ಕಾಡುಬೆಟ್ಟು ಶಿವನ ಅವತಾರದಲ್ಲಿ ಜ್ಯೂ. ಎನ್‌ಟಿಆರ್; ಮ್ಯಾಟರ್ ಏನು?
ಒಂದಿಲ್ಲೊಂದು ಕಾರಣಕ್ಕೆ 'ಕಾಂತಾರ' ಸಿನಿಮಾ ಸದ್ದು ಮಾಡುತ್ತಲೇ ಇದೆ. ಇತ್ತೀಚೆಗೆ ಸಿನಿಮಾ ಪ್ರೀಕ್ವೆಲ್ ಓಟಿಟಿ ಪಾರ್ಟ್ನರ್ ಫಿಕ್ಸ್ ಆಗಿದ್ದಾರೆ. ಬರೋಬ್ಬರಿ 150 ಕೋಟಿ ರೂ. ಕೊಟ್ಟು ರೈಟ್ಸ್ ಕೊಂಡುಕೊಂಡಿದೆ ಪ್ರೈಂ ವಿಡಿಯೋ. ಮುಂದಿನ ತಿಂಗಳು 'ಕಾಂತಾರ'; ಚಾಪ್ಟರ್-1 ಸಿನಿಮಾ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ.
ಈಗಾಗಲೇ ರಿಷಬ್ ಶೆಟ್ಟಿ ಹುಟ್ಟೂರಿನಲ್ಲಿ ಚಿತ್ರಕ್ಕಾಗಿ ಹಳ್ಳಿಯ ಸೆಟ್ ನಿರ್ಮಾಣ ಮಾಡುವ ಕೆಲಸಗಳು ನಡೀತಿದೆ. ಆದಷ್ಟು ಬೇಗ ಚಿತ್ರೀಕರಣ ಶುರು ಎಂದು ಸ್ವತಃ ರಿಷಬ್ ಶೆಟ್ಟಿ ಹೇಳಿದ್ದಾರೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ 'ಕಾಂತಾರ' ಪ್ರೀಕ್ವೆಲ್ ಪ್ರೇಕ್ಷಕರ ಮುಂದೆ ಬರ್ತಿದೆ. ಆಲಿಯಾ ಭಟ್, ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಹಾಗೂ ಸಪ್ತಮಿ ಗೌಡ ಈ ನಾಲ್ವರಲ್ಲಿ ಒಬ್ಬರು ನಾಯಕಿಯಾಗಿ ಆಯ್ಕೆ ಆಗುವ ಸಾಧ್ಯತೆಯಿದೆ.

'ಕಾಂತಾರ'; ಚಾಪ್ಟರ್-1 ಚಿತ್ರದಲ್ಲಿ ರುಕ್ಮಿಣಿ ವಸಂತ್ ನಟಿಸೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ರಿಷಬ್ ಬಿಟ್ಟರೆ ಇನ್ನುಳಿದ ಪಾತ್ರವರ್ಗದ ಆಯ್ಕೆ ನಡೆಯಬೇಕಿದೆ. ಇದೆಲ್ಲದರ ನಡುವೆ ಚಿತ್ರದಲ್ಲಿ ತೆಲುಗು ನಟ ಜ್ಯೂ. ಎನ್‌ಟಿಆರ್ ನಟಿಸುತ್ತಾರೆ ಎನ್ನುವ ಊಹಾಪೋಹ ಕೂಡ ಇದೆ. ಇತ್ತೀಚೆಗೆ ಪ್ರಶಾಂತ್ ನೀಲ್ ಮನೆಯಲ್ಲಿ ಇಬ್ಬರು ಭೇಟಿಯಾಗಿದ್ದು ಇಂತಾದೊಂದು ವದಂತಿ ಹರಡಲು ಕಾರಣವಾಗಿದೆ.
ಅಂದಹಾಗೆ ಜ್ಯೂ. ಎನ್‌ಟಿಆರ್ ಇದೀಗ ಕಾಡುಬೆಟ್ಟು ಶಿವನ ರೀತಿ ಕಾಣಿಸಿಕೊಂಡಿರುವ ಫೋಟೊ ವೈರಲ್ ಆಗುತ್ತಿದೆ. ಸದ್ಯ ತಾರಕ್ 'ದೇವರ' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಹಾಡಿನ ಚಿತ್ರೀಕರಣ ಸದ್ಯ ಗೋವಾದಲ್ಲಿ ನಡೆಯುತ್ತಿದೆ. ಚೆಕ್ಸ್ ಶರ್ಟ್, ಎಡ ಭುಜದ ಮೇಲೆ ಟವೆಲ್, ಕೊರಳಲ್ಲಿ ರುದ್ರಾಕ್ಷಿ, ಕಿವಿಯಲ್ಲಿ ಓಲೆ ಧರಿಸಿ ಲುಂಗಿ ಉಟ್ಟು ತಾರಕ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಿರ್ದೇಶಕ ಕೊರಟಾಲ ಶಿವ ಹಾಗೂ ಕೊರಿಯೋಗ್ರಫರ್ ರಾಜು ಸುಂದರಂ ಕೂಡ ಇದ್ದಾರೆ.

