ತಮ್ಮ ವೈಫಲ್ಯ ಮರೆಮಾಚಲು ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಿದ್ರಾ ಪೊಲೀಸರು..?
ಅನ್ಯಾಯಕ್ಕೊಳಗಾದವರ ಮಾನ ಪ್ರಾಣ ಕಾಪಾಡಲು ಇರುವ ಕಾನೂನು, ವ್ಯವಸ್ಥೆಯ ಮೇಲೆ ಅಲ್ಲು ಅರ್ಜುನ್ ಬಂಧನ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸಾರ್ವಜನಿಕ ವಲಯದಲ್ಲಿ ಚರ್ಚೆ ಕೂಡ ನಡೆಯುತ್ತಿದೆ.
ಹೌದು, ಸಂಧ್ಯಾ ಚಿತ್ರಮಂದಿರದ ಆವರಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಎಷ್ಟೇ ಮನವಿಯನ್ನೂ ಮಾಡಿಕೊಂಡರು ಕೂಡ ಪೊಲೀಸರು ಅಲ್ಲು ಅರ್ಜುನ್‌ಗೆ ತಿಂಡಿಯನ್ನು ಕೂಡ ತಿನ್ನಲು ಕೂಡದೇ, ಬಟ್ಟೆ ಬದಲಾಯಿಸಲು ಅವಕಾಶವನ್ನು ನೀಡದೇ ಪೊಲೀಸರು ಕರೆದೊಯ್ದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕೆಲ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಹೀಗಾಗಿಯೇ ವ್ಯವಸ್ಥೆಯ ಕುರಿತು ಈಗ ಪ್ರಶ್ನೆಯನ್ನು ಮಾಡುತ್ತಿರುವ ಅನೇಕರು ತಮ್ಮ ಬೇಜವಾಬ್ದಾರಿತನವನ್ನು ಮರೆಮಾಚಲು ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದು ಎಷ್ಟು ಸರಿ ಎಂಬ ವಾದ ಮಾಡುತ್ತಿದ್ದಾರೆ. ಇನ್ನೂ ಈ ಅವಘಡ ನಡೆದಾಗ ಅಲ್ಲು ಅರ್ಜುನ್ ಚಿತ್ರಮಂದಿರದ ಒಳಗೆ ಇದ್ದರು. ಹೊರಗಡೆ ನಡೆದ ವಿಚಾರ ಅಲ್ಲು ಅರ್ಜುನ್ ಅವರಿಗೆ ಗೊತ್ತೇ ಇರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಪುಷ್ಪ 2 ನೋಡಲು ಸೇರಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ನಿಯಂತ್ರಿಸಲು ಸ್ಥಳದಲ್ಲಿ ಪೊಲೀಸರು ಇದ್ದರು.
ಆದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಜನಸಂದಣಿ ಹೆಚ್ಚಾದ ಕಾರಣ ಆ ನಂತರ ಪೊಲೀಸರು ಲಾಠಿಯನ್ನು ಬೀಸಿದರು. ಈ ಸಮಯದಲ್ಲಿ ನೂಕು ನುಗ್ಗಲು ಹೆಚ್ಚಾಗಿ ಕಾಲ್ತುಳಿತ ಸಂಭವಿಸಿದೆ. ತೆಲುಗು ಸೇರಿ ಅನೇಕ ಮಾಧ್ಯಮಗಳಲ್ಲಿ ಈ ಕುರಿತು ವರದಿ ಕೂಡ ಪ್ರಸಾರವಾಗಿದೆ. ಪ್ರಕಟವಾಗಿದೆ.
