ಸ್ಟಾರ್ ಆದರೆ ಬೆಲೆ ತೆರಬೇಕು ; ರಾಮ್ ಚರಣ್ ತೇಜಾ ಶರ್ಟ್ ಹರಿದ ಅಭಿಮಾನಿಗಳು..!
ಸೆಲೆಬ್ರಿಟಿಗಳಿಗೆ ಖಾಸಗಿ ಬದುಕು ಅನ್ನುವುದು ಇರಲ್ಲ. ಮೂರೊತ್ತು ಇವರ ಮೇಲೆ ಕ್ಯಾಮರಾ ಕಣ್ಗಾವಲಿರುತ್ತೆ. ಇನ್ನೂ ಮನೆಯಾಚೆ ಬಂದರೆ ಸಾಕು ಹಿಂಬಾಲಿಸಲು ಎಂದೆ ಒಂದು ವರ್ಗ ಕಾದು ಕುಳಿತುಕೊಂಡಿರುತ್ತೆ. ಸೆಲ್ಫಿ ಕೇಳೋದು.. ಮಾತನಾಡಲು ಹವಣಿಸೋದು.. ಕೂಡ ಕಂಡು ಬರುತ್ತೆ.ಆದರೆ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದ ರಾಮ್ ಚರಣ್ ತೇಜಾ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅತೀ ಇಷ್ಟದ ಶರ್ಟ್‌ನ್ನೇ ಹರಿದು ಹಾಕಿದ್ದಾರೆ.
ಹೌದು. ತಮ್ಮ ಚಿಕ್ಕಪ್ಪ ಮತ್ತು ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಅವರ ಪರ ಪ್ರಚಾರ ಮಾಡಲು ರಾಮ್ ಚರಣ್ ತೇಜಾ ಪೀಠಾಪುರಂಗೆ ತೆರಳಿದ್ದರು. ಪವನ್ ಕಲ್ಯಾಣ್ ಪರವಾಗಿ ರೋಡ್ ಶೋಗಳಲ್ಲಿ ಭಾಗಿಯಾದರು. ಇನ್ನೂ.. ಪವನ್ ಕಲ್ಯಾಣ್ ಆಂಧ್ರದ ಬಹುದೊಡ್ಡ ಹೆಸರು. ಹಾದಿ-ಬೀದಿಯಲ್ಲಿ ಇವರನ್ನ ನೋಡಲು ಅಸಂಖ್ಯಾತ ಅಭಿಮಾನಿಗಳು ಮೊದಲಿಂದ ಸೇರುತ್ತಾರೆ. ಹೀಗೆ ಸೇರುವ ಜನ ಇವರ ಜನ ಸೇನಾ ಪಕ್ಷವನ್ನ ಬೆಂಬಲಿಸಿದ್ದರೆ ಪವನ್ ಕಲ್ಯಾಣ್ ರಾಜಕೀಯದ ಬದುಕು ಬೇರೆ ಇರುತ್ತಿತ್ತು ಅನ್ನುವುದು ಬೇರೆ ವಿಚಾರ.

ಸಂದರ್ಭ ಮತ್ತು ಸನ್ನಿವೇಶ ಹೀಗಿರುವಾಗ ಪವನ್ ಕಲ್ಯಾಣ್ ಪರ ಪ್ರಚಾರ ಮಾಡಲು ರಾಮ್ ಚರಣ್ ತೇಜಾ ಬೇರೆ ಬಂದಿದ್ದಾರೆ ಅನ್ನುವ ಸುದ್ದಿ ಕೇಳಿದ್ದ ಜನ ಪೀಠಾಪುರಂಕ್ಕೆ ನುಗ್ಗಿದ್ದರು. ಕಣ್ಣಾಯಿಸಿದ ಕಡೆಯೆಲ್ಲ ಕಂಡು ಬಂದರು. ಜೈಕಾರ ಮೊಳಗಿಸಿದರು. ಅಭಿಮಾನದ ಈ ಜಾತ್ರೆಯಲ್ಲಿಯೇ ಮಿಂದೆದ್ದ ರಾಮ್ ಚರಣ್ ತೇಜಾ ಅಷ್ಟೇ ಉತ್ಸಾಹದಲ್ಲಿ ರೋಡ್ ಶೋ ಮಾಡಿದರು. ಸುಡು ಬಿಸಿಲಿನಲ್ಲಿ ಬೆವರು ಕಿತ್ತು ಬರುತ್ತಿದ್ದರೂ ಆಯಾಸಗೊಳ್ಳದೆ ಪ್ರಚಾರವನ್ನೂ ಮಾಡಿದರು.
