246 ಕಿ.ಮೀ ನಡೆದು ಬಂದ ಅಭಿಮಾನಿ, ರಾಮ್ ಚರಣ್‌ಗೆ ಎರಡು ಮೂಟೆ ಅಕ್ಕಿ ಉಡುಗೊರೆ!
ಸಿನಿಮಾ ನಟ-ನಟಿಯರ ಮೇಲೆ ಅಭಿಮಾನ ಇರುವುದು ಸಾಮಾನ್ಯ. ಆದರೆ ತೆಲುಗು ಸಿನಿಮಾ ಪ್ರೇಕ್ಷಕರಲ್ಲಿ ತಮ್ಮ ನೆಚ್ಚಿನ ನಟನ ಮೇಲೆ ಅಭಿಮಾನ ತುಸು ಹೆಚ್ಚೆ.
ಸ್ಟಾರ್ ನಟರ ಅಭಿಮಾನಿಗಳು ಪರಸ್ಪರ ಜಗಳ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ. ಕೆಲವೇ ವರ್ಷಗಳ ಹಿಂದೆ ಜೂ ಎನ್‌ಟಿಆರ್ ಹಾಗೂ ಪವನ್ ಕಲ್ಯಾಣ್ ಅಭಿಮಾನಿಗಳ ನಡುವೆ ನಡೆದ ಗಲಾಟೆಯಲ್ಲಿ ಪವನ್ ಕಲ್ಯಾಣ್ ಅಭಿಮಾನಿಯ ಜೀವವೇ ಹೋಗಿತ್ತು.
ಆದರೆ ಎಲ್ಲ ಅಭಿಮಾನಿಗಳು ಹೀಗೆ ಜಗಳದಲ್ಲಿ ನಿರತರಾಗಿರುವುದಿಲ್ಲ, ಆದರೆ ತಮ್ಮ ನೆಚ್ಚಿನ ನಟನ ಗಮನ ಸೆಳೆಯಲು ಕೆಲವು ಚಿತ್ರ-ವಿಚಿತ್ರ ಸಾಹಸಕ್ಕೆ ಕೈ ಹಾಕುತ್ತಿರುತ್ತಾರೆ. ನೆಚ್ಚಿನ ನಟನನ್ನು ನೋಡಲು ನೂರಾರು ಕಿ.ಮೀ ನಡೆದುಕೊಂಡು ಬರುವುದು, ಸೈಕಲ್‌ನಲ್ಲಿ ಬರುವುದು ಇವುಗಳಲ್ಲೊಂದು. ಈಗ ರಾಮ್ ಚರಣ್ ತೇಜ ಅಭಿಮಾನಿಯೊಬ್ಬ ನೆಚ್ಚಿನ ನಟನನ್ನು ನೋಡಲು 264 ಕಿ.ಮೀ ನಡೆದುಕೊಂಡು ಬಂದಿದ್ದಾನೆ.

ಉಡುಗೊರೆ ನೀಡಿದ ಅಭಿಮಾನಿ
ರಾಮ್ ಚರಣ್ ತೇಜ ಅಭಿಮಾನಿ ಜೈರಾಜ್ ಎಂಬಾತ ಗಡ್ವಾಲ್‌ನ ಗೋರ್ಲಕಾನ್ ದೊಡ್ಡಿ ಎಂಬಲ್ಲಿಂದ ನಡೆದುಕೊಂಡು ಹೈದರಾಬಾದ್‌ಗೆ ಬಂದು ರಾಮ್ ಚರಣ್ ಅನ್ನು ಭೇಟಿ ಮಾಡಿದ್ದಾನೆ ಅಲ್ಲದೆ, ತಾನು ಬೆಳೆದ ಅಕ್ಕಿ ಕಾಳಿನಿಂದ ಮಾಡಿದ ರಾಮ್ ಚರಣ್ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾನೆ ಜೈರಾಜ್.

