ಮಳೆಯಲ್ಲಿ ತೊಯ್ದು ತೊಪ್ಪೆಯಾದ ಫ್ಯಾನ್ಸ್; 'OG' ಟ್ರೈಲರ್ ಬರದ್ದಕ್ಕೆ ವೇದಿಕೆಯಲ್ಲೇ ಪವನ್ ಗರಂ
ಪವನ್ ಕಲ್ಯಾಣ್ ನಟನೆಯ 'OG' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಸುಜಿತ್ ನಿರ್ದೇಶನದ ಗ್ಯಾಂಗ್‌ಸ್ಟರ್ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಹೈದರಾಬಾದ್ LB ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಈವೆಂಟ್ ನಡೀತು. ವೇದಿಕೆಯಲ್ಲೇ ಟ್ರೈಲರ್ ಲಾಂಚ್ ಮಾಡಲು ಬಯಸಿದ್ದರು. ಆದರೆ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಟ್ರೈಲರ್ ಸಿದ್ಧಪಡಿಸುವ ಕೆಲಸಗಳು ಸರಿಯಾಗಿ ಆಗದೇ ಬಿಡುಗಡೆ ಮುಂದೂಡಲಾಗಿದೆ. ಇದು ಸಹಜವಾಗಿಯೇ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಪ್ರೀ ರಿಲೀಸ್ ಈವೆಂಟ್ ವೇದಿಕೆಯಲ್ಲಿ ಟ್ರೈಲರ್ ರೆಡಿನಾ? ಪ್ಲೇ ಮಾಡೋಣ್ವಾ? ಎಂದು ಪವನ್ ಕಲ್ಯಾಣ್ ಕೇಳಿದಾಗ ಚಿತ್ರತಂಡ ಶಾಕ್ ಆಗಿತ್ತು. ಇಲ್ಲ ಸರ್. ಇನ್ನು ಡಿಐ ಕೆಲಸ ಆಗಿಲ್ಲ ಎಂದು ನಿರ್ದೇಶಕರು ಉತ್ತರಿಸಿದ್ದರು. ಪವನ್ ಅಸಮಾಧಾನದಿಂದಲೇ ಈಗಲೇ ಟ್ರೈಲರ್ ಪ್ಲೇ ಮಾಡಿ, ಡಿಐ ಇಲ್ಲದೇ ಇದ್ರು ಪರವಾಗಿಲ್ಲ ಅಂದ್ರು. ವೇದಿಕೆ ಮೇಲೆ ಪ್ರದರ್ಶನ ಮಾಡಿದ್ರು, ಯಾರೂ ವೀಕ್ಷಿಸಲು ಸಾಧ್ಯವಾಗಲಿಲ್ಲ.

ಚಿತ್ರತಂಡದ ಬೇಜವಾಬ್ದಾರಿತನಕ್ಕೆ ಅಭಿಮಾನಿಗಳು ಹಿಡಿ ಶಾಪ ಹಾಕಿದ್ದಾರೆ. ಇಂದು(ಸೆಪ್ಟೆಂಬರ್ 21) ಬೆಳಗ್ಗೆ ಟ್ರೈಲರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಕೊನೆಗೆ ಕಾರಣಾಂತರಗಳಿಂದ ತಡವಾಗುತ್ತಿದೆ. ಸಂಜೆ ಈವೆಂಟ್‌ನಲ್ಲಿ ವೇಳೆಗೆ ಸಿದ್ಧವಾಗುತ್ತದೆ. ರಿಲೀಸ್ ಮಾಡುತ್ತೇವೆ ಎಂದಿದ್ದರು. ಆದರೆ ಈವೆಂಟ್ ಮುಗಿದು ಪವನ್ ಕಲ್ಯಾಣ್ ಬಂದು ಹೋದರೂ 'OG' ಟ್ರೈಲರ್ ಮಾತ್ರ ಬರಲೇ ಇಲ್ಲ.
ಇನ್ನು 'OG' ಪ್ರೀ ರಿಲೀಸ್ ಈವೆಂಟ್‌ಗೆ ಮಳೆ ಅಡ್ಡಿ ಪಡಿಸಿತು. ಪವನ್ ಕಲ್ಯಾಣ್ ವೇದಿಕೆಗೆ ಬರುವ ವೇಳೆಗೆ ಭಾರೀ ಮಳೆ ಶುರುವಾಯಿತು. ಆದರೂ ಅಭಿಮಾನಿಗಳು ಮಳೆಯಲ್ಲಿ ನೆನೆಯುತ್ತಲೇ ಕಾರ್ಯಕ್ರಮ ವೀಕ್ಷಿಸಲು ಮುಂದಾದರು. ಅಭಿಮಾನಿಗಳ ಉತ್ಸಾಹ ಕಂಡು ಪವನ್ ಕಲ್ಯಾಣ್ ಥೇಟ್ ಸಿನಿಮಾ ಶೈಲಿಯಲ್ಲೇ ವೇದಿಕೆ ಏರಿದರು. ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಕಾಸ್ಟ್ಯೂಮ್‌ನಲ್ಲಿ ಕತ್ತಿ ಹಿಡಿದು ಚಿತ್ರದ ನಾಯಕನಂತೆ ಗಮನ ಸೆಳೆದರು.