ಆದರೆ ಈಗ ಪೊಲೀಸರು ಅಲ್ಲು ಅರ್ಜುನ್ ಅವರನ್ನೇ ಹೊಣೆಯನ್ನಾಗಿಸಿದ್ದಾರೆ. ಅಲ್ಲು ಅರ್ಜುನ್, ಅವರ ಭದ್ರತಾ ಸಿಬ್ಬಂದಿ ಹಾಗೂ ಚಿತ್ರಮಂದಿರದ ಆಡಳಿತ ಮಂಡಳಿ ವಿರುದ್ಧ (ಬಿಎನ್‌ಎಸ್) ಸೆಕ್ಷನ್ 105 ಮತ್ತು 118 (1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಹೀಗಾಗಿಯೇ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರಮಂದಿರದಲ್ಲಿ ಕಾಲ್ತುಳಿತ ಪ್ರಕರಣಕ್ಕೂ ಅಲ್ಲು ಅರ್ಜುನ್‌ಗೂ ಯಾವುದೇ ಸಂಬಂಧವಿಲ್ಲ ಆದರೂ ಅವರನ್ನು ಬಂಧಿಸಿದ್ದು ಅಕ್ರಮ ಎಂದು ಕಿಡಿ ಕಾರುತ್ತಿದ್ದಾರೆ.
ಅಲ್ಲು ಅರ್ಜುನ್ ಯಾರನ್ನೂ ಚಿತ್ರಮಂದಿರಕ್ಕೆ ಬರುವಂತೆ ಆಹ್ವಾನ ನೀಡಿರಲಿಲ್ಲ, ಅಲ್ಲಿ ಚಿತ್ರವನ್ನು ನೋಡಲು ಎಲ್ಲರು ಸ್ವಇಚ್ಛೆಯಿಂದ ಹೋಗಿದ್ದರು, ಇನ್ನು ಚಿತ್ರಮಂದಿರಕ್ಕೆ ಸೆಲೆಬ್ರಿಟಿಗಳು ಬರುತ್ತಾರೆ ಎಂದರೆ ಅಲ್ಲಿ ಅಭಿಮಾನಿಗಳು ಸೇರುವುದು ಕೂಗುವುದು ಸಹಜ, ಪೊಲೀಸರು ಈ ತರಹದ ಸನ್ನಿವೇಶಗಳನ್ನು ನಿಭಾಯಿಸಬೇಕು ಅದನ್ನು ಮಾಡದೇ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದು ಸರಿ ಅಲ್ಲ ಎನ್ನುವ ಅಭಿಪ್ರಾಯವನ್ನು ಒಬ್ಬರು ವ್ಯಕ್ತಪಡಿಸಿದ್ದರೆ, ಇನ್ನು ಒಬ್ಬರು ಅಲ್ಲು ಅರ್ಜುನ್ ಮತ್ತು ಅಭಿಮಾನಿಯ ಸಾವಿಗೆ ಏನು ಸಂಬಂಧ ಎಂದಿದ್ದಾರೆ. ಮತ್ತೊಬ್ಬರು ಚಿತ್ರಮಂದಿರದ ಆವರಣದಲ್ಲಿ ಹುಚ್ಚಾಟದ ಪ್ರದರ್ಶನ ಮಾಡಿದವರನ್ನು ಮೊದಲು ಬಂಧಿಸಿ ಅದನ್ನು ಬಿಟ್ಟು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದು ಎಷ್ಟು ಸರಿ ಎನ್ನುತ್ತಿದ್ದಾರೆ. ಅಭಿಮಾನಿಗಳ ದಂಡು ಚಿತ್ರಮಂದಿರದ ಮುಂದೆ ಇರುತ್ತೆ ಎನ್ನುವುದು ಗೊತ್ತಿದ್ದರು ಕೂಡ ತಮ್ಮ ಪತ್ನಿ ಮತ್ತು ಮಕ್ಕಳ ಜೊತೆ ಚಿತ್ರಮಂದಿರಕ್ಕೆ ಬಂದ ಮೃತ ಮಹಿಳೆಯ ಪತಿಯ ತಪ್ಪು ಈ ಪ್ರಕರಣದಲ್ಲಿ ಇಲ್ವಾ ಎನ್ನುವ ಪ್ರಶ್ನೆಯನ್ನು ಕೂಡ ಅನೇಕರು ಮಾಡುತ್ತಿದ್ದಾರೆ.


Click it and Unblock the Notifications