ಆದರೆ, ಇದನ್ನು ಅತಿಯಾದ ಅಭಿಮಾನ ಎನ್ನಬೇಕೋ? ಅಥವಾ ಹುಚ್ಚಾಟ ಎನ್ನಬೇಕೋ ಗೊತ್ತಿಲ್ಲ. ರಾಮ್ ಚರಣ್ ತೇಜಾ ಅವರನ್ನ ದೂರದಿಂದ ನೋಡಿ ಖುಷಿ ಪಡ್ತಿದ್ದವರೆಲ್ಲ ತಮ್ಮ ನೆಚ್ಚಿನ ನಾಯಕನನ್ನ ಹತ್ತಿರದಿಂದ ನೋಡಲು ಮುಗಿ ಬಿದ್ದರು. ರಾಮ್ ಚರಣ್ ತೇಜಾ ಅವರನ್ನ ಸುತ್ತುವರೆದರು. ಕೆಲವರು ಕೈ ಹಿಡಿದೆಳೆದರು. ಕೆಲವರು ಕೆನ್ನೆ ಸವರುವ ಪ್ರಯತ್ನ ಮಾಡಿದರು. ರಾಮ್ ಚರಣ್ ತೇಜಾ ಅವರನ್ನ ತಳ್ಳಿದರು. ನೂಕಿದರು.
ಪೀಠಾಪುರಂದ ಈ ಚಕ್ರವ್ಯೂಹದಿಂದ ತಪ್ಪಿಸಿಕೊಳ್ಳಲು ರಾಮ್ ಚರಣ್ ತೇಜಾ ಹರಸಾಹಸವನ್ನೇ ಮಾಡಿದರು. ರಾಮ್ ಚರಣ್ ತೇಜಾ ಬದಲು ಬೇರೆ ಯಾರೇ ಅಲ್ಲಿದ್ದರು ತಾಳ್ಮೆಯನ್ನ ಕಳೆದುಕೊಳ್ಳುತ್ತಿದ್ದರಾ ಗೊತ್ತಿಲ್ಲ. ಆದರೆ ಇಷ್ಟೆಲ್ಲ ಆದರೂ ಕೂಡ ರಾಮ್ ಚರಣ್ ತೇಜಾ ಸಿಟ್ಟಾಗಲಿಲ್ಲ. ಕೂಗಾಡಲಿಲ್ಲ. ಬದಲಿಗೆ ಎಲ್ಲವನ್ನೂ ಸಹಿಸಿಕೊಂಡು ತಮ್ಮ ಕಾರಿನತ್ತ ಹೆಜ್ಜೆ ಹಾಕಿದರು ರಾಮ್ ಚರಣ್ ತೇಜಾ
ಸದ್ಯಕ್ಕೆ ರಾಮ್ ಚರಣ್ ಅವರನ್ನ ಅಭಿಮಾನಿಗಳು ಸುತ್ತುವರೆದುಕೊಂಡ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ. ಅಭಿಮಾನಿಗಳ ಈ ವರ್ತನೆಗೆ ಆಕ್ರೋಶವೂ ವ್ಯಕ್ತವಾಗುತ್ತಿದೆ. ರಾಮ್ ಚರಣ್ ಅಂಥಹಾ ದೊಡ್ಡ ಸ್ಟಾರ್ಗೆ ಭದ್ರತೆ ಕೊಡದೇ ಇರುವ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.


Click it and Unblock the Notifications










