ಅಮೆರಿಕದಲ್ಲಿ ಪವನ್-ಬಾಲಕೃಷ್ಣ ಅಭಿಮಾನಿಗಳ ನಡುವೆ ಗಲಾಟೆ, ಓರ್ವ ಬಂಧನ
ತೆಲುಗು ಚಿತ್ರರಂಗದಲ್ಲಿ ಮೆಗಾ ಫ್ಯಾಮಿಲಿ ಹಾಗೂ ಎನ್‌ಟಿಆರ್ ಫ್ಯಾಮಿಲಿ ಅಭಿಮಾನಿಗಳ ನಡುವಿನ ಕಿತ್ತಾಟ ಇಂದು ನಿನ್ನೆಯದಲ್ಲ. ಆದರೆ ಈಗದು ಮೇರೆ ಮೀರಿದೆ.
ನಟರುಗಳೇನೋ ಪರಸ್ಪರ ಆತ್ಮೀಯರಾಗಿಯೇ ಇದ್ದಾರೆ, ನಂದಮೂರಿ ಹಾಗೂ ಮೆಗಾ ಫ್ಯಾಮಿಲಿ ನಡುವಿನ ಬಾಂಧವ್ಯ ಮೊದಲಿಗಿಂತಲೂ ಈಗ ಹೆಚ್ಚಾಗಿದೆ. ಆದರೆ ಅಭಿಮಾನಿಗಳ ನಡುವಿವ ವೈಷಮ್ಯ ಮಾತ್ರ ಹಾಗೆಯೇ ಇದೆ.
ಮೆಗಾ ಫ್ಯಾಮಿಲಿಯ ಪವನ್ ಕಲ್ಯಾಣ್ ಹಾಗೂ ನಂದಮೂರಿ ಬಾಲಕೃಷ್ಣ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದು ಎರಡೂ ಕುಟುಂಬಗಳ ನಡುವಿನ ವೈಷಮ್ಯಕ್ಕೆ ಬಹಿರಂಗ ಅಂತ್ಯ ಹಾಡಿದ್ದಾರೆ. ಆದರೆ ಇದನ್ನೇ ವಿಷಯವನ್ನಾಗಿಸಿಕೊಂಡು ಎರಡೂ ಕುಟುಂಬದ ಅಭಿಮಾನಿಗಳು ಅಲ್ಲಲ್ಲಿ ಕಿತ್ತಾಟ ಆರಂಭಿಸಿದ್ದಾರೆ.

ಆಂಧ್ರ-ತೆಲಂಗಾಣ ರಾಜ್ಯಗಳಲ್ಲಿ ಆಗಾಗ್ಗೆ ಮೆಗಾ ಫ್ಯಾಮಿಲಿ ಅಭಿಮಾನಿಗಳು ಹಾಗೂ ನಂದಮೂರಿ ಅಭಿಮಾನಿಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತು. ಈಗದು ಅಮೆರಿಕಕ್ಕೂ ತಲುಪಿ ಬಿಟ್ಟಿದೆ.
ಅಮೆರಿಕದಲ್ಲಿ ನಂದಮೂರಿ ಬಾಲಕೃಷ್ಣ ಹಾಗೂ ಪವನ್ ಕಲ್ಯಾಣ್ ಅಭಿಮಾನಿಗಳ ನಡುವೆ ಜಗಳವಾಗಿದೆ. ಅಮೆರಿಕದ ಡಲ್ಲಾಸ್‌ನಲ್ಲಿ ಹೊಸ ವರ್ಷದ ಸಂಭ್ರಮದ ವೇಳೆ ಬಾಲಕೃಷ್ಣ ಅಭಿಮಾನಿಗಳು ಪವನ್ ಕಲ್ಯಾಣ್ ಅಭಿಮಾನಿಗಳ ಮೇಲೆ ದಾಳಿ ಮಾಡಿದ್ದಾರೆ. ಡಲ್ಲಾಸ್‌ನ ಬೀದಿಯಲ್ಲಿ ಎರಡೂ ಸ್ಟಾರ್ ನಟರ ಅಭಿಮಾನಿಗಳು ಜಗಳವಾಡಿದ್ದಾರೆ. ಗಲಾಟೆ ಸಂಬಂಧ ಒಬ್ಬ ಬಾಲಕೃಷ್ಣ ಅಭಿಮಾನಿಯನ್ನು ಬಂಧಿಸಲಾಗಿದೆ.
ಅನ್‌ಸ್ಟಾಪೆಬಲ್ ಶೋನಲ್ಲಿ ಪವನ್ ಕಲ್ಯಾಣ್ ಹಾಗೂ ಬಾಲಕೃಷ್ಣ ಒಟ್ಟಾಗಿ ಕಾಣಿಸಿಕೊಂಡಿರುವ ಬಗ್ಗೆಯೇ ಈ ಜಗಳ ಆರಂಭವಾಗಿದೆ. ಶೋನಲ್ಲಿ ಪವನ್ ಕಲ್ಯಾಣ್ ನಾಚಿಕೆಯಿಲ್ಲದೆ ಬಾಲಕೃಷ್ಣ ಕಾಲಿಗೆ ಬಿದ್ದಿದ್ದಾನೆ ಎಂದು ಬಾಲಕೃಷ್ಣ ಅಭಿಮಾನಿಗಳು ವ್ಯಂಗ್ಯ ಮಾಡಿದ್ದಾರೆ. ಇದೇ ಕಾರಣಕ್ಕೆ ಜಗಳ ಆರಂಭವಾಗಿದೆ.
ಇದೇ ಸಂದರ್ಭದಲ್ಲಿ ಚಿರಂಜೀವಿಯ ಚಿತ್ರಗಳನ್ನು ಸಹ ಬಾಲಯ್ಯ ಅಭಿಮಾನಿಗಳು ಹರಿದು ಹಾಕಿದ್ದಾರೆ. ಇದರಿಂದ ಸಿಟ್ಟುಕೊಂಡು ಪವನ್ ಅಭಿಮಾನಿಗಳು ಬಾಲಯ್ಯ ಅಭಿಮಾನಿಗಳ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ ಆದರೆ ಇವೆಂಟ್ ಆಯೋಜಿಸಿದ್ದವರ ಮಧ್ಯಪ್ರವೇಶದಿಂದ ಜಗಳ ಆರಂಭವಾಗಿಲ್ಲ.
ಇವೆಂಟ್ ಆಯೋಜಿಸಿದ್ದವರು ಇಬ್ಬರೂ ಅಭಿಮಾನಿಗಳ ಮಧ್ಯೆ ಸಂಧಾನ ಮಾಡಲು ಯತ್ನಿಸಿದ್ದಾರಾದರೂ ಕೊನೆಗೆ ಬಾಲಯ್ಯ ಅಭಿಮಾನಿ ಬಳಗದ ಮುಖಂಡ ಕೆಸಿ ಚೇಕುರಿ ಆಯೋಜಕರ ಮೇಲೆಯೇ ಹಲ್ಲೆ ಮಾಡಿದ್ದರಿಂದ ಗಲಾಟೆ ಜೊರಾಯಿತು. ಕೊನೆಗೆ ಆಯೋಜಕರು ಪೊಲೀಸರ ನೆರವಿನಿಂದ ಎರಡೂ ಗುಂಪುಗಳನ್ನು ತಹಬದಿಗೆ ತಂದಿದ್ದಾರೆ. ಕೆಸಿ ಚೇಕುರಿಯನ್ನು ಡಲ್ಲಾಸ್ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.


Click it and Unblock the Notifications











