ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರ್ದೇಶಕ ರಾಜಮೌಳಿ: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 47ನೇ ವಸಂತಕ್ಕೆ ಕಾಲಿಟ್ಟಿರುವ ರಾಜಮೌಳಿ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. ನೆಚ್ಚಿನ ನಿರ್ದೇಶಕನ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.
ಜನ್ಮ ದಿನದ ಶುಭಾಶಯಗಳು ರಾಜಮೌಳಿ, ಅಸಾಧಾರಣ ಸಿನಿಮಾಗಳಿಂದ ಎಲ್ಲರನ್ನೂ ನಿಮ್ಮ ಅಭಿಮಾನಿಗಳನ್ನಾಗಿ ಮಾಡಿದ ಖ್ಯಾತ ನಿರ್ದೇಶಕ ನೀವು ಎನ್ನುತ ಹಾಡಿಹೊಗಳಿ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ರಾಜಮೌಳಿ ಕೇವಲ ನಿರ್ದೇಶಕ ಮಾತ್ರವಲ್ಲ. ಅವರು ಉತ್ತಮ ಚಿತ್ರಕಥೆಗಾರ, ಸ್ಟಂಟ್ ನಿರ್ದೇಶಕ ಸಹ ಹೌದು. ಆಕ್ಷನ್ ಪ್ಯಾಕ್ ಸಿನಿಮಾಗಳಿಗೆ ರಾಜಮೌಳಿ ಹೆಸರುವಾಸಿ.
ಬಾಹುಬಲಿ ಸಿನಿಮಾ ಮೂಲಕ ರಾಜಮೌಳಿ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾರೆ. ದೇಶ ಮಾತ್ರವಲ್ಲದೆ ವಿದೇಶದಲ್ಲೂ ಬಾಹುಬಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದೆ. ಬಾಹುಬಲಿ ಸಿನಿಮಾ ಬಳಿಕ ರಾಜಮೌಳಿ ಖ್ಯಾತಿ ಮತ್ತಷ್ಟು ಎತ್ತರಕ್ಕೆ ಏರಿದೆ. ರಾಜಮೌಳಿ ಜೊತೆ ಸಿನಿಮಾ ಮಾಡಲು ಭಾರತೀಯ ಸಿನಿ ತಾರೆಯರು ಕಾಯುತ್ತಿದ್ದಾರೆ.

ಸ್ಟೂಡೆಂಟ್ ನಂ.1 ಸಿನಿಮಾ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟ ರಾಜಮೌಳಿ 10ಕ್ಕು ಹೆಚ್ಚು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ರಾಜಮೌಳಿ ನಿರ್ದೇಶನದ ಸಿನಿಮಾಗಳಲ್ಲಿ ಸೈ, ಮಗಧೀರ, ಮರ್ಯಾದ ರಾಮಣ್ಣ, ಚತ್ರಪತಿ, ವಿಕ್ರಮಾರ್ಕುಡು, ಈಗ ಮತ್ತು ಬಾಹುಬಲಿ ಸಿನಿಮಾಗಳು ತೆಲುಗು ಸಿನಿಮಾರಂಗದಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿವೆ.
ಅನೇಕ ಅದ್ಭುತ ಸಿನಿಮಾಗಳನ್ನು ನೀಡಿರುವ ರೌಜಮೌಳಿ ಸದ್ಯ ಆರ್ ಆರ್ ಆರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಇಬ್ಬರು ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರುತ್ತಿದೆ. ರೌಜಮೌಳಿ ಮತ್ತಷ್ಟು ಉತ್ತಮ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರಲಿ ಎನ್ನುವುದೇ ಎಲ್ಲರ ಆಶಯ.


Click it and Unblock the Notifications











