ನನ್ನ ಯಾಕೆ ಕ್ರಿಮಿನಲ್ ತರ ನೋಡ್ತೀರಾ?; 4 ವರ್ಷಗಳ ಬಳಿಕ ಡಿವೋರ್ಸ್ ಬಗ್ಗೆ ಚೈತು ಮಾತು
ಪ್ರೀತಿಸಿ ಮದುವೆ ಆಗಿದ್ದ ತೆಲುಗು ನಟ ನಾಗಚೈತನ್ಯಾ ಹಾಗೂ ಸಮಂತಾ ಬಳಿಕ ಡಿವೋರ್ಸ್ ಪಡೆದಿದ್ದರು. ನಾಗಚೈತನ್ಯಾ ಇತ್ತೀಚೆಗೆ ನಟಿ ಶೋಭಿತಾ ದುಲಿಪಾಲ ಜೊತೆ ಎರಡನೇ ಮದುವೆ ಕೂಡ ಆಗಿದ್ದಾರೆ. ಪರಸ್ಪರ ಒಪ್ಪಿ ದೂರಾಗಿದ್ದ ಚೈಸ್ಯಾಮ್ ಬಳಿಕ ಈ ಬಗ್ಗೆ ಮಾತನಾಡಿರಲಿಲ್ಲ. ಸಮಂತಾ ಆಗೊಮ್ಮೆ ಈಗೊಮ್ಮೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದರು.
ಇದೇ ಮೊದಲ ಬಾರಿಗೆ ನಾಗಚೈತನ್ಯಾ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಮುಗಿದು ಹೋಗಿದೆ. ನಾವು ಬಹಳ ಯೋಚಿಸಿಯೇ ಡಿವೋರ್ಸ್ ನಿರ್ಧಾರ ತೆಗೆದುಕೊಂಡಿದ್ದೇವೆ. ಪದೇ ಪದೆ ಅದೇ ವಿಚಾರದ ಬಗ್ಗೆ ಚರ್ಚೆ ಯಾಕೆ? ನನ್ನ ದಾರಿ ನನಗೆ ಸಮಂತಾ ದಾರಿ ಆಕೆಯದ್ದು. ಸೋಶಿಯಲ್ ಮೀಡಿಯಾದಲ್ಲಿ ಸುಖಾಸುಮ್ಮನೆ ನೆಗೆಟಿವ್ ಕಾಮೆಂಟ್ ಮಾಡುವುದು ಯಾಕೆ? ನಿಮ್ಮ ಕೆಲಸ ನೋಡಿಕೊಳ್ಳಿ ಎಂದು ನಾಗಚೈತನ್ಯಾ ಖಾರವಾಗಿಯೇ ಮಾತನಾಡಿದ್ದಾರೆ. ಯೂಟ್ಯೂಬ್ ಸಂದರ್ಶನವೊಂದರಲ್ಲಿ ನಾಗ್ ಪುತ್ರ ಪ್ರತಿಕ್ರಿಯಿಸಿದ್ದಾರೆ.

"ಡಿವೋರ್ಸ್ ಬಳಿಕ ನಾನು ಸೋಶಿಯಲ್ ಮೀಡಿಯಾದಲ್ಲಿ ಏನೇ ಪೋಸ್ಟ್ ಮಾಡಿದರೂ ನೆಗೆಟಿವ್ ಕಾಮೆಂಟ್ ಬರುತ್ತದೆ. ಅದನ್ನು ನಾನು ಕೂಡ ಓದುತ್ತೇನೆ. ನಾವಿಬ್ಬರು ಪರಸ್ಪರ ಒಪ್ಪಿ ಡಿವೋರ್ಸ್ ನಿರ್ಧಾರ ತೆಗೆದುಕೊಂಡೆವು. ಅದನ್ನು ಒಟ್ಟಿಗೆ ಪೋಸ್ಟ್ ಮಾಡಿ ಹಂಚಿಕೊಂಡಿದ್ದೆವು. ವೈಯಕ್ತಿಕ ಕಾರಣಕ್ಕೆ ಆ ನಿರ್ಣಯ ಕೈಗೊಂಡೆವು. ಈಗ ನಮ್ಮ ದಾರಿಯಲ್ಲಿ ನಾವು ಮುಂದುವರೆಯುತ್ತಿದ್ದೇವೆ. ನಮ್ಮ ಬದುಕಿನಲ್ಲಿ ಕೊಂಡ ಪ್ರೈವೆಸಿ ಬೇಕು ಎಂದು ಕೂಡ ಮನವಿ ಮಾಡಿದ್ದೆವು. ಆದರೆ ನಮ್ಮ ಡಿವೋರ್ಸ್ ವಿಚಾರ ಕೆಲವರಿಗೆ ತಮಾಷೆ ಆಗಿಬಿಟ್ಟಿದೆ" ಎಂದು ನಾಗಚೈತನ್ಯ ಬೇಸರ ಹೊರಹಾಕಿದ್ದಾರೆ.
