'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಚೆನ್ನಾಗಿಲ್ಲ ಎಂದವನಿಗೆ ಪವನ್ ಫ್ಯಾನ್ಸ್ ಗೂಸಾ- ವೀಡಿಯೋ
ಅಭಿಮಾನ ಯಾವತ್ತೂ ಎಲ್ಲೆ ಮೀರಬಾರದು. ಅತಿಯಾದ ಅಭಿಮಾನ ಅನರ್ಥಗಳಿಗೆ ಕಾರಣವಾಗಿಬಿಡುತ್ತದೆ. ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತಪಡಿಸುವುದು ಅವರವರ ವೈಯಕ್ತಿಕ. ಆದರೆ ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಿದವನಿಗೆ ಪವನ್ ಕಲ್ಯಾಣ್ ಅಭಿಮಾನಿಗಳು ಥಿಯೇಟರ್ ಮುಂದೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಈ ವಾರ ತೆರೆಗೆ ಬಂದಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನ ಸಿನಿಮಾ ಹೇಗಿದೆ ಎಂದು ಮಾಧ್ಯಮದವರು ಚಿತ್ರಮಂದಿರಗಳ ಮುಂದೆ ಪ್ರೇಕ್ಷಕರ ಅಭಿಪ್ರಾಯ ಕೇಳುತ್ತಾರೆ. ಪವನ್ ಕಲ್ಯಾಣ್ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳ ಮುಂದೆ ಜಮಾಯಿಸಿ ನೆಚ್ಚಿನ ನಟನ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಇದೇ ವೇಳೆ ಸಿನಿಮಾಗಳನ್ನು ರಿವ್ಯೂ ಮಾಡುವ ರಾಮಾಚಾರಿ ಅಲಿಯಾಸ್ ಮಲ್ಟಿಸ್ಟಾರ್ ಮನ್ಮಧರಾಜ ಎಂಬಾತನ ಮೇಲೆ ಹಲ್ಲೆ ಮಾಡಿದ್ದಾರೆ.

ಹರೀಶ್ ಶಂಕರ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಉಸ್ತಾದ್ ಭಗತ್ ಸಿಂಗ್' ಕೊಂಚ ತಡವಾಗಿ ಪ್ರೇಕ್ಷಕರ ಮುಂದೆ ಬಂದಿದೆ. ಶ್ರೀಲೀಲಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಹೊಸತನ ಇಲ್ಲದೇ ಹಳೇ ಸಿನಿಮಾಗಳನ್ನೇ ಈ ಸಿನಿಮಾ ನೆನಪಿಸುವಂತಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಸಿನಿಮಾ ಚೆನ್ನಾಗಿದೆ ಎಂದು ಮೆಚ್ಚಿಕೊಂಡಿದ್ದಾರೆ.
ಮಹೇಶ್ ಬಾಬು, ಚಿರಂಜೀವಿ ಸಿನಿಮಾ ಹಾಡುಗಳ ಬಗ್ಗೆ ಅವಮಾನಿಸುವಂತೆ ಡ್ಯಾನ್ಸ್ ಇದೆ.. ಸಿನಿಮಾ ಚೆನ್ನಾಗಿಲ್ಲ.. ಇಂತಹ ಸಿನಿಮಾಗಳನ್ನು ಮಾಡಿದ್ರೆ ಪವನ್ ಕಲ್ಯಾಣ್ ಆಂಧ್ರ ಸಿಎಂ ಆಗ್ತಾರೆ ಎಂದು ರಾಮಾಚಾರಿ ಮಾತನಾಡಿದ್ದಾನೆ. ಇದನ್ನು ಕೇಳುತ್ತಿದ್ದಂತೆ ಅಲ್ಲೇ ಇದ್ದ ಪವನ್ ಫ್ಯಾನ್ಸ್ ಗರಂ ಆಗಿದ್ದಾರೆ. ನಿನಗೆ ಏನು ಇಷ್ಟವಾಗಲಿಲ್ಲ? ಇನ್ನು ಏನ್ ಬೇಕು ನಿನಗೆ ಎಂದು ಆತನ ಮೇಲೆ ಹಲ್ಲೆ ಮಾಡಿದ್ದಾರೆ. "ನನಗೂ ಪವನ್ ಕಲ್ಯಾಣ್ ಅಂದ್ರೆ ಇಷ್ಟು.. ಅವರು ಸಿಎಂ ಆಗಬೇಕು.. ನಾನು ಸಿನಿಮಾ ಬಗ್ಗೆ ಮಾತನಾಡುತ್ತಿದ್ದಿನಿ.. ಅವರ ಬಗ್ಗೆ ಏನು ಮಾತನಾಡುತ್ತಿಲ್ಲ ಎಂದು ರಾಮಾಚಾರಿ ಪ್ರತಿಕ್ರಿಯಿಸಿರುವುದು ವೈರಲ್ ಆಗ್ತಿದೆ.
