ನಾಗಚೈತನ್ಯ ನಿಶ್ಚಿತಾರ್ಥ ಬೆನ್ನಲ್ಲೇ, ಪ್ಲೀಸ್ ನನ್ನನ್ನು ಮದುವೆಯಾಗಿ ಎಂದವನಿಗೆ ಸಮಂತಾ ಹೇಳಿದ್ದೇನು..?
ಇಂದಲ್ಲ, ನಾಳೆ ಸಮಂತಾ ಮತ್ತು ನಾಗಚೈತನ್ಯ ಮತ್ತೆ ಒಂದಾಗಬಹುದು. ಎಲ್ಲ ಮುನಿಸುಗಳನ್ನು ಮರೆತು ಮತ್ತೆ ಸಂಸಾರದ ಸರಿಗಮಪ ಹಾಡಬಹುದು ಎಂದು ಇವರ ಸಮಸ್ತ ಅಭಿಮಾನಿಗಳು ಮೊನ್ನೆವರೆಗೆ ಅಂದುಕೊಂಡಿದ್ದರು. ಆದರೆ .. ಆಗಸ್ಟ್ 08ರಂದು ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಆ ಎಲ್ಲ ಆಸೆಗಳಿಗೆ ನಾಗಚೈತನ್ಯ ತಣ್ಣೀರೆರಚಿದರು.
ಇನ್ನೂ ಸಮಂತಾಗೆ ಇದು ಅನಿರೀಕ್ಷಿತ ಆಘಾತ. ನಾಗಚೈತನ್ಯ ಅವರಿಂದ ಸಮಂತಾ ಇದನ್ನು ನಿರೀಕ್ಷಿಸಿರಲಿಕ್ಕಿಲ್ಲ. ಈ ಕಾರಣಕ್ಕೆ ಸಮಂತಾ ಅವರ ಕಷ್ಟವನ್ನು ನೆನೆದು ಇವರ ಅನೇಕ ಅಭಿಮಾನಿಗಳು ಮರುಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಾಗ ಚೈತನ್ಯ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ನಾಗಚೈತನ್ಯ ಅವರನ್ನೂ ತೆಗಳುತ್ತಿದ್ದಾರೆ. ಇದರ ನಡುವೆ ಸಮಂತಾ ಅವರಿಗೆ ಅವರ ಅಭಿಮಾನಿಯೊಬ್ಬ ತಮ್ಮನ್ನು ಮದುವೆಯಾಗುವಂತೆ ಕೇಳಿದ್ದಾರೆ. ನಾವೂ ಇಬ್ಬರು ಸುಖವಾಗಿರೋಣ ಎಂದಿದ್ದಾರೆ.

ಹೌದು, ಮುಕೇಶ್ ಚಿಂತಾ ಎಂಬ ಸಮಂತಾ ಅವರ ಅಭಿಮಾನಿ, ಸಮಂತಾ ಬೇಸರ ಮಾಡಿಕೊಳ್ಳಬೇಡಿ. ನಿಮಗಾಗಿ ನಾನಿದ್ದೇನೆ ಎಂದಿದ್ದಾರೆ. ನಾನು ಮತ್ತು ನೀವು ಒಳ್ಳೇಯ ಜೋಡಿಯಾಗಬಹುದು ಎಂದಿದ್ದಾರೆ. ನೀವು ಓಕೆ ಅಂದರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧ, ಆದರೆ.. ಅದಕ್ಕೆ ನನಗೆ ಎರಡು ವರ್ಷ ಕಾಲವಕಾಶವನ್ನು ಕೊಡಿ ಎಂದಿರುವ ಅಭಿಮಾನಿ ಎರಡು ವರ್ಷದಲ್ಲಿ ಹಣ ಸಂಪಾದನೆ ಮಾಡಿ ಸ್ವತಂತ್ರ್ಯವಾಗಿ ಬದುಕು ಕಟ್ಟಿಕೊಂಡು ನಿಮ್ಮ ಬಳಿ ಬರುತ್ತೇನೆ ಎಂದು ಹೇಳಿದ್ದಾರೆ. ಸದ್ಯಕ್ಕೆ ನನ್ನ ಹೃದಯವನ್ನು ನೀವು ಟೋಕನ್ ಎಂದು ನಿಮ್ಮ ಬಳಿ ಇಟ್ಟುಕೊಳ್ಳಿ, ದಯವಿಟ್ಟು ನನ್ನ ಮದುವೆಯಾಗಿ ಸ್ಯಾಮ್ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ. ಪ್ಲೀಸ್ ಸಮಂತಾ, ಪ್ಲೀಸ್ ಸಮಂತಾ ಎಂದು ಗೋಗರೆದಿದ್ದಾರೆ.
ಸಮಂತಾ ಅವರ ಅಭಿಮಾನಿಯ ಈ ವಿಡಿಯೋ ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಷ್ಟೇ ಅಲ್ಲ ಸಮಂತಾ ಅವರ ಕಣ್ಣಿಗೂ ಕೂಡ ಈ ವಿಡಿಯೋ ಬಿದ್ದಿದೆ. ಹೀಗಾಗಿಯೇ ವಿಡಿಯೋಗೆ ಪ್ರತಿಕ್ರಿಯೆಯನ್ನೂ ನೀಡಿರುವ ಸಮಂತಾ ನಿಮ್ಮ ಹಿನ್ನೆಲೆಯಲ್ಲಿರುವ ಜಿಮ್ ನೋಡಿ ನನಗೆ ಬಹುತೇಕ ಮನವರಿಕೆ ಆಗಿದೆ ಎಂದಿದ್ದಾರೆ.

ಸಮಂತಾ ಅವರಿಂದ ಬಂದ ಈ ಉತ್ತರವನ್ನು ನೋಡಿ ಇನ್ನೂ ಖುಷಿಯಾಗಿರುವ ಮುಕೇಶ್, ಆ ನಂತರ ಜಗತ್ತು ಸಮಂತಾ ವಿರುದ್ಧವಾಗಿದ್ದರೆ, ನಾನು ಆ ಪ್ರಪಂಚದ ವಿರುದ್ಧವಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನದ ಪ್ರದರ್ಶನವನ್ನು ಮಾಡಿದ್ದಾರೆ.
ಸದ್ಯಕ್ಕೆ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ತಮ್ಮ ಕಷ್ಟದ ಸಮಯದಲ್ಲಿ ಕೂಡ ಅಭಿಮಾನಿಗೆ ಉತ್ತರಿಸಿದ ಸಮಂತಾ ಅವರನ್ನು ಕೂಡ ಅವರ ಅಭಿಮಾನಿ ಬಳಗ ಹಾಡಿ ಹೊಗಳುತ್ತಿದೆ.ನಾಗಚೈತನ್ಯ ಅವರ ನಿಶ್ಚಿತಾರ್ಥದಿಂದ ನೀವು ವಿಚಲಿತರಾಗಬೇಡಿ ಎಂಬ ಮನವಿಯನ್ನೂ ಇವರ ಅಭಿಮಾನಿ ವರ್ಗ ಮಾಡುತ್ತಿದೆ. ಉಳಿದಂತೆ ನಾಗಚೈತನ್ಯ ಮತ್ತು ಶೋಭಿತಾ ಅವರ ನಿಶ್ಚಿತಾರ್ಥ ಮತ್ತು ಮದುವೆಯ ಕುರಿತು ಕೂಡ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.


Click it and Unblock the Notifications











