ' ಸಿನಿಮಾದಲ್ಲಿ ಪ್ರತಿಭಾವಂತ ನಟರ ದಂಡೇ ಇದೆ. ನಾಯಕ ಅಲ್ಲು ಅರ್ಜುನ್, ತಮಿಳಿನ ಚಿಯಾನ್ ವಿಕ್ರಂ, ಈಗ ಫಹಾದ್ ಫಾಸಿಲ್ ಸಹ ತಂಡ ಸೇರಿಕೊಂಡಿದ್ದಾರೆ. ಸಿನಿಮಾದಲ್ಲಿ ನಾಯಕಿ ಪಾತ್ರ ನಿರ್ವಹಿಸುತ್ತಿರುವುದು ಕನ್ನಡತಿ ರಶ್ಮಿಕಾ ಮಂದಣ್ಣ. ಸಿನಿಮಾಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಸಿನಿಮಾವು ಆಗಸ್ಟ್ 13 ರಂದು ತೆರೆಗೆ ಬರಲಿದೆ.


Click it and Unblock the Notifications











