ಪತ್ನಿ ಕಿರುಕುಳ ತಾಳಲಾರದೇ ನೇಣು ಬಿಗಿದುಕೊಂಡ ನಟ; ಸೆಲ್ಫಿ ವೀಡಿಯೋ ವೈರಲ್
ನನ್ನ ಸಾವಿಗೆ ಪತ್ನಿಯ ಕಿರುಕುಳ ಕಾರಣ ಎಂದು ಆರೋಪಿಸಿ ವೀಡಿಯೋ ಮಾಡಿ ಜಾನಪದ ಕಲಾವಿದ ಗಡ್ಡಂ ರಾಜು ಆತ್ಮಹತ್ಯೆಗೆ ಶರಣಾಗಿದ್ದಾರೆ. ತೆಲುಗು ಜಾನಪದ ಲೋಕಕ್ಕೆ ಇದು ಆಘಾತ ತಂದಿದೆ. ನೇಣು ಬಿಗಿದುಕೊಳ್ಳುವ ಮುನ್ನ ಆತ ಮಾಡಿರುವ ಸೆಲ್ಫಿ ವೀಡಿಯೋ ಈಗ ವೈರಲ್ ಆಗುತ್ತಿದೆ.
ತೆಲಂಗಾಣ ರಾಜ್ಯದ ಪೆದ್ದಪಲ್ಲಿ ಜಿಲ್ಲೆಯ ಕಲ್ವಾ ಶ್ರೀರಾಂಪುರ ಮಂಡಲದ ಜಾಫರ್ ಖಾನ್ ಪೇಟೆಯಲ್ಲಿ ಈ ಘಟನೆ ನಡೆದಿದೆ. 6 ತಿಂಗಳ ಹಿಂದೆ ಗಡ್ಡಂ ರಾಜು ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆ ಆಗಿದ್ದರು. ದಾಂಪತ್ಯ ಕಲಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಪೆದ್ದ ಬತುಕಮ್ಮ ಹಬ್ಬಕ್ಕೆ ಪತ್ನಿಗಾಗಿ ಸೀರೆಯನ್ನು ತಂದಿದ್ದರು. ಅದೇ ಸೀರೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಈಗಾಗಲೇ ಅಂತ್ಯಕ್ರಿಯೆ ಕೂಡ ನಡೆದಿದೆ.

ಆತ್ಮಹತ್ಯೆಗೆ ಶರಣಾಗುವ ಮುನ್ನ ಗಡ್ಡಂ ರಾಜು ಮಾಡಿದ್ದ ಸೆಲ್ಫಿ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. "ಅಮ್ಮ, ಬಾಪು.. ನನಗೆ ಬದುಕಲು ಸಾಧ್ಯವಾಗುತ್ತಿಲ್ಲ.. ಮನೆಯಲ್ಲಿ ಪದೇ ಪದೆ ಜಗಳ ನಡೆಯುತ್ತಿದೆ. ನನಗೆ ಟಾರ್ಚರ್ ಅನಿಸುತ್ತಿದೆ. ನನ್ನ ಹೆಂಡತಿ ನಿಮ್ಮನ್ನು ಬೈಯುತ್ತಾಳೆ. ನನ್ನ ಪರಿಸ್ಥಿತಿ ಚೆನ್ನಾಗಿಲ್ಲ. ಅಣ್ಣ, ಅತ್ತಿಗೆ.. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಸೌಂದರ್ಯ, ನೀನು ಚೆನ್ನಾಗಿರು. ನಿನ್ನಂತಹರಿಗೆ ಗಂಡ ಸೆಟ್ ಆಗಲ್ಲ. ನಿನ್ನ ಮಾತುಗಳು ನನಗೆ ಮಾನಸಿಕ ಹಿಂಸೆ ನೀಡುತ್ತಿವೆ. ನನಗೆ ಜೀವನವೇ ಸಾಕಾಗಿದೆ" ಎಂದು ವೀಡಿಯೋದಲ್ಲಿ ಹೇಳಿದ್ದಾರೆ.
"ನನಗೆ ಬಟ್ಟೆ ಖರೀದಿಸಲು ನನ್ನ ಬಳಿ ಹಣವಿಲ್ಲ.. ಆದರೂ ನಾನು ನನ್ನ ಹೆಂಡತಿಗೆ ಹೊಸ ಸೀರೆ ಖರೀದಿಸಿದೆ.. ಅಮ್ಮ, ಬಾಪು, ಹುಷಾರು" ಎಂದು ರಾಜು ಕಣ್ಣೀರು ಹಾಕುತ್ತಾ ವೀಡಿಯೋದಲ್ಲಿ ಮಾತನಾಡಿದ್ದಾರೆ.
ಜಾನಪದ ಶೈಲಿಯ ಆಲ್ಬಮ್ ಸಾಂಗ್‌ಗಳಲ್ಲಿ ಹೆಜ್ಜೆ ಹಾಕಿ ಗಡ್ಡಂ ರಾಜು ಗಮನ ಸೆಳೆದಿದ್ದರು. ಲವ್ ಫೇಲ್ಯೂರ್ ಸಾಂಗ್‌ಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಹಾಡುಗಳು ಸಖತ್ ವೈರಲ್ ಆಗುತ್ತಿತ್ತು. 'ನಾ ಪ್ರಾಣಂಮೇ ನಿನ್ನ ಕೋರಿತೆ', 'ಗೊಪ್ಪೆಮ್ಮಾ', 'ಅರುಣ ಓ ಅಂದಾಲ ಆಮನಿ' ಸೇರಿ ಕೆಲ ಹಾಡುಗಳಿಗೆ ಗಡ್ಡಂ ರಾಜು ಹೆಜ್ಜೆ ಹಾಕಿದ್ದರು.
ವಿಶೇಷ ಸೂಚನೆ: ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777


Click it and Unblock the Notifications