ಅಷ್ಟಕ್ಕೆ ಸುಮ್ಮನಾಗದೇ ಸಿನಿಮಾಗೂ ರಾಜಕೀಯಕ್ಕೂ ಏನ್ ಸಂಬಂಧ? ಸಿನಿಮಾ ಹಿಟ್ ಆದ್ರೆ ಮಾತ್ರ ಪವನ್ ಸಿಎಂ ಆಗ್ತಾರಾ? ಎಂದು ಅಭಿಮಾನಿಗಳು ರಾಮಾಚಾರಿ ಮೇಲೆ ಕೆಂಡಾಮಂಡಲವಾಗಿದ್ದಾರೆ. ಆತನನ್ನು ಗೇಟಿನಿಂದ ಹೊರಕ್ಕೆ ದಬ್ಬಿದ್ದಾರೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪವನ್ ಕಲ್ಯಾಣ್ ಬಗ್ಗೆ ರಾಮಾಚಾರಿ ಮಾತನಾಡಿದ್ದಾರೆ. ಮಿನಿಮಲ್ ಡಿಗ್ರಿ ಇದ್ರೆ ಮಾತ್ರ ಪವನ್ ಜೊತೆ ಸಿನಿಮಾ ಮಾಡಿ.. ಇಂತಹ ಸಿನಿಮಾ ಮಾಡಿದ್ರೆ, ಅವರ ರೇಂಜ್ ಕಮ್ಮಿ ಆಗುತ್ತದೆ ಎಂದಿರುವುದು ವೈರಲ್ ಆಗ್ತಿದೆ.
ಸೋಶಿಯಲ್ ಮೀಡಿಯಾ ಅಕೌಂಟ್ ವೀವ್ಸ್, ಲೈಕ್ಸ್‌ಗಾಗಿ ರಾಮಾಚಾರಿ ಹೀಗೆ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಬಗ್ಗೆ ರಾಮಾಚಾರಿ ಹೀಗೆ ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾನೆ ಎನ್ನುವುದು ಪವನ್ ಕಲ್ಯಾಣ್ ಅಭಿಮಾನಿಗಳ ಆರೋಪ.. ಸದ್ಯ ರಾಜಕೀಯರಂಗದಲ್ಲಿ ಪವರ್ ಸ್ಟಾರ್ ಬ್ಯುಸಿಯಾಗಿದ್ದಾರೆ. ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ 3 ವರ್ಷಗಳ ಹಿಂದೆ ಆರಂಭಿಸಿ ಅರ್ಧಕ್ಕೆ ನಿಲ್ಲಿಸಿದ್ದ ಸಿನಿಮಾಗಳನ್ನು ಒಂದೊಂದಾಗಿ ಬಿಡುಗಡೆ ಮಾಡಲಾಗ್ತಿದೆ.
ಕಳೆದ ವರ್ಷ ಹರಿಹರ 'ವೀರಮಲ್ಲು' ಹಾಗೂ 'OG' ಚಿತ್ರಗಳು ತೆರೆಗೆ ಬಂದಿದ್ದವು. ನಿರೀಕ್ಷೆ ಹೆಚ್ಚಾಗಿ ಎರಡೂ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. 'ಉಸ್ತಾದ್ ಭಗತ್ ಸಿಂಗ್' ಚಿತ್ರಕ್ಕೂ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಅಭಿಮಾನಿಗಳು ಮೆಚ್ಚಿಕೊಂಡರೂ ಸಾಮಾನ್ಯ ಪ್ರೇಕ್ಷಕರಿಗೆ ಇಷ್ಟವಾಗ್ತಿದೆ. ಮೊದಲ ದಿನ ಸಿನಿಮಾ 48 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಎಂದು ಅಂದಾಜಿಸಲಾಗ್ತಿದೆ.


Click it and Unblock the Notifications