'ದೇವರ' ಸಿನಿಮಾ ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರಲಿದೆ. ಈಗಾಗಲೇ ತಾರಕ್ ಭಿನ್ನ ವಿಭಿನ್ನ ಅವತಾರಗಳಲ್ಲಿ ಚಿತ್ರದ ಪೋಸ್ಟರ್ಸ್, ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಸದ್ಯ ರಿವೀಲ್ ಆಗಿರುವ ಫೋಟೊ ಅಭಿಮಾನಿಗಳ ಮನಗೆದ್ದಿದೆ. ಕೆಲವರು ಈ ಫೋಟೊದಲ್ಲಿ ಜ್ಯೂ. ಎನ್‌ಟಿಆರ್ ನೋಡಿ 'ಕಾಂತಾರ' ಚಿತ್ರದ ರಿಷಬ್ ಶೆಟ್ಟಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಸೂಪರ್ ಹಿಟ್ 'ಕಾಂತಾರ' ಚಿತ್ರದಲ್ಲಿ ಕಾಡುಬೆಟ್ಟು ಶಿವನಾಗಿ ರಿಷಬ್ ಲುಕ್ ಹೆಚ್ಚು ಕಮ್ಮಿ ಇದೇ ರೀತಿ ಇತ್ತು. ಒಂದ್ಕಡೆ ತಾರಕ್ ಕೂಡ 'ಕಾಂತಾರ' ಪ್ರೀಕ್ವೆಲ್‌ನಲ್ಲಿ ನಟಿಸುತ್ತಾರೆ ಎನ್ನುವ ವದಂತಿ ಹರದಾಡುತ್ತಿದೆ. ಸದ್ಯ 'ದೇವರ' ಚಿತ್ರದ ಫೋಟೊ ನೋಡಿದ ಕೆಲವರು 'ಕಾಂತಾರ' ಪ್ರೀಕ್ವೆಲ್‌ನಲ್ಲಿ ತಾರಕ್ ನಟಿಸೋಕೆ ಬಂದ್ರಾ? ಎಂದು ಹುಬ್ಬೇರಿಸುತ್ತಿದ್ದಾರೆ. ಸದ್ಯ ಎರಡು ಫೋಟೊಗಳನ್ನು ಕೊಲಾಜ್ ಮಾಡಿ ವೈರಲ್ ಮಾಡುತ್ತಿದ್ದಾರೆ.
ಜ್ಯೂ. ಎನ್‌ಟಿಆರ್ 'ಕಾಂತಾರ' ಸಿನಿಮಾ ಬಿಡುಗಡೆ ಆಗಿದ್ದಾಗಿ ನೋಡಿ ಮೆಚ್ಚಿಕೊಂಡಿದ್ದರು. ರಿಷಬ್ ಶೆಟ್ಟಿಗೆ ಫೋನ್ ಮಾಡಿ ಅಭಿನಂದಿಸಿದ್ದರು. ಈ ವಿಚಾರವನ್ನು ರಿಷಬ್ ಹಂಚಿಕೊಂಡಿದ್ದರು. ಇನ್ನು ತಾರಕ್ ತಾಯಿ ಕೂಡ ಕುಂದಾಪುರ ಮೂಲದವರು. ಇದನ್ನು ಆಗಿಂದಾಗ್ಗೆ ತೆಲುಗು ನಟ ಹೇಳಿಕೊಂಡಿದ್ದಾರೆ. ಕನ್ನಡ ಸಿನಿಮಾದಲ್ಲಿ ನಟಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ರಿಷಬ್ 'ಕಾಂತಾರ' ಪ್ರೀಕ್ವೆಲ್‌ನಲ್ಲಿ ಒಂದೊಳ್ಳೆ ಪಾತ್ರ ಬರೆದು ಅಪ್ರೋಚ್ ಮಾಡಿದರೆ ತಾರಕ್ ನಟಿಸೋಕೆ ಒಪ್ಪುವ ಸಾಧ್ಯತೆ ದಟ್ಟವಾಗಿದೆ.


Click it and Unblock the Notifications