ಎರಡು ಮೂಟೆ ಅಕ್ಕಿ ನೀಡಿದ್ದಾನೆ ಅಭಿಮಾನಿ
ಅಕ್ಕಿ ಕಾಳಿನಿಂದ ಮಾಡಿದ ಚಿತ್ರವನ್ನು ಮಾತ್ರವೇ ಅಲ್ಲದೆ, ತಮ್ಮ ಗದ್ದೆಯಲ್ಲಿ ಬೆಳೆದ ಅಕ್ಕಿಯ ಎರಡು ಮೂಟೆಗಳನ್ನು ರಾಮ್ ಚರಣ್‌ಗೆ ಉಡುಗೊರೆಯಾಗಿ ನೀಡಿದ್ದಾರೆ ಜೈರಾಜ್. ತಮ್ಮನ್ನು ಭೇಟಿ ಮಾಡಲು 264 ಕಿ.ಮೀ ನಡೆದು ಬಂದ ಅಭಿಮಾನಿಯನ್ನು ಮನೆಗೆ ಕರೆದು, ಕೂರಿಸಿಕೊಂಡು ಆತ್ಮೀಯವಾಗಿ ಮಾತನಾಡಿದ್ದಾರೆ ರಾಮ್ ಚರಣ್ ತೇಜ. ಜೈರಾಜ್ ಜೊತೆ ರಾಮ್ ಚರಣ್ ಆತ್ಮೀಯವಾಗಿ ಮಾತನಾಡುತ್ತಿರುವ, ಫೋಟೊಕ್ಕೆ ಫೋಸು ನೀಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

600 ಕಿ.ಮೀ ದೂರದಿಂದ ಬಂದಿದ್ದ ಈಶ್ವರಯ್ಯ
ರಾಮ್ ಚರಣ್-ಜೈರಾಜ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುವ ರಾಮ್ ಚರಣ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸರಳತೆಯನ್ನು ಕೊಂಡಾಡುತ್ತಿದ್ದಾರೆ. ಮೆಗಾ ಕುಟುಂಬದಕ್ಕೆ ತೆಲುಗು ರಾಜ್ಯಗಳಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ನಟ ಚಿರಂಜೀವಿ ಅಭಿಮಾನಿ ಈಶ್ವರಯ್ಯ ಎಂಬಾತ, ಚಿರಂಜೀವಿಯನ್ನು ಕಾಣಲು 600 ಕಿ.ಮೀ ದೂರದಿಂದ ಸೈಕಲ್ ಸವಾರಿ ಮಾಡಿಕೊಂಡು ಬಂದಿದ್ದ. ಆತನನ್ನು ಆತ್ಮೀಯವಾಗಿ ಸ್ವಾಗತಿಸಿದ್ದ ಚಿರಂಜೀವಿ ಜೊತೆಯಾಗಿ ಫೋಟೊ ತೆಗೆಸಿಕೊಂಡಿದ್ದರು.

ತೆಲುಗು ರಾಜ್ಯಗಳಲ್ಲಿ ಇದು ಸಹಜ
ಪವನ್ ಕಲ್ಯಾಣ್ ಅನ್ನು ಭೇಟಿಯಾಗುವ ಇಂಗಿತವನ್ನು ಈಶ್ವರಯ್ಯ ವ್ಯಕ್ತಪಡಿಸಿದಾಗ, ಪವನ್ ಕಲ್ಯಾಣ್ ಅನ್ನು ಭೇಟಿ ಮಾಡಲು ವ್ಯವಸ್ಥೆಯನ್ನು ಚಿರಂಜೀವಿ ಮಾಡಿಸಿಕೊಟ್ಟಿದ್ದರು. ಅಲ್ಲು ಅರ್ಜುನ್ ಅನ್ನು ನೋಡಲು ಸಹ ಅಭಿಮಾನಿಯೊಬ್ಬ ನೂರಾರು ಕಿ.ಮೀ ಸೈಕಲ್ ಸವಾರಿ ಮಾಡಿಕೊಂಡು ಬಂದಿದ್ದು ಸಹ ವರದಿಯಾಗಿತ್ತು. ಹೀಗೆ ನೂರಾರು ಕಿ.ಮೀ ನಡೆದುಕೊಂಡು ಅಥವಾ ಸೈಕಲ್ ಸವಾರಿ ಮಾಡಿಕೊಂಡು ಬರುವುದು ತೆಲುಗು ನಟರಿಗೆ ಹೊಸದೇನೂ ಅಲ್ಲ. ಅಲ್ಲಿ ಆಗಾಗ್ಗೆ ಅಭಿಮಾನಿಗಳು ಹೀಗೆ ತಮ್ಮ ನೆಚ್ಚಿನ ನಟನ ನೋಡಲು ದೂರ ಸವಾರಿ ಮಾಡುತ್ತಾ ಬರುತ್ತಿರುತ್ತಾರೆ.


Click it and Unblock the Notifications