ಮಾತು ಮುಂದುವರೆಸಿದ ಚೈತು "ನಾವಿಬ್ಬರು ದೂರಾದ ಬಳಿಕ ಸಾಕಷ್ಟು ವದಂತಿ ಹರಿದಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ. ಕಾರಣ ಏನಾದರೂ ಮಾತನಾಡಿದರೆ ಅದು ಮತ್ತೊಂದು ರೀತಿಯಲ್ಲಿ ಸುದ್ದಿ ಆಗಿತ್ತದೆ. ಅದು ಇಷ್ಟವಿಲ್ಲ. ಆದರೆ ಕೆಲವೊಮ್ಮೆ ಈ ಬಗ್ಗೆ ಪ್ರಶ್ನೆಗಳು ಎದುರಾಗಿತ್ತು. ಈ ಬಗ್ಗೆ ಕೇಳಬೇಡಿ ಎಂದು ಹೇಳಿದ್ದು ಇದೆ. ಆದರೂ ಮತ್ತೆ ಮತ್ತೆ ಕೇಳಿ ಅದನ್ನು ಕೆದಕುತ್ತಿದ್ದಾರೆ. ನಮ್ಮ ನಿರ್ಧಾರವನ್ನು ಯಾರು ಗೌರವಿಸಲಿಲ್ಲ. ಇನ್ನಾದರೂ ಫುಲ್‌ಸ್ಟಾರ್ ಇಡಿ. ಈ ಬಗ್ಗೆ ಬರೆಯಬೇಡಿ. ಜನ ಕೂಡ ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದಿದ್ದಾರೆ.
"ನಮ್ಮ ಜೀವನದಲ್ಲಿ ನಡೆದಿದ್ದು ಸಾಕಷ್ಟು ಜನರ ಜೀವನದಲ್ಲಿ ನಡೆದಿದೆ. ನನ್ನನ್ನು ಮಾತ್ರ ಯಾಕೆ ಕ್ರಿಮಿನಲ್ ತರ ನೋಡುತ್ತಿದ್ದೀರಾ? ನನಗೂ ಈ ವಿಚಾರದ ಬಗ್ಗೆ ಬಹಳ ಸೂಕ್ಷ್ಮವಾಗಿ ಅರಿವಿದೆ. ಕಾರಣ ನಾನು ಕೂಡ ಒಡೆದ ಕುಟುಂಬದಿಂದ ಬಂದವನು. ಆ ಅನುಭವ ಎಂಥದ್ದು ಎಂದು ನನಗೂ ಗೊತ್ತು. ನಾನು ಡಿವೋರ್ಸ್ ಪಡೆಯುತ್ತೇನೆ ಎಂದರೆ ಎಷ್ಟು ಯೋಚಿಸಿರುತ್ತೇನೆ ಗೊತ್ತಲ್ವಾ?" ಎಂದು ನಾಗಚೈತನ್ಯ ವಿವರಿಸಿದ್ದಾರೆ.
ಪಾಪ ಶೋಭಿತಾಗೂ ಇದರಿಂದ ಬಹಳ ನೋವಾಯಿತು. ಕಾರಣ ಆಕೆಗೂ ನನ್ನ ಡಿವೋರ್ಸ್‌ಗೂ ಸಂಬಂಧವಿಲ್ಲ. ಇನ್‌ಸ್ಟಾಗ್ರಾಮ್ ಚಾಟ್ ಮೂಲಕ ನಮ್ಮಿಬ್ಬರ ಪರಿಚಯ, ಮಾತು ನಡೆದು ಪ್ರೀತಿ ಶುರುವಾಯಿತು. ಆಕೆ ಇದನ್ನೆಲ್ಲಾ ಅರ್ಥ ಮಾಡಿಕೊಂಡಳು, ಆಕೆಯ ಬಗ್ಗೆ ಬಹಳ ಗೌರವ ಇದೆ ಎಂದು ಚೈತನ್ಯಾ ಹೇಳಿದ್ದಾರೆ.


Click it and Unblock the Notifications