ಚಿತ್ರದ ಸಣ್ಣ ಹಾಡಿನ ಝಲಕ್ ಅನ್ನು ಹಾಡಿ ಕೇಳಿಸಿದರು. ಜಪಾನ್ ಭಾಷೆಯ ಡೈಲಾಗ್ ಝಲಕ್ ಅದು. ಇತ್ತೀಚೆಗೆ ಸ್ವತಃ ಪವನ್ ಕಲ್ಯಾಣ್ ಅದನ್ನು ಹೇಳಿ ರೆಕಾರ್ಡ್ ಮಾಡಿದ್ದರು. ಅದನ್ನು ವೇದಿಕೆ ಮೇಲೆ ರಿಪೀಟ್ ಮಾಡಿದರು. ಆದರೂ ಟ್ರೈಲರ್ ಮಾತ್ರ ಬರಲೇ ಇಲ್ಲ. 'OG' ಝಲಕ್ ನೋಡಲು ಕಾದು ಕಾದು ಅಭಿಮಾನಿಗಳು ಸುಸ್ತಾದರು.
ನಟ ಪವನ್ ಕಲ್ಯಾಣ್ ಆಂಧ್ರ ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಸಿನಿಮಾಗಳಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ. ಈ ಹಿಂದೆ ಒಪ್ಪಿಕೊಂಡಿದ್ದ 3 ಸಿನಿಮಾಗಳನ್ನು ಮಾತ್ರ ಮುಗಿಸಲು ಮುಂದಾಗಿದ್ದಾರೆ. ಎರಡು ತಿಂಗಳ ಹಿಂದೆ ಬಂದಿದ್ದ 'ಹರಿಹರ ವೀರಮಲ್ಲು' ಸಿನಿಮಾ ಸೋತಿತ್ತು. ಈ ಹಿಂದೆ 'ಸಾಹೋ' ಸಿನಿಮಾ ಕಟ್ಟಿಕೊಟ್ಟಿದ್ದ ಸುಜಿತ್ ನಿರ್ದೇಶನದ ಸಿನಿಮಾ 'OG'. ಹಾಗಾಗಿ ನಿರೀಕ್ಷೆ ಹೆಚ್ಚಿದೆ. ಆದರೆ ಚಿತ್ರತಂಡ ಸರಿಯಾಗಿ ಪ್ರಮೋಷನ್ ಮಾಡ್ತಿಲ್ಲ, ಸರಿಯಾದ ಸಮಯಕ್ಕೆ ಟ್ರೈಲರ್ ಕೂಡ ಬಿಡುಗಡೆ ಮಾಡಲಿಲ್ಲ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪವನ್ ಕಲ್ಯಾಣ್ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಪವರ್ ಸ್ಟಾರ್ ವೇದಿಕೆ ಏರಿದಾಗ ಯೂಟ್ಯೂಬ್‌ನಲ್ಲಿ ಲೈವ್ ಕಾರ್ಯಕ್ರಮವನ್ನು 2.45 ಲಕ್ಷ ಜನ ವೀಕ್ಷಿಸಿದ್ದರು. ಮಳೆಯನ್ನು ಲೆಕ್ಕಿಸದೇ ವೇದಿಕೆ ಮುಂದೆ ಅಭಿಮಾನಿಗಳು ಅಭಿಮಾನ ಮೆರೆದಿದ್ದರು. ಇದೇ ಗುರುವಾರ ಸಿನಿಮಾ ಬಿಡುಗಡೆ ಆಗುತ್ತಿದೆ. ಮುಂದಿನ ವಾರ ಕನ್ನಡದ 'ಕಾಂತಾರ'-1 ಹಾಗೂ ತಮಿಳಿನ 'ಇಡ್ಲಿ ಕಡೇ' ಚಿತ್ರಗಳು ತೆರೆಗೆ ಬರ್ತಿವೆ. ದಸರಾ ರಜೆಯಲ್ಲಿ 3 ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕದನ ಏರ್ಪಡಲಿದೆ.


Click it and Unblock the Notifications











